
ಬಿಜೆಪಿ ಸರ್ಕಾರಕ್ಕಿಂತ ಸಿದ್ದರಾಮಯ್ಯ ಸರ್ಕಾರದಲ್ಲಿ ಹೆಚ್ಚು ಭ್ರಷ್ಟಾಚಾರವಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆರೋಪಿಸಿದ್ದಾರೆ. ರಾಜ್ಯಾದ್ಯಂತ 37 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಹಣ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ಮಾರ್ಚ್ 5 ರಂದು ಬೃಹತ್ ಹೋರಾಟ ಎಂದಿದ್ದಾರೆ
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು : ಹಿಂದಿನ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಭಾರೀ ಭ್ರಷ್ಟಾಚಾರವಿದೆ ಎಂದು ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಭಾರೀ ಭ್ರಷ್ಟಾಚಾರವಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆಕ್ರೋಶ ಹೊರಹಾಕಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ನಮ್ಮ ಸರ್ಕಾರ ಬಂದ್ರೆ ಎನ್ಓಸಿಗೆ ಹಣ ತೆಗೆದುಕೊಳ್ಳಲ್ಲ ಅಂತ ಸಿದ್ದರಾಮಯ್ಯನವರು ಹೇಳಿದ್ರು. ಆದರೆ ಎಲ್ಲಾ ಮಂತ್ರಿಗಳು ತೆಗೆದುಕೊಳ್ಳುತ್ತಿದ್ದಾರೆ. ಕೆಲವು ಮಂತ್ರಿಗಳು ಮಧ್ಯವರ್ತಿಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ವಸತಿ ಮತ್ತು ನಗರಾಭಿವೃದ್ಧಿ ಸಚಿವರು ಮಧ್ಯವರ್ತಿಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಎಂಜಿನಿಯರ್ ಗಳ ಕಚೇರಿಯಲ್ಲಿ ಮಧ್ಯವರ್ತಿಗಳನ್ನು ಇಟ್ಟುಕೊಂಡಿದ್ದಾರೆ. ಇಂತಹ ಸ್ಥಿತಿಯನ್ನು ಇತಿಹಾಸದಲ್ಲಿಯೇ ನಾನು ನೋಡಿಲ್ಲ. ನಮ್ಮ ಹೋರಾಟದ ಫಲವಾಗಿ ಸಿದ್ದರಾಮಯ್ಯನವರು ಸಿಎಂ ಆದರು. ಅವರ ಮೇಲೆ ಸಾಕಷ್ಟು ನಿರೀಕ್ಷೆಯಿತ್ತು. ಅವರು ಸಿಎಂ ಆಗಿ ಎರಡುವರೆ ವರ್ಷ ಕಳೆದುಹೋಗಿದೆ. ಆದರೆ ಗುತ್ತಿಗೆದಾರರಿಗೆ ಯಾವುದೇ ಅನುಕೂಲ ಆಗಿಲ್ಲ, ಗುತ್ತಿಗೆದಾರರು ಕಷ್ಟ ಕಾಲದಲ್ಲಿ ಕೆಲಸ ಮಾಡಿರುತ್ತಾರೆ. ಆದರೆ ಇದುವರೆಗೆ ಹಣ ಬಿಡುಗಡೆ ಆಗಿಲ್ಲ.
ಒಟ್ಟು 37 ಸಾವಿರ ಕೋಟಿ ಬಾಕಿ
ರಾಜ್ಯದಲ್ಲಿ ಎಲ್ಲಾ ಇಲಾಖೆಗಳಿಂದ ಒಟ್ಟು 37 ಸಾವಿರ ಕೋಟಿ ಬಾಕಿ ಇದೆ. ಕೊಡಗಿನಲ್ಲಿ ಪ್ರವಾಹದ ಸಂದರ್ಭದಲ್ಲಿ ಮಾಡಿದ್ದಂತಹ ಕೆಲಸಗಳ 7 ಕೋಟಿ ರೂಪಾಯಿ ಇನ್ನೂ ಬಾಕಿ ಉಳಿಸಿಕೊಂಡಿದೆ. ಈಗ ಕೆಲಸ ಮಾಡಿರುವ ಕಾಮಗಾರಿಗಳ 180 ಕೋಟಿ ರೂಪಾಯಿ ಬಾಕಿ ಇದೆ. ನಾವು ಹೋಗಿ ಮಾತನಾಡಿಸಲು ಹೋದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನೀನು ಬಿಡಯ್ಯ ದುಡ್ಡು ಕೇಳುವುದಕ್ಕೆ ಬರುತೀಯಾ ಅಂತಾರೆ. ಇದುವರೆಗೆ ನಾವು ನಮ್ಮ ಸಮಸ್ಯೆಗಳು ಸೇರಿದಂತೆ ಎಲ್ಲಾ ರೀತಿಯ ಮಾಹಿತಿಯನ್ನು ಒಳಗೊಂಡ 100 ಪುಟಗಳ ವರದಿಯನ್ನು ಸಿಎಸ್ ಗೆ ಕೊಟ್ಟಿದ್ದೇವೆ. ಆದರೆ ಏನು ಪ್ರಯೋಜನ ಆಗಿಲ್ಲ. ನಾಮಕಾವಸ್ಥೆಗೆ ಸಭೆ ಮಾಡುವ ಕೆಲಸ ಮಾಡುತ್ತಾರೆ. ಈ ಸರ್ಕಾರದಿಂದ ನಮಗೆ ಏನು ಪ್ರಯೋಜನ ಆಗುತ್ತಿಲ್ಲ.
ಮಾರ್ಚ್ 5 ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ
ಮಾರ್ಚ್ 5 ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಲಿದ್ದೇವೆ. ಅಂದು ಇಡೀ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳ ಕೆಲಸಗಳನ್ನು ನಿಲ್ಲಿಸಿ ಹೋರಾಟ ಮಾಡಲಿದ್ದೇವೆ ಎಂದಿದ್ದಾರೆ. ಎಂಸಿಎಚ್ ಕೆಲಸ ಮಾಡುತ್ತಿರುವವರೆಲ್ಲಾ ಹೊರ ರಾಜ್ಯದವರು. ಇಂತಹವುಗಳ ವಿರುದ್ಧ ನಮ್ಮ ಹೋರಾಟ ನಡೆಯುತ್ತೆ. ಹತ್ತು ವರ್ಷಕ್ಕೆ ರಿನೀವಲ್ ಮಾಡಿ ಅಂತ ಹಲವು ಸಮಯದಿಂದ ಕೇಳುತ್ತಿದ್ದೇವೆ. ಆದರೂ ಅದನ್ನು ಮಾಡುತ್ತಿಲ್ಲ. ಜಿಎಸ್ ಟಿ ಸಾಕಷ್ಟು ವ್ಯತ್ಯಾಸ ಆಗಿದೆ ಅದನ್ನು ಸರಿ ಮಾಡಿಲ್ಲ ಮಡಿಕೇರಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಮೂಲಕ ರಾಜ್ಯದಲ್ಲಿ ದೊಡ್ಡ ಭ್ರಷ್ಟಾಚಾರವಿದೆ ಎಂದು ಹೇಳಿದ್ದಾರೆ.