
ಮಧ್ಯಪ್ರಾಚ್ಯ ಯುದ್ಧದಿಂದ ಭಾರತದಲ್ಲಿ ಅನಿಲ ಕೊರತೆ ಮುಂದುವರಿದಿರುವ ನಡುವೆಯೇ, ಕೇಂದ್ರ ಸರ್ಕಾರವು ಹೋಟೆಲ್‌ಗಳೇ ಹೆಚ್ಚಾಗಿ ಬಳಸುವ ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಈಗಿನ ಶೇ.30ರಿಂದ ಶೇ.50ಕ್ಕೆ ಹೆಚ್ಚಿಸಿದೆ. ಈ ಮೂಲಕ ಗ್ಯಾಸ್ ಬಿಕ್ಕಟ್ಟನ್ನು ಕೊಂಚ ತಣಿಸಲು ಮುಂದಾಗಿದೆ.
ನವದೆಹಲಿ : ಮಧ್ಯಪ್ರಾಚ್ಯ ಯುದ್ಧದಿಂದ ಭಾರತದಲ್ಲಿ ಅನಿಲ ಕೊರತೆ ಮುಂದುವರಿದಿರುವ ನಡುವೆಯೇ, ಕೇಂದ್ರ ಸರ್ಕಾರವು ಹೋಟೆಲ್‌ಗಳೇ ಹೆಚ್ಚಾಗಿ ಬಳಸುವ ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಈಗಿನ ಶೇ.30ರಿಂದ ಶೇ.50ಕ್ಕೆ ಹೆಚ್ಚಿಸಿದೆ. ಈ ಮೂಲಕ ಗ್ಯಾಸ್ ಬಿಕ್ಕಟ್ಟನ್ನು ಕೊಂಚ ತಣಿಸಲು ಮುಂದಾಗಿದೆ.
ಆದರೆ ಇದಕ್ಕೆ ಕೆಲವು ಷರತ್ತು ವಿಧಿಸಿದೆ. ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ, ‘ತೈಲ ಕಂಪನಿಗಳಲ್ಲಿ ನೋಂದಣಿ ಮಾಡಿಕೊಂಡು ಪಿಎನ್‌ಜಿ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವವರಿಗೆ ಮಾತ್ರ ಇದು ಲಭ್ಯವಾಗಲಿದೆ’ ಎಂದು ಅದು ಸ್ಪಷ್ಟಪಡಿಸಿದೆ.
ಯುದ್ಧ ಆರಂಭದ ಬಳಿಕ ಕೇಂದ್ರ ಸರ್ಕಾರ, ವಾಣಿಜ್ಯ ಎಲ್‌ಪಿಜಿ ಪೂರೈಕೆ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿ, ಕೇವಲ ಗೃಹಬಳಕೆ ಎಲ್‌ಪಿಜಿಗೆ ಆದ್ಯತೆ ನೀಡಿತ್ತು. ನಂತರ ವಾಣಿಜ್ಯ ಎಲ್‌ಪಿಜಿ ಗ್ರಾಹಕರಿಗೆ ಯುದ್ಧ ಪೂರ್ವ ಸಂದರ್ಭದ ಶೇ.20ರಷ್ಟು ಪೂರೈಕೆ ಆರಂಭಿಸಿತ್ತು. ತರುವಾಯ, ಪಿಎನ್‌ಜಿ ಅಳವಡಿಕೆಗೆ ಉತ್ತೇಜಿಸುವ ರಾಜ್ಯಗಳಿಗೆ ಶೇ.10ರಷ್ಟು ಹೆಚ್ಚುವರಿ ಗ್ಯಾಸ್ ನೀಡುವುದಾಗಿಯೂ ಆಫರ್ ನೀಡಿತ್ತು. ಈ ಆಫರ್ ಅನ್ನು ಇದೀಗ ಮತ್ತಷ್ಟು ವಿಸ್ತರಿಸಿರುವ ಸರ್ಕಾರ, ಭವಿಷ್ಯದಲ್ಲಿ ಪಿಎನ್‌ಜಿ ಬಳಕೆಗೆ ಖಚಿತಪಡಿಸುವವರಿಗೆ ಗ್ಯಾಸ್ ಪೂರೈಕೆಯಲ್ಲಿ ಮತ್ತೆ ಶೇ.20ರಷ್ಟು ಹೆಚ್ಚಳದ ಘೋಷಣೆ ಮಾಡಿದೆ.
ಇದು ರೆಸ್ಟೋರೆಂಟ್, ಹೋಟೆಲ್, ಕೈಗಾರಿಕಾ ಕ್ಯಾಂಟೀನ್, ಆಹಾರ ಸಂಸ್ಕರಣಾ ಘಟಕ, ಸಮುದಾಯ ಅಡುಗೆಮನೆ, ಸಬ್ಸಿಡೈಸ್ಡ್ ಫುಡ್ ಔಟ್‌ಲೆಟ್ ಮುಂತಾದ ಮುಖ್ಯ ಕ್ಷೇತ್ರಗಳಿಗೆ ಅನ್ವಯವಾಗುತ್ತದೆ.
ಸುಗಮ:
ಈ ನಡುವೆ ದೇಶಾದ್ಯಂತ ಗೃಹ ಬಳಕೆಯ ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಎಲ್ಲೂ ಎಲ್‌ಪಿಜಿ ಕೊರತೆ ಕಂಡುಬಂದಿಲ್ಲ, ಎಲ್ಲೆಡೆ ಸಿಲಿಂಡರ್‌ಗಳ ಸಾಮಾನ್ಯ ಪೂರೈಕೆ ಮುಂದುವರೆದಿದೆ ಎಂದು ಸರ್ಕಾರ ಹೇಳಿದೆ.
ಕೇಂದ್ರದ ಹೊಸ ಕ್ರಮ
– ವಾಣಿಜ್ಯ ಎಲ್‌ಪಿಜಿ ಬಿಕ್ಕಟ್ಟು ಇತ್ಯರ್ಥಕ್ಕೆ ಕೇಂದ್ರದ ಕ್ರಮ
– ಹೋಟೆಲ್‌ಗಳ ಎಲ್‌ಪಿಜಿ ಹಂಚಿಕೆ ಶೇ.20ರಷ್ಟು ಹೆಚ್ಚಳ
– ಆದರೆ ಪಿಎನ್‌ಜಿ ಸಂಪರ್ಕಕ್ಕೆ ಅರ್ಜಿ ಹಾಕಬೇಕು ಎಂಬ ಷರತ್ತು
– ಈ ಮೂಲಕ ಸಿಲಿಂಡರ್ ಬದಲು ಪಿಎನ್‌ಜಿ ಬಳಕೆಗೆ ಉತ್ತೇಜನ