ಮುಂಬೈ: 3 ದಿನಗಳ ಅಂತರದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡೂ ತಂಡಗಳು ಗುವಾಹಟಿಗೆ ತೆರಳಿ, ವೈಭವ್ ಸೂರ್ಯವಂಶಿ ಕೈಯಲ್ಲಿ ಚಚ್ಚಿಸಿಕೊಂಡು ವಾಪಸಾಗಿವೆ. ಈ ಎರಡು ತಂಡಗಳು ಭಾನುವಾರ ಸಂಜೆಯ ಪಂದ್ಯದಲ್ಲಿ ಪರಸ್ಪರ ಎದುರಾಗಲಿದ್ದು, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎದುರಾದ ಆಘಾತದಿಂದ ಹೊರಬರಲು ಸೆಣಸಲಿವೆ.

ತವರಿನಲ್ಲಿ ಎರಡು ಅಮೋಘ ಗೆಲುವುಗಳೊಂದಿಗೆ ಟೂರ್ನಿಯನ್ನು ಆರಂಭಿಸಿದ್ದ ಆರ್‌ಸಿಬಿಗೆ, ರಾಜಸ್ಥಾನ ವಿರುದ್ಧ ಎದುರಾದ ಸೋಲು ಎದುರಾದರೂ ಕೆಲ ಧನಾತ್ಮಕ ವಿಚಾರಗಳು ಮನವರಿಕೆ ಆಗಿರಲಿದೆ. 14ನೇ ಓವರಲ್ಲಿ 125ಕ್ಕೆ 6 ವಿಕೆಟ್ ಕಳೆದುಕೊಂಡರೂ ತಂಡ 200 ರನ್ ದಾಟಿತು. ಇದು ತಂಡದ ಆತ್ಮವಿಶ್ವಾಸ ಹೆಚ್ಚಿಸಿರಲಿದೆ. ಇನ್ನು, ಜೋಶ್ ಹೇಜಲ್‌ವುಡ್ ದುಬಾರಿಯಾದರೂ ಅವರು ಆಡಲು ಫಿಟ್ ಆಗಿದ್ದಾರೆ ಎನ್ನುವುದು ಆರ್‌ಸಿಬಿಯನ್ನು ನಿರಾಳವಾಗಿಸಿದೆ.

ತಂಡದಲ್ಲೇನಾದರೂ ಬದಲಾವಣೆಗೆ ಆರ್‌ಸಿಬಿ ಇಚ್ಛಿಸಿದರೆ, ವೇಗಿ ಅಭಿನಂದನ್ ಸಿಂಗ್ ಬದಲಿಗೆ ಮಂಗೇಶ್ ಯಾದವ್‌ಗೆ ಅವಕಾಶ ಸಿಗಬಹುದು.

ಮುಂಬೈಗೆ ಹಲವು ಸಮಸ್ಯೆ:

ಮುಂಬೈ ಇಂಡಿಯನ್ಸ್ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ತಂಡದ ಬೌಲರ್‌ಗಳು ವಿಕೆಟ್ ಹಾಗೂ ಎಕಾನಮಿ ರೇಟ್ ಎರಡರಲ್ಲೂ ಹಿಂದುಳಿದಿದ್ದಾರೆ. 3 ಪಂದ್ಯಗಳಲ್ಲಿ ಮುಂಬೈ ಬೌಲರ್‌ಗಳು ಒಟ್ಟಾರೆ 10 ವಿಕೆಟ್ ಮಾತ್ರ ಕಬಳಿಸಲು ಯಶಸ್ವಿಯಾದರೆ, ಬೌಲ್ಟ್ ಸೇರಿ ನಾಲ್ವರು 12ಕ್ಕೂ ಹೆಚ್ಚಿನ ಎಕಾನಮಿ ರೇಟ್‌ನಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ತಂಡ ಬೂಮ್ರಾ ಮೇಲೆ ಅತಿಯಾಗಿ ಅವಲಂಬಿತಗೊಂಡಿದೆ.

