
ಇರಾನ್‌ನ ಅಣ್ವಸ್ತ್ರ ಮತ್ತು ಕ್ಷಿಪಣಿ ಸಾಮರ್ಥ್ಯವನ್ನು ನಾಶಪಡಿಸುವುದೇ ‘ಆಪರೇಷನ್ ಎಪಿಕ್ ಫ್ಯೂರಿ’ಯ ಉದ್ದೇಶ ಎಂದು ಅಮೆರಿಕ ವಿಶ್ವಸಂಸ್ಥೆಯಲ್ಲಿ ಹೇಳಿದೆ. ಈ ಸೇನಾ ಕಾರ್ಯಾಚರಣೆ ಕಾನೂನುಬದ್ಧವಾಗಿದೆ ಎಂದು ಯುಎಸ್ ರಾಯಭಾರಿ ಮೈಕ್ ವಾಲ್ಟ್ಜ್ ತಿಳಿಸಿದ್ದಾರೆ.
ನ್ಯೂಯಾರ್ಕ್: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿರುವ ‘ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆಯನ್ನು ಅಮೆರಿಕ ಬಲವಾಗಿ ಸಮರ್ಥಿಸಿಕೊಂಡಿದೆ. ಇರಾನ್‌ನ ಅಣ್ವಸ್ತ್ರ ಮತ್ತು ಕ್ಷಿಪಣಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸುವುದೇ ಈ ದಾಳಿಯ ಉದ್ದೇಶ ಎಂದು ಅಮೆರಿಕ ವಿಶ್ವಸಂಸ್ಥೆಯಲ್ಲಿ ಸ್ಪಷ್ಟಪಡಿಸಿದೆ.
“ಭಯೋತ್ಪಾದಕ ಸಂಘಟನೆಗಳ ಜೊತೆ ಸೇರಿ ಇರಾನ್ ದಶಕಗಳಿಂದ ಈ ಭಾಗದಲ್ಲಿ ಹಿಂಸಾಚಾರ ನಡೆಸುತ್ತಿದೆ. ಇದನ್ನು ಯಾವುದೇ ಜವಾಬ್ದಾರಿಯುತ ದೇಶ ಕಡೆಗಣಿಸಲು ಸಾಧ್ಯವಿಲ್ಲ. ಇರಾನ್‌ನ ಅಣ್ವಸ್ತ್ರ ಸಾಮರ್ಥ್ಯವನ್ನು ಇಲ್ಲವಾಗಿಸುವುದು ಜಾಗತಿಕ ಭದ್ರತೆಗೆ ಅನಿವಾರ್ಯ. ಈ ಸೇನಾ ಕ್ರಮ ಕಾನೂನುಬದ್ಧವಾಗಿದೆ,” ಎಂದು ಯುಎಸ್ ರಾಯಭಾರಿ ಮೈಕ್ ವಾಲ್ಟ್ಜ್ ಪ್ರತಿಪಾದಿಸಿದ್ದಾರೆ.
ಮಾನವೀಯತೆ ವಿರುದ್ಧದ ಅಪರಾಧ ಎಂದ ಇರಾನ್
ಆದರೆ, ಅಮೆರಿಕ-ಇಸ್ರೇಲ್ ದಾಳಿಯನ್ನು ಇರಾನ್ ‘ಮಾನವೀಯತೆ ವಿರುದ್ಧದ ಅಪರಾಧ’ ಎಂದು ಕರೆದಿದೆ. “ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿ ಕಾನೂನು ಉಲ್ಲಂಘಿಸಲಾಗಿದೆ. ಈ ದಾಳಿಯಲ್ಲಿ ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ,” ಎಂದು ಇರಾನ್ ವಿಶ್ವಸಂಸ್ಥೆಯಲ್ಲಿ ಆರೋಪಿಸಿದೆ.
“ಇದು ಯುದ್ಧಾಪರಾಧವಾಗಿದ್ದು, ಇದಕ್ಕೆ ಅಮೆರಿಕ ಮತ್ತು ಇಸ್ರೇಲ್ ನೇರ ಹೊಣೆ. ನಮ್ಮ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಸುಳ್ಳು ಪ್ರಚಾರ ಮಾಡುತ್ತಿವೆ,” ಎಂದೂ ಇರಾನ್ ದೂರಿದೆ.
ಇರಾನ್‌ನ ಸಾರ್ವಭೌಮತ್ವದ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿರುವ ಈ ಜಂಟಿ ಸೇನಾ ಕಾರ್ಯಾಚರಣೆಯನ್ನು ರಷ್ಯಾ ಮತ್ತು ಚೀನಾ ತೀವ್ರವಾಗಿ ಖಂಡಿಸಿವೆ. “ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿರುವಾಗಲೇ ಈ ರೀತಿ ದಾಳಿ ನಡೆಸಿರುವುದು ಒಪ್ಪುವಂತಹದ್ದಲ್ಲ. ಇದು ಈ ವಲಯವನ್ನು ದೊಡ್ಡ ದುರಂತದತ್ತ ಕೊಂಡೊಯ್ಯಲಿದೆ,” ಎಂದು ಎರಡೂ ದೇಶಗಳು ಎಚ್ಚರಿಸಿವೆ.
ಇದನ್ನೂ ಓದಿ: ಅಯತೊಲ್ಲಾ ಅಲಿ ಖಮೇನಿ ಸತ್ತಿದ್ದು ನಿಜ, ಟ್ರಂಪ್ ಸ್ಫೋಟಕ ಹೇಳಿಕೆ! ಇರಾನ್‌ನ ಟಾಪ್ ಲೀಡರ್‌ಗಳೂ ಖಲಾಸ್!
ಇರಾನ್‌ಗೆ ರಷ್ಯಾ ಸಂಪೂರ್ಣ ಬೆಂಬಲ
ರಷ್ಯಾ ಇರಾನ್‌ಗೆ ಸಂಪೂರ್ಣ ಬೆಂಬಲ ಘೋಷಿಸಿದೆ. “ಮಾತುಕತೆ ನಡೆಯುವಾಗ ದಾಳಿ ಮಾಡಿದ್ದು ಅಂತರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆ. ಯುರೋಪಿಯನ್ ದೇಶಗಳ ನಿಲುವು ಕಪಟತನದಿಂದ ಕೂಡಿದೆ. ಅಮೆರಿಕ ಮತ್ತು ಇಸ್ರೇಲ್ ತಕ್ಷಣವೇ ದಾಳಿಯನ್ನು ನಿಲ್ಲಿಸಬೇಕು,” ಎಂದು ರಷ್ಯಾ ಆಗ್ರಹಿಸಿದೆ.
“ರಾಜತಾಂತ್ರಿಕ ಮಾತುಕತೆಯ ಹೆಸರಿನಲ್ಲೇ ಇಸ್ರೇಲ್ ಮತ್ತು ಅಮೆರಿಕ ಈ ದಾಳಿಗೆ ಸಂಚು ರೂಪಿಸಿವೆ,” ಎಂದು ರಷ್ಯಾ ಆರೋಪಿಸಿದೆ. “ಅಣು ಸ್ಥಾವರಗಳ ಮೇಲೆ ದಾಳಿ ನಡೆಸಿದರೆ ವಿನಾಶಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ,” ಎಂದೂ ರಷ್ಯಾ ಎಚ್ಚರಿಸಿದೆ.
ಇದನ್ನೂ ಓದಿ: ಕಳೆದ 5 ದಶಕಗಳಿಂದ ಇರಾನ್ – ಅಮೆರಿಕ – ಇಸ್ರೇಲ್ ಸಂಘರ್ಷ!
Scroll to load tweet…