ಖ್ಯಾತ ನಟಿ ಐಶ್ವರ್ಯಾ ಭಾಸ್ಕರನ್ ಒಂದು ಕಾಲದಲ್ಲಿ ಮೋಹನ್‌ಲಾಲ್, ಮಮ್ಮುಟ್ಟಿ, ಸುರೇಶ್ ಗೋಪಿಯಂತಹ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡವರು. ಆದರೆ ಇತ್ತೀಚೆಗೆ ಜೀವನ ನಡೆಸಲು ಸೋಪು, ಕೇಕ್ ಮಾಡಿ ಮಾರಾಟ ಮಾಡುತ್ತಿದ್ದರು. ಈಗ ಮತ್ತೆ ನಟನೆಯತ್ತ ಮುಖ ಮಾಡಿರುವ ಐಶ್ವರ್ಯಾ, ತಮ್ಮ ಬದುಕಿನ ಅತ್ಯಂತ ಕಠಿಣ ದಿನಗಳಾಗಿದ್ದ ಮೆನೋಪಾಸ್ (ಮುಟ್ಟು ನಿಲ್ಲುವ ಸಮಯ) ಬಗ್ಗೆ ಮಾತನಾಡಿದ್ದಾರೆ.

ಆ ದಿನಗಳಲ್ಲಿ ತಾನು ಅನುಭವಿಸಿದ ನೋವು, ಸಂಕಟವನ್ನು ಅವರು ಒಂದು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ "ನನಗೆ ಈಗ ಮೆನೋಪಾಸ್ ಹಂತ ಮುಗಿದಿದೆ. ಆದರೆ ಆ ದಿನಗಳು ಒಂದು ದೊಡ್ಡ ಟ್ರಾಮಾ ಆಗಿತ್ತು. ಎಸಿ ರೂಮ್‌ನಲ್ಲಿದ್ದರೂ ಸಹಿಸಲಾಗದಷ್ಟು ಶೆಕೆ ಆಗುತ್ತಿತ್ತು. ಮೈಯೆಲ್ಲಾ, ಅದರಲ್ಲೂ ಮುಖ್ಯವಾಗಿ ಬೆನ್ನು ಪೂರ್ತಿ ಬೆವರುತ್ತಿತ್ತು. ನನಗೆ ಮುಂಚೆ ಪೀರಿಯಡ್ಸ್ ಟೈಮ್‌ನಲ್ಲಿ ನೋವೇ ಇರಲಿಲ್ಲ. ಆದರೆ 46-47ನೇ ವಯಸ್ಸಿನಲ್ಲಿ ಮೆನೋಪಾಸ್ ಶುರುವಾಯ್ತು. ಮೂರು ತಿಂಗಳಿಗೊಮ್ಮೆ ಪೀರಿಯಡ್ಸ್ ಆಗ್ತಿತ್ತು.

ಹಾಗಾಗಿ ಯಾವಾಗಲೂ ಪ್ಯಾಡ್ ಇಟ್ಟುಕೊಂಡೇ ಓಡಾಡಬೇಕಿತ್ತು. ಜೊತೆಗೆ ಸಖತ್ ಮೂಡ್ ಸ್ವಿಂಗ್ಸ್ ಇತ್ತು. ಇದ್ದಕ್ಕಿದ್ದಂತೆ ಖುಷಿ, ಕ್ಷಣದಲ್ಲೇ ಬೇಸರ, ಕೋಪ ಬರ್ತಿತ್ತು. ಕಾರಣವೇ ಇಲ್ಲದೆ ಅಳು ಬರುತ್ತಿತ್ತು. ಆಗ ನಾನು ಯೋಗಾಭ್ಯಾಸ ಶುರು ಮಾಡಿದೆ. 40 ದಿನ ಯೋಗ ಮಾಡಿದ ಮೇಲೆ ಓವರ್ ಬ್ಲೀಡಿಂಗ್ ಶುರುವಾಯ್ತು" ಎಂದು ಐಶ್ವರ್ಯಾ ಹೇಳಿದ್ದಾರೆ. "ಆಗ ನಾನೊಂದು ಶೂಟಿಂಗ್‌ಗೋಸ್ಕರ ಕೇರಳದಲ್ಲಿದ್ದೆ. ಬೆಡ್ ಪೂರ್ತಿ ರಕ್ತ. ಜೀವವೇ ಹೋಗುವಷ್ಟು ನೋವು. ನನ್ನ ಕೈಯಿಂದಲೇ ಗರ್ಭಕೋಶವನ್ನು ಕಿತ್ತು ಎಸೆದುಬಿಡೋಣ ಅನಿಸುತ್ತಿತ್ತು. ಅಷ್ಟೊಂದು ಹಿಂಸೆಯಾಗಿತ್ತು.

ಯೋಗ ಕ್ಲಾಸ್‌ಗೆ ನಾನು ಆಭಾರಿ

ಈ ಬಗ್ಗೆ ಅಮ್ಮನ ಹತ್ತಿರ ಹೇಳಿಕೊಂಡೆ. ಅವರು ಯೋಗ ಮುಂದುವರಿಸಲು ಸಲಹೆ ನೀಡಿದರು. ನಾನು ಅವರ ಮಾತು ಕೇಳಿದೆ. ಅದಾದ ನಂತರ ನನ್ನ ಮೆನೋಪಾಸ್ ಸಮಸ್ಯೆ ನಿಂತೇ ಹೋಯ್ತು. ಬೆವರು, ಶೆಕೆ, ಮೂಡ್ ಸ್ವಿಂಗ್ಸ್ ಯಾವುದೂ ಮತ್ತೆ ಬರಲಿಲ್ಲ. ಈಗ ನನ್ನ ದೇಹ ಮತ್ತು ಮನಸ್ಸು ಎರಡೂ ನಿರಾಳವಾಗಿದೆ. ನನ್ನ ಬಾಡಿ ಈಗ ನನ್ನ ಕಂಟ್ರೋಲ್‌ನಲ್ಲಿದೆ. ಇದಕ್ಕಾಗಿ ಸದ್ಗುರು ಅವರ ಯೋಗ ಕ್ಲಾಸ್‌ಗೆ ನಾನು ಆಭಾರಿ" ಎಂದು ಐಶ್ವರ್ಯಾ ತಮಿಳು ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Source link
ಗರ್ಭಕೋಶವನ್ನೇ ಕೈಯಿಂದ ಕಿತ್ತು ಬಿಸಾಕೋಣ ಅನಿಸಿತ್ತು: ನಟಿ ಐಶ್ವರ್ಯಾ ಭಾಸ್ಕರನ್ ನೋವಿನ ಮಾತು