ಮುಂಬೈನ ಬ್ಯಾಟಿಂಗ್ ವಿಭಾಗ ಕೆಲ ಬಲಿಷ್ಠ ಹೆಸರುಗಳನ್ನು ಹೊಂದಿದ್ದರೂ, ಬೇರೆ ತಂಡಗಳಂತೆ ಹೊಸ ಪ್ರತಿಭೆಗಳು ತಂಡದಲ್ಲಿಲ್ಲ. ಇಂದಿನ ಟಿ20 ಕ್ರಿಕೆಟ್‌ಗೆ ಬೇಕಿರುವ ಬ್ಯಾಟಿಂಗ್ ಕೌಶಲ್ಯಗಳ ಕೊರತೆ ತಂಡದ ಬ್ಯಾಟರ್‌ಗಳಲ್ಲಿ ಎದ್ದು ಕಾಣುತ್ತಿದೆ. ಆದರೆ, ನೀವು ಬಹಳ ವರ್ಷಗಳಿಂದ ಐಪಿಎಲ್ ನೋಡುತ್ತಿದ್ದರೆ ಯಾವುದೇ ಅನುಮಾನಗಳನ್ನು ಸುಳ್ಳಾಗಿಸಲು ಮುಂಬೈಗೆ ಹೆಚ್ಚಿನ ಸಮಯ ಬೇಕಿಲ್ಲ ಎನ್ನುವುದು ತಿಳಿದೇ ಇರುತ್ತದೆ. ಹೀಗಾಗಿ, ಯಾವಾಗ ಬೇಕಿದ್ದರೂ ಮುಂಬೈ ಪುಟಿದೇಳಬಹುದು.

ಮಿಚೆಲ್ ಸ್ಯಾಂಟ್ನರ್ ಫಿಟ್ ಆಗಿದ್ದು ಈ ಪಂದ್ಯದಲ್ಲಿ ಗಜನ್‌ಫರ್ ಬದಲಿಗೆ ಆಡುವುದು ಬಹುತೇಕ ಖಚಿತ. ಒಂದು ವೇಳೆ ಟ್ರೆಂಟ್ ಬೌಲ್ಟ್‌ರನ್ನು ಹೊರಗಿಟ್ಟರೆ, ಕಾರ್ಬಿನ್ ಬಾಷ್‌ರನ್ನು ಆಡಿಸಬಹುದು.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್, ಶೆಫರ್ಡ್, ಕೃನಾಲ್, ಭುವನೇಶ್ವರ್, ಅಭಿನಂದನ್/ಮಂಗೇಶ್, ಹೇಜಲ್‌ವುಡ್, ಸುಯಶ್.

ಮುಂಬೈ: ರಿಕೆಲ್ಟನ್, ರೋಹಿತ್, ಸೂರ್ಯಕುಮಾರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ರುದರ್‌ಫೋರ್ಡ್, ಸ್ಯಾಂಟ್ನರ್, ಶಾರ್ದೂಲ್, ದೀಪಕ್, ಬೌಲ್ಟ್/ಬಾಷ್, ಬೂಮ್ರಾ.

ಪಿಚ್ ರಿಪೋರ್ಟ್

ವಾಂಖೇಡೆ ಕ್ರೀಡಾಂಗಣದ ಪಿಚ್‌ನಲ್ಲಿ ಟಾಸ್ ಗೆಲ್ಲುವವರು ಕಣ್ಮುಚ್ಚಿಕೊಂಡು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ. ಸಂಜೆ ಬಳಿಕ ಇಬ್ಬನಿ ಬೀಳುವ ಕಾರಣ ಬೌಲಿಂಗ್, ಫೀಲ್ಡಿಂಗ್ ಕಷ್ಟ. ಈ ಪಂದ್ಯಕ್ಕೆ ಆಯ್ಕೆ ಮಾಡಿರುವ ಪಿಚ್, ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಹೆಚ್ಚು. ರನ್ ಹೊಳೆ ನಿರೀಕ್ಷೆ ಮಾಡಬಹುದಾಗಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್‌ಸ್ಟಾರ್

ಮುಂಬೈ ವಿರುದ್ಧ ಕಳೆದ 5ರಲ್ಲಿ ಆರ್‌ಸಿಬಿಗೆ 3 ಪಂದ್ಯದಲ್ಲಿ ಜಯ

ಆರ್‌ಸಿಬಿ ವಿರುದ್ಧ ಮುಂಬೈ 21-14ರ ಗೆಲುವು-ಸೋಲಿನ ದಾಖಲೆ ಹೊಂದಿದ್ದರೂ ಕಳೆದ 5 ಪಂದ್ಯಗಳಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ. ಆರ್‌ಸಿಬಿ 3ರಲ್ಲಿ ಗೆದ್ದರೆ, ಮುಂಬೈನಲ್ಲಿ 2ರಲ್ಲಿ ಜಯಿಸಿದೆ.

Source link
ವೈಭವ್ ಸೂರ್ಯವಂಶಿ ಶಾಕಿಂದ ಹೊರಬರುವ ತವಕದಲ್ಲಿ ಆರ್‌ಸಿಬಿ, ಮುಂಬೈ! ವಾಂಖೆಡೆಯಲ್ಲಿಂದು ಹೈವೋಲ್ಟೇಜ್ ಮ್ಯಾಚ್