
ಆಸ್ತಿ ಮನೆ ಇಲ್ಲ, ವಾಹನ ಇಲ್ಲ, ಕೈಯಲ್ಲಿದೆ 84 ರೂ, ವಿಧಾನಸಭೆ ಚುನಾವಣೆ ಅಚ್ಚರಿ ಅಭ್ಯರ್ಥಿ , ಎಟುಮಾನೂರು ಕ್ಷೇತ್ರದ ಅಭ್ಯರ್ಥಿ ಖಾತೆಯಲ್ಲಿ 40 ರೂಪಾಯಿ, ಕೈಯಲ್ಲಿ 44 ರೂಪಾಯಿ ಬಿಟ್ಟರೆ ಇನ್ಯಾವ ಆಸ್ತಿಯೂ ಇಲ್ಲ.
ತಿರುವನಂತಪುರಂ (ಏ.04) ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಕಾವು ಪಡೆದುಕೊಂಡಿದೆ. ಇದರ ನಡುವೆ 5 ರಾಜ್ಯಗಳ ಅಭ್ಯರ್ಥಿಗಳಲ್ಲಿ ಕೇರಳದ ಎಟುಮಾನೂರು ಕ್ಷೇತ್ರದ ಮಹಿಳಾ ಅಭ್ಯರ್ಥಿ ಅಶ್ನಾ ಥಂಪಿ ಅತೀ ಬಡವ ಅಭ್ಯರ್ಥಿಯಾಗಿದ್ದಾರೆ. ಆಸ್ತಿ ಇಲ್ಲ, ಮನೆ ಇಲ್ಲ, ಕೈಯಲ್ಲಿ ನಗದು 44 ರೂಪಾಯಿ ಇದ್ದರೆ, ಖಾತೆಯಲ್ಲಿ 40 ರೂಪಾಯಿ ಒಟ್ಟು 84 ರೂಪಾಯಿ ಹೊಂದಿದ್ದಾರೆ. ಕೇವಲ 26 ವರ್ಷದ ಯುವ ಅಭ್ಯರ್ಥಿ ಎಲ್ಲರಿಗಿಂತ ಭಿನ್ನವಾಗಿದ್ದಾರೆ.
ನಾಮಪತ್ರದ ಜೊತೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೋಟಿಗಟ್ಟಲೆ ಆಸ್ತಿ ವಿವರ ಇಲ್ಲ. ಕೈಯಲ್ಲಿರುವುದು ಬರೀ 84 ರೂಪಾಯಿ. ಸ್ವಂತ ಭೂಮಿ, ವಾಹನ, ಚಿನ್ನ, ಆದಾಯ ಯಾವುದೂ ಇಲ್ಲ. ಎಟುಮಾನೂರು ಕ್ಷೇತ್ರದ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಆಶ್ನಾ ಥಂಪಿ, ಹಣದ ಹೊಳೆ ಹರಿಸುವ ಚುನಾವಣಾ ಅಖಾಡದಲ್ಲಿ ಎಲ್ಲರಿಗಿಂತ ಭಿನ್ನವಾಗಿದ್ದಾರೆ.ಈ ವಿಧಾನಸಭಾ ಚುನಾವಣೆಯಲ್ಲಿ 26 ವರ್ಷದ ಆಶ್ನಾ, ಅತ್ಯಂತ ಕಡಿಮೆ ಆಸ್ತಿ ಹೊಂದಿರುವ ಅಭ್ಯರ್ಥಿ.
