
ಹ್ಯಾಟ್ರಿಕ್ ಸೋಲಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್‌ಗಳ ಜಯ ಸಾಧಿಸಿ ಗೆಲುವಿನ ಖಾತೆ ತೆರೆದಿದೆ. ಸಂಜು ಸ್ಯಾಮ್ಸನ್ ಅವರ ಅಜೇಯ ಶತಕ (115*) ಹಾಗೂ ಜೇಮಿ ಓವರ್‌ಟನ್ ಅವರ ಮಾರಕ ಬೌಲಿಂಗ್ (4 ವಿಕೆಟ್) ಸಿಎಸ್‌ಕೆ ಗೆಲುವಿಗೆ ಕಾರಣವಾದರೆ, ಡೆಲ್ಲಿ ಪರ ಟ್ರಿಸ್ಟಿನ್ ಸ್ಟಬ್ಸ್ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು.
ಚೆನ್ನೈ: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಸಂಜು ಸ್ಯಾಮ್ಸನ್ ಸ್ಪೋಟಕ ಶತಕ, ಜೇಮಿ ಓವರ್‌ಟನ್ ಮಾರಕ ದಾಳಿಯ ನೆರವಿನಿಂದ 23 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದು ಸಿಎಸ್‌ಕೆ ಪಾಲಿಗೆ ಮೊದಲ ಗೆಲುವಾಗಿದ್ದರೇ, ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಎರಡನೇ ಸೋಲು ಎನಿಸಿಕೊಂಡಿತು.
ಗೆಲ್ಲಲು 213 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಪಥುಮ್ ನಿಸ್ಸಾಂಕ ಹಾಗೂ ಕೆ ಎಲ್ ರಾಹುಲ್ ಮೊದಲ 5 ಓವರ್‌ಗಳಲ್ಲಿ 61 ರನ್‌ಗಳ ಜತೆಯಾಟವಾಡಿದರು. ಆದರೆ ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಾಟಕೀಯ ಕುಸಿತ ಕಂಡಿತು. ಕನ್ನಡಿಗ ಕೆ ಎಲ್ ರಾಹುಲ್ 18 ರನ್ ಸಿಡಿಸಿ ಖಲೀಲ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 24 ಎಸೆತಗಳಲ್ಲಿ 41 ರನ್ ಸಿಡಿಸಿದ ಪಥುಮ್ ನಿಸ್ಸಾಂಕ ಅವರನ್ನು ಬಲಿ ಪಡೆಯುವಲ್ಲಿ ಅನ್ಸೂಲ್ ಕಂಬೋಜ್ ಯಶಸ್ವಿಯಾದರು.
ಇನ್ನು ನಾಯಕ ಅಕ್ಷರ್ ಪಟೇಲ್(1) ಹಾಗೂ ಸಮೀರ್ ರಿಜ್ವಿ(6)ಯನ್ನು ಒಂದಂಕಿ ಮೊತ್ತಕ್ಕೆ ಬಲಿ ಪಡೆಯುವಲ್ಲಿ ನೀಳಕಾಯದ ವೇಗಿ ಜೇಮಿ ಓವರ್‌ಟನ್ ಯಶಸ್ವಿಯಾದರು. ಇನ್ನು ಡೇವಿಡ್ ಮಿಲ್ಲರ್ ಬ್ಯಾಟಿಂಗ್ ಕೇವಲ 17 ರನ್‌ಗಳಿಗೆ ಸೀಮಿತವಾಯಿತು.
ಟ್ರಿಸ್ಟಿನ್ ಸ್ಟಬ್ಸ್ ಏಕಾಂಗಿ ಹೋರಾಟ ವ್ಯರ್ಥ:
ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಟ್ರಿಸ್ಟಿನ್ ಸ್ಟಬ್ಸ್ ಮಿಂಚಿನ ಬ್ಯಾಟಿಂಗ್ ನಡೆಸಿದರು. ಸ್ಟಬ್ಸ್ ಕೇವಲ 38 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 60 ರನ್ ಸಿಡಿಸಿದರು. ಸ್ಟಬ್ಸ್ ಇರುವವರೆಗೂ ಡೆಲ್ಲಿ ಪಾಳಯದಲ್ಲಿ ಗೆಲುವಿನ ಆಸೆ ಜೀವಂತವಾಗಿತ್ತು. ಆದರೆ 19ನೇ ಓವರ್‌ನಲ್ಲಿ ಜೇಮಿ ಓವರ್‌ಟನ್, ಸ್ಟಬ್ಸ್ ವಿಕೆಟ್ ಕಬಳಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವನ್ನು ಖಚಿತಪಡಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಮಿಂಚಿನ ದಾಳಿ ನಡೆಸಿದ ಜೇಮಿ ಓವರ್‌ಟನ್ ಕೇವಲ 18 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಇನ್ನುಳಿದಂತೆ ಅನ್ಸೂಲ್ ಕಂಬೋಜ್ 2, ಖಲೀಲ್ ಅಹಮದ್, ಗುರ್ಜಪನೀತ್ ಸಿಂಗ್ ಹಾಗೂ ನೂರ್ ಅಹಮದ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಸಂಜು ಶತಕ, ಸಿಎಸ್‌ಕೆ ಬೃಹತ್ ಮೊತ್ತ
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಲಿಳಿದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಬಾರಿಗೆ ಈ ಸೀಸನ್ ಐಪಿಎಲ್‌ನಲ್ಲಿ ಮೊದಲ ವಿಕೆಟ್‌ಗೆ 50+ ರನ್ ಆರಂಭಿಕ ಜತೆಯಾಟವಾಡಿತು. ಮೊದಲ ವಿಕೆಟ್‌ಗೆ ಋತುರಾಜ್ ಗಾಯಕ್ವಾಡ್(15) ಸಂಜು ಸ್ಯಾಮ್ಸನ್ 62 ರನ್‌ಗಳ ಜತೆಯಾಟವಾಡಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಹಾಗೂ ಆಯುಷ್ ಮಾಥ್ರೆ ಜೋಡಿ ಕೇವಲ 68 ಎಸೆತಗಳಲ್ಲಿ 113 ರನ್‌ಗಳ ಜತೆಯಾಟವಾಡಿತು.
ಮೊದಲ ಮೂರು ಪಂದ್ಯಗಳಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದ ಸಂಜು ಸ್ಯಾಮ್ಸನ್, ಸಿಎಸ್‌ಕೆ ಪರ ತಾವಾಡಿದ ನಾಲ್ಕನೇ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಸಂಜು ಸ್ಯಾಮ್ಸನ್ 56 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 115 ರನ್ ಸಿಡಿಸಿದರು. ಇದು ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ ಬಾರಿಸಿದ ನಾಲ್ಕನೇ ಶತಕ ಎನಿಸಿಕೊಂಡಿತು.
ಇನ್ನು ಮತ್ತೊಂದು ತುದಿಯಲ್ಲಿ ಸಂಜುಗೆ ಉತ್ತಮ ಸಾಥ್ ನೀಡಿದ ಆಯುಷ್ ಮಾಥ್ರೆ 59 ರನ್ ಸಿಡಿಸಿದರೆ, ಶಿವಂ ದುಬೆ ಕೊನೆಯಲ್ಲಿ ಚುರುಕಿನ 20 ರನ್ ಸಿಡಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್ ಕಳೆದುಕೊಂಡು 212 ರನ್ ಕಲೆಹಾಕಿತು.