
ಬಿಸಿಸಿಐ 2026ರ ಐಪಿಎಲ್‌ನ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಉದ್ಘಾಟನಾ ಪಂದ್ಯವು ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವೆ ನಡೆಯಲಿದ್ದು, ವಿಧಾನಸಭಾ ಚುನಾವಣೆಗಳ ಕಾರಣದಿಂದಾಗಿ ಪೂರ್ಣ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು.
ನವದೆಹಲಿ (ಮಾ.11): ಕ್ರಿಕೆಟ್ ಪ್ರೇಮಿಗಳ ಕುತೂಹಲಕ್ಕೆ ತೆರೆಬಿದ್ದಿದೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬಿಡುಗಡೆ ಮಾಡಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾರ್ಚ್ 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಎದುರಿಸುವ ಮೂಲಕ ಟೂರ್ನಿಗೆ ಚಾಲನೆ ನೀಡಲಿದೆ. ಅದರೊಂದಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯುವ ಬಗ್ಗೆ ಇದ್ದ ಗೊಂದಲಗಳಿಗೆ ಅಧಿಕೃತವಾಗಿ ತೆರೆಬಿದ್ದಂತಾಗಿದೆ.
ಮೊದಲ 20 ದಿನಗಳ ವೇಳಾಪಟ್ಟಿ ಮಾತ್ರ ಬಿಡುಗಡೆ
ದೇಶದ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಬಿಸಿಸಿಐ ಸದ್ಯಕ್ಕೆ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿದೆ. ಚುನಾವಣಾ ದಿನಾಂಕಗಳು ಘೋಷಣೆಯಾದ ನಂತರ ಟೂರ್ನಿಯ ಉಳಿದ ಪಂದ್ಯಗಳ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಹತ್ತು ನಗರಗಳಲ್ಲಿ 20 ಪಂದ್ಯಗಳ ಅಬ್ಬರ
ಟೂರ್ನಿಯ ಮೊದಲ ಹಂತದಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿದ್ದು, ಬೆಂಗಳೂರು, ಮುಂಬೈ, ಗುವಾಹಟಿ, ನ್ಯೂ ಚಂಡೀಗಢ, ಲಕ್ನೋ, ಕೋಲ್ಕತ್ತಾ, ಚೆನ್ನೈ, ದೆಹಲಿ, ಅಹಮದಾಬಾದ್ ಮತ್ತು ಹೈದರಾಬಾದ್ ಸೇರಿದಂತೆ 10 ವೇದಿಕೆಗಳಲ್ಲಿ ಪಂದ್ಯಗಳು ಜರುಗಲಿವೆ.
ಬೆಂಗಳೂರು ಪಂದ್ಯಗಳಿಗೆ ಮಾರ್ಚ್ 13ರ ಗ್ರೀನ್ ಸಿಗ್ನಲ್ ಅಗತ್ಯ
ಬೆಂಗಳೂರಿನಲ್ಲಿ ಪಂದ್ಯಗಳನ್ನು ನಡೆಸಲು ಕರ್ನಾಟಕ ಸರ್ಕಾರ ರಚಿಸಿರುವ ತಜ್ಞರ ಸಮಿತಿಯ ಅನುಮತಿ ಅತ್ಯಗತ್ಯವಾಗಿದೆ. ಮಾರ್ಚ್ 13 ರಂದು ಸಮಿತಿಯು ಚಿನ್ನಸ್ವಾಮಿ ಕ್ರೀಡಾಂಗಣದ ಪರಿಶೀಲನೆ ನಡೆಸಲಿದೆ. ಆ ಬಳಿಕವೇ ಮ್ಯಾಚ್‌ಗೆ ಅನುಮತಿ ಸಿಗಲಿದೆ. ಅಂದು ಪಂದ್ಯದ ದಿನದ ಸಿದ್ಧತೆಗಳ ಬಗ್ಗೆ ಸಂಪೂರ್ಣ ‘ಮಾಕ್ ಡೆಮೊನ್ ಸ್ಟ್ರೇಷನ್’ (ಪೂರ್ವಾಭ್ಯಾಸ) ನಡೆಯಲಿದ್ದು, ಕ್ರೀಡಾಂಗಣದ ಸನ್ನದ್ಧತೆಯನ್ನು ಪರಿಶೀಲಿಸಿದ ನಂತರವೇ ಅಂತಿಮ ಅನುಮತಿ ಸಿಗಲಿದೆ.
ಡಬಲ್ ಹೆಡರ್ ಪಂದ್ಯಗಳ ಸಮಯ
ಮೊದಲ 20 ದಿನಗಳಲ್ಲಿ ಒಟ್ಟು ನಾಲ್ಕು ‘ಡಬಲ್ ಹೆಡರ್’ (ದಿನಕ್ಕೆ ಎರಡು ಪಂದ್ಯ) ಪಂದ್ಯಗಳು ನಡೆಯಲಿವೆ. ಮಧ್ಯಾಹ್ನದ ಪಂದ್ಯ ಎಂದಿನಂತೆ 3.30ಕ್ಕೆ ನಡೆಯಲಿದ್ದರೆ, ಸಂಜೆಯ ಪಂದ್ಯ 7.30ಕ್ಕೆ ನಡೆಯಲಿದೆ. ಸೀಸನ್‌ನ ಮೊದಲ ಡಬಲ್ ಹೆಡರ್ ಏಪ್ರಿಲ್ 4 ರಂದು ನಡೆಯಲಿದ್ದು, ಮಧ್ಯಾಹ್ನ ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ಹಾಗೂ ಸಂಜೆ ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್ ಪಂದ್ಯಗಳು ಜರುಗಲಿವೆ.
ತಂಡಗಳ ‘ಹೋಮ್ ಗ್ರೌಂಡ್’ ಬದಲಾವಣೆ
ಕೆಲವು ತಂಡಗಳು ಈ ಬಾರಿ ತಮ್ಮ ತವರಿನ ಪಂದ್ಯಗಳನ್ನು ಬೇರೆ ನಗರಗಳಲ್ಲಿಯೂ ಆಡಲಿವೆ. ರಾಜಸ್ಥಾನ್ ರಾಯಲ್ಸ್ ತಂಡವು ಗುವಾಹಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳಿಗೆ ಆತಿಥ್ಯ ವಹಿಸಲಿದೆ. ರಾಜಸ್ಥಾನ ರಾಯಲ್ಸ್‌ನ 3 ಪಂದ್ಯ ಗುವಾಹಟಿಯಲ್ಲಿ ನಡೆಯಲಿದ್ದರೆ, 4 ಪಂದ್ಯ ಜೈಪುರದಲ್ಲಿ ನಡೆಯಲಿದೆ. ಇನ್ನು ಆರ್‌ಸಿಬಿಯ ಐದು ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ರಾಯ್‌ಪುರದಲ್ಲಿ 2 ಪಂದ್ಯಗಳನ್ನು ಆಡಲಿದೆ. ಪಂಜಾಬ್ ಕಿಂಗ್ಸ್ ತಂಡ ನ್ಯೂ ಚಂಡೀಗಢದಲ್ಲಿ 4 ಪಂದ್ಯ ಮತ್ತು ಧರ್ಮಶಾಲಾದಲ್ಲಿ 3 ಪಂದ್ಯಗಳನ್ನು ಆಡಲಿದೆ.