ಹೋರಾಟದ ಕಣದಲ್ಲಿ ಸದಾ ಸಕ್ರಿಯರಾಗಿರುವ ಆಶ್ನಾಗೆ, ಜನಸೇವೆ ಮಾಡಲು ಹಣಕ್ಕಿಂತ ಹೆಚ್ಚಾಗಿ ಜನರಿಗೆ ಸಹಾಯ ಮಾಡುವ ಮನಸ್ಸಿರಬೇಕು ಎಂಬ ಆತ್ಮವಿಶ್ವಾಸವಿದೆ. ಈ ಹಿಂದೆ ಮಹಾರಾಜಾಸ್ ಕಾಲೇಜಿನಲ್ಲಿ ಎಐಡಿಎಸ್‌ಒ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದು ಅವರ ಚುನಾವಣಾ ಅನುಭವ. ಜರ್ನಲಿಸಂನಲ್ಲಿ ಪಿಜಿ ಡಿಪ್ಲೊಮಾ ಮಾಡಿರುವ ಆಶ್ನಾ, ಪಕ್ಷದ ಮೀಡಿಯಾ ಕೋಆರ್ಡಿನೇಟರ್, ಜಿಲ್ಲಾ ಸಮಿತಿ ಸದಸ್ಯೆ, ತಿರುವಾರ್ಪ್ ಸ್ಥಳೀಯ ಸಮಿತಿ ಸದಸ್ಯೆ ಮತ್ತು ಎಐಡಿಎಸ್‌ಒ ರಾಜ್ಯ ಸಚಿವಾಲಯದ ಸದಸ್ಯೆಯಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ. ತಿರುವನಂತಪುರದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳಿಗಾಗಿ ಕೂದಲು ಕತ್ತರಿಸಿ ಪ್ರತಿಭಟಿಸಿದಾಗ, ಅವರಿಗೆ ಬೆಂಬಲ ಸೂಚಿಸಿ ಆಶ್ನಾ ಕೂಡಾ ತಮ್ಮ ಕೂದಲನ್ನು ಕತ್ತರಿಸಿದ್ದು ಸುದ್ದಿಯಾಗಿತ್ತು.
ವಿಧಾನಸಭಾ ಚುನಾವಣೆಗೆ ಬಂದಿದ್ದು ಹೇಗೆ?
ನಾನಾಗಿಯೇ ಸ್ಪರ್ಧಿಸಬೇಕು ಅಂತ ಆಸೆ ವ್ಯಕ್ತಪಡಿಸಿರಲಿಲ್ಲ. ಆದರೆ ಎಟುಮಾನೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷ ಸೂಚಿಸಿತು. ಹಾಗಾಗಿ ನಾನು ಈ ಜವಾಬ್ದಾರಿಯನ್ನು ಹೊತ್ತುಕೊಂಡೆ. ಇದು ನಾನು ಸಕ್ರಿಯವಾಗಿ ಕೆಲಸ ಮಾಡುವ ಕ್ಷೇತ್ರವೂ ಹೌದು. ಇಲ್ಲಿನ ಮತದಾರರ ಸಮಸ್ಯೆಗಳು ಮತ್ತು ಅವರ ಅಗತ್ಯಗಳ ಬಗ್ಗೆ ನನಗೆ ಸ್ಪಷ್ಟ ಕಲ್ಪನೆ ಇದೆ.
ರಾಜ್ಯದ ಅತ್ಯಂತ ಬಡ ಅಭ್ಯರ್ಥಿ ನೀವು
ನಾಮಪತ್ರ ಸಲ್ಲಿಸುವಾಗ ನನ್ನ ಕೈಯಲ್ಲಿದ್ದುದು ಬರೀ 84 ರೂಪಾಯಿ. ನನಗೆ ಬೇರೆ ಯಾವುದೇ ಆದಾಯದ ಮೂಲಗಳಿಲ್ಲ. ಸ್ವಂತ ಜಾಗ, ಗಾಡಿ, ಚಿನ್ನ ಏನೂ ಇಲ್ಲ. ಕೈಯಲ್ಲಿ ಏನಿತ್ತೋ, ಆ ಸತ್ಯವನ್ನೇ ಬರೆದೆ ಅಷ್ಟೇ. ನಾಮಪತ್ರ ಸಲ್ಲಿಸಿದ ದಿನ ಕೈಯಲ್ಲಿದ್ದುದು 40 ರೂಪಾಯಿ, ಅಕೌಂಟ್‌ನಲ್ಲಿದ್ದುದು 44 ರೂಪಾಯಿ. ಒಬ್ಬ ಅಭ್ಯರ್ಥಿಗೆ ಹಣ, ಆಸ್ತಿ ಇರಲೇಬೇಕು ಅಂತೇನೂ ಇಲ್ಲವಲ್ಲ? ಅಭ್ಯರ್ಥಿಗಳು ರಾಜಕೀಯವನ್ನು ಕೇವಲ ಹಣ ಮಾಡುವ ಮಾರ್ಗವಾಗಿ ನೋಡುತ್ತಿದ್ದಾರೆ. ನಾವು ಸಮಾಜದ ಬಗ್ಗೆ ಹೆಚ್ಚು ಬದ್ಧತೆ ಇರುವವರು. ನಮಗೆ ಹಣಕ್ಕಿಂತ ಸಾಮಾಜಿಕ ಕೆಲಸವೇ ಮುಖ್ಯ. ಹಾಗಾಗಿ ಇಷ್ಟೇ ಹಣ ಇರಬೇಕು, ಹೀಗೆ ಇರಬೇಕು ಎಂಬ ನಿಯಮ ನಮಗಿಲ್ಲ.
ಚುನಾವಣಾ ಪ್ರಚಾರದ ಖರ್ಚಿಗೆ ಹಣ ಎಲ್ಲಿಂದ?
ನಮ್ಮ ಪಕ್ಷ ಜನರಿಂದಲೇ ಹಣ ಪಡೆದು ಜನರಿಗಾಗಿಯೇ ಕೆಲಸ ಮಾಡುವುದು. ನಾವು ಯಾವಾಗಲೂ ಬಾಕ್ಸ್ ಹಿಡಿದು ದೇಣಿಗೆ ಸಂಗ್ರಹಿಸುತ್ತೇವೆ. ಬೀದಿಗಳಲ್ಲಿ ಬಕೆಟ್ ಹಿಡಿದು ಫಂಡ್ ಕಲೆಕ್ಟ್ ಮಾಡಿಯೇ ನಾವು ಹಲವು ಹೋರಾಟಗಳನ್ನು ನಡೆಸಿ ಗೆದ್ದಿದ್ದೇವೆ. ಈ ಬಾರಿಯೂ ಕೊಟ್ಟಾಯಂ ಮೆಡಿಕಲ್ ಕಾಲೇಜಿನಂತಹ ಸ್ಥಳಗಳಲ್ಲಿ ಫಂಡ್ ಸಂಗ್ರಹಿಸಿ ಪ್ರಚಾರದ ಖರ್ಚು ನಿಭಾಯಿಸುತ್ತಿದ್ದೇವೆ. ನಮ್ಮ ರಾಜಕೀಯವನ್ನು ಅರ್ಥಮಾಡಿಕೊಂಡಿರುವ ಸ್ನೇಹಿತರು ಕೂಡ ದೇಣಿಗೆ ನೀಡುತ್ತಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲು ಹಣ ಬೇಕೇ?
ಪ್ರಚಾರಕ್ಕೆ ಕನಿಷ್ಠ ಮಟ್ಟದ ಹಣ ಬೇಕಾಗುತ್ತದೆ. ಆದರೆ ಇಂದು ಹಲವು ಪಕ್ಷಗಳು ಪ್ರಚಾರಕ್ಕಾಗಿಯೇ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿವೆ. ಅವರು ಪ್ರಚಾರದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದಿಲ್ಲ. ಬದಲಿಗೆ, ಜಾಹೀರಾತಿನ ಘೋಷಣೆಗಳನ್ನು ಜನರ ಮುಂದಿಡುತ್ತಾರೆ. ಎಸ್‌ಯುಸಿಐ ಪಕ್ಷವು ಹೋರಾಟದ ರಾಜಕಾರಣವನ್ನು ಮುಂದಿಡುತ್ತದೆ. ನಾವು ಆ ದಾರಿಯಲ್ಲೇ ಕೆಲಸ ಮಾಡುತ್ತೇವೆ. ಹಣ, ಪ್ರಚಾರಕ್ಕಿಂತ ಹೆಚ್ಚಾಗಿ ಜನರಿಗೆ ಸಹಾಯ ಮಾಡುವ ಮನಸ್ಸು ಮುಖ್ಯ. ಸಮಾಜದಿಂದ ಏನು ಪಡೆದೆವು ಎನ್ನುವುದಕ್ಕಿಂತ, ಸಮಾಜಕ್ಕೆ ಏನು ಕೊಟ್ಟೆವು ಎಂಬುದು ಮುಖ್ಯ.