
ಅಮೆರಿಕ ಮೂಲದ ಹ್ಯೂಮನ್ ಮೈಕ್ರೋಬ್ಸ್ ಸಂಸ್ಥೆಯು ಆರೋಗ್ಯವಂತರಿಂದ ಮಲವನ್ನು ದಾನವಾಗಿ ಪಡೆದು ವಾರ್ಷಿಕ 1.5 ಕೋಟಿ ರೂ. ನೀಡುತ್ತಿದೆ. ಈ ಮಲವನ್ನು ಗಂಭೀರ ಕರುಳಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮಲ ಮೈಕ್ರೋಬಯೋಟಾ ಕಸಿ (FMT) ಗಾಗಿ ಬಳಸಲಾಗುತ್ತದೆ.
ಮಲ-ಮೂತ್ರ ಎಂದಾಕ್ಷಣ ಮುಖ ಕಿವುಚುವವರು, ಮೂಗು ಮುಚ್ಚಿಕೊಳ್ಳುವವರೇ ಹಲವರು. ಆದರೆ ಬಹುತೇಕ ಮಂದಿಗೆ ತಿಳಿದರಲಿಕ್ಕಿಲ್ಲ. ನಾವು ಬಳಸುವ ಕೆಲವು ಮಾತ್ರೆಗಳಲ್ಲಿ ಮನುಷ್ಯರ ಮಲದಲ್ಲಿನ ಸಾರವನ್ನೇ ಬಳಸಲಾಗುತ್ತಿದೆ ಎನ್ನುವ ಸತ್ಯ ಗೊತ್ತಿರಲಿಕ್ಕಿಲ್ಲ. ಮಲವನ್ನು ಶೋಧಿಸಿ, ಅದರಲ್ಲಿ ಅಗತ್ಯವಿರುವ ಸಾರವನ್ನು ಸಂಗ್ರಹಿಸಿ ಕ್ಯಾಪ್ಯೂಲ್ಗಳಲ್ಲಿ ತುಂಬಿಸಿ ಕೆಲವೊಂದು ಕಾಯಿಲೆಗಳಿಗೆ ಮಾತ್ರೆಗಳ ರೂಪದಲ್ಲಿ ಕೊಡಲಾಗುತ್ತದೆ. ನಾವೆಲ್ಲರೂ ಒಂದಲ್ಲೊಂದು ರೂಪದಲ್ಲಿ ಈ ಮಲವನ್ನೇ ಸೇವಿಸಿದವರೇ. ಹಾಗಿದ್ದ ಮೇಲೆ ಇಲ್ಲಿ ಹೇಳುವ ವಿಷಯದ ಬಗ್ಗೆ ಹೆಚ್ಚಿನವರಿಗೆ ಅಚ್ಚರಿಯಾಗಲಿಕ್ಕಿಲ್ಲ. ಇಲ್ಲದಿದ್ದರೆ ಇದು ಸುಳ್ಳು ಸುದ್ದಿ ಎಂದು ಶೀರ್ಷಿಕೆ ನೋಡಿಯೇ ಕಮೆಂಟ್ ಹಾಕುವವರೇ ಹೆಚ್ಚು.
ಇದು ಸುಳ್ಳಲ್ಲ, ನಿಜ
ಇದೀಗ ಅಂಥದ್ದೇ ಒಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅದು ನಿಮ್ಮ ಮಲವನ್ನು ಕೊಟ್ಟು ವಾರ್ಷಿಕವಾಗಿ 1.5 ಕೋಟಿ ರೂಪಾಯಿವರೆಗೂ ದುಡಿಯಬಹುದು ಎನ್ನುವ ಸುದ್ದಿ ಅದು. ಇದನ್ನು ಕೇಳಿ ಹಲವರು ನಕ್ಕು, ಮತ್ತೆ ಕೆಲವರು ವಿಡಿಯೋ ಮಾಡಿದವರಿಗೆ ಬೈದು, ಮತ್ತೆ ಹಲವರು ಕಮೆಂಟ್ ಹಾಕಿದರು. ಆದರೆ ನಿಜಕ್ಕೂ ಇದು ಸುಳ್ಳು ಸುದ್ದಿಯಲ್ಲ. ಮೈಕೆಲ್ ಹ್ಯಾರೋಪ್ ಸ್ಥಾಪಿಸಿದ ಹ್ಯೂಮನ್ ಮೈಕ್ರೋಬ್ಸ್ ಎಂಬ ಅಮೆರಿಕ ಮೂಲದ ಸಂಸ್ಥೆಯು, ಇಂಥದ್ದೊಂದು ಆಫರ್ ನೀಡಿದೆ. ಆದರೆ ನೀವು ಆರೋಗ್ಯವಂತರಾಗಿರಬೇಕು ಎನ್ನುವುದಷ್ಟೇ ಇದಕ್ಕಿರುವ ಕಂಡೀಷನ್. ಉತ್ತಮ ಗುಣಮಟ್ಟದ ಮಲ ದಾನಕ್ಕಾಗಿ, ವಿಶೇಷವಾಗಿ ಮಲ ಮೈಕ್ರೋಬಯೋಟಾ ಕಸಿ (FMT) ಗಾಗಿ ವಾರ್ಷಿಕವಾಗಿ 180,000 ಡಾಲರ್ (ಸುಮಾರು ₹1.5 ಕೋಟಿ) ವರೆಗೆ ನೀಡುತ್ತಿದೆ. ಕಂಪೆನಿಯು ಅಸಾಧಾರಣವಾಗಿ ಆರೋಗ್ಯಕರ, ಅಥ್ಲೆಟಿಕ್ ದಾನಿಗಳನ್ನು ಹುಡುಕುತ್ತಿದೆ, ಗಂಭೀರ ಕರುಳಿನ ಸ್ಥಿತಿಗಳಿಗೆ ಚಿಕಿತ್ಸೆ ನೀಡಲು FMT ಗಾಗಿ ಪ್ರತಿ ಮಾದರಿಗೆ ಸರಿಸುಮಾರು 500 ಡಾಲರ್ ನೀಡುತ್ತದೆ.
ಇಷ್ಟು ದುಬಾರಿ ಏಕೆ?
ಸಂಸ್ಥೆಯು ಅಸಾಧಾರಣ, ರೋಗ-ನಿರೋಧಕ ಸೂಕ್ಷ್ಮಜೀವಿಗಳನ್ನು ಹೊಂದಿರುವ ದಾನಿಗಳನ್ನು ಹುಡುಕುತ್ತಿದೆ, ಇದು ಜನಸಂಖ್ಯೆಯ 0.1% ಕ್ಕಿಂತ ಕಡಿಮೆ ಎಂದು ಅವರು ಹೇಳುತ್ತಾರೆ. ಇದರ ಅರ್ಥ 100ರಲ್ಲಿ ಒಬ್ಬರೂ ