
ಬೆಂಗಳೂರಿನ ನಿವಾಸಿಯೊಬ್ಬರು ತಮ್ಮ 6.5 ಕಿಲೋಮೀಟರ್ ಆಫೀಸ್ ಪ್ರಯಾಣಕ್ಕೆ ಒಂದು ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಂಡ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.
ಬೆಂಗಳೂರು: ಸಿಲಿಕಾನ್ ಟ್ರಾಫಿಕ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಈ ಟ್ರಾಫಿಕ್ ಕಿರಿಕಿರಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಪೋಸ್ಟ್‌ಗಳು ವೈರಲ್ ಆಗುತ್ತಲೇ ಇರುತ್ತವೆ. ಈಗ, ಪಂಕಜ್ ಹುರಿಯಾ ಎಂಬ ಬೆಂಗಳೂರಿನ ನಿವಾಸಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋ ಒಂದು ಸಖತ್ ಸದ್ದು ಮಾಡುತ್ತಿದೆ. ಇದರಲ್ಲಿ ಅವರು ತಮ್ಮ ಆಫೀಸ್ ಪ್ರಯಾಣದ ಕಷ್ಟವನ್ನು ಹೇಳಿಕೊಂಡಿದ್ದಾರೆ.
ಒಂದು ಗಂಟೆಗಿಂತ ಹೆಚ್ಚು ಸಮಯ
ಪಂಕಜ್ ಬೆಳಗ್ಗೆ 9:15ಕ್ಕೆ ಮನೆಯಿಂದ ಹೊರಟಿದ್ದಾರೆ. ಅವರ ಆಫೀಸ್ ಇರುವುದು ಕೇವಲ 6.5 ಕಿಲೋಮೀಟರ್ ದೂರದಲ್ಲಿ. ಆದರೆ, ಅರ್ಧ ಗಂಟೆಗಿಂತ ಹೆಚ್ಚು ಹೊತ್ತು ರಸ್ತೆಯಲ್ಲೇ ಕಳೆದರೂ ಅವರು ಆಫೀಸ್ ತಲುಪಲು ಸಾಧ್ಯವಾಗಿಲ್ಲ. ತಮ್ಮ ಕಾರಿನಲ್ಲಿದ್ದ ಗೂಗಲ್ ಮ್ಯಾಪ್ ದೃಶ್ಯವನ್ನೂ ಅವರು ವಿಡಿಯೋದಲ್ಲಿ ತೋರಿಸಿದ್ದಾರೆ. ಮ್ಯಾಪ್ ಪ್ರಕಾರ, ಇನ್ನೂ 4.4 ಕಿ.ಮೀ. ಬಾಕಿ ಇತ್ತು ಮತ್ತು ಅಲ್ಲಿಗೆ ತಲುಪಲು ಬೆಳಗ್ಗೆ 10:16 ಆಗುತ್ತದೆ ಎಂದು ತೋರಿಸುತ್ತಿತ್ತು. ಅಂದರೆ, ಕೇವಲ 6.5 ಕಿ.ಮೀ. ಪ್ರಯಾಣಿಸಲು ಒಂದು ಗಂಟೆಗಿಂತ ಹೆಚ್ಚು ಸಮಯ ಬೇಕು ಎಂದರ್ಥ.
ಬೈಕ್ ಬಳಕೆಗೆ ಸಲಹೆ ನೀಡಿದ ನೆಟ್ಟಿಗರು
‘ಇದೇ ಬೆಂಗಳೂರಿನ ರಿಯಾಲಿಟಿ’ ಎಂದು ಪಂಕಜ್ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಪೋಸ್ಟ್‌ಗೆ ಪರ-ವಿರೋಧ ಕಮೆಂಟ್‌ಗಳನ್ನು ಮಾಡಿದ್ದಾರೆ. ‘ದೆಹಲಿಯಲ್ಲೂ ಇದೇ ಪರಿಸ್ಥಿತಿ, ಇಷ್ಟು ದೂರಕ್ಕೆ 45 ನಿಮಿಷಕ್ಕಿಂತ ಹೆಚ್ಚು ಸಮಯ ಹಿಡಿಯುತ್ತದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, ‘ಕಾರಿನ ಬದಲು ಬೈಕ್ ಅಥವಾ ಸ್ಕೂಟರ್ ಬಳಸಿದರೆ ಬೇಗ ತಲುಪಬಹುದು’ ಎಂದು ಪಂಕಜ್‌ಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Bengaluru: 3000 ಮೆಟ್ರಿಕ್ ಟನ್ ಹಸಿ ಕಸದಿಂದ ಬಯೋಗ್ಯಾಸ್ ಉತ್ಪಾದನೆಗೆ ಕ್ರಮ: ಮಹೇಶ್ವರ್ ರಾವ್
ಆದರೆ, ಕೆಲವರು ಪಂಕಜ್ ಅವರನ್ನೇ ಟೀಕಿಸಿದ್ದಾರೆ. ‘ಇದು ಟ್ರಾಫಿಕ್ ಸಮಸ್ಯೆ ಮಾತ್ರವಲ್ಲ, ನಿಮ್ಮದು ಕೂಡ ಸಮಸ್ಯೆ. ಬೇಗ ಎದ್ದು ಹೊರಟರೆ 15-20 ನಿಮಿಷದಲ್ಲಿ ತಲುಪಬಹುದು. ನಗರದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಬೇಡಿ’ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ಗೆ ತಡವಾಗಿ ಬಂದ, ಮಾತಿನ ಭರದಲ್ಲಿ ‘ಬಾಂಬ್ ಇದ್ರೆ..’ ಅಂದ, ಖ್ಯಾತ ಗಾಯಕ ಅರೆಸ್ಟ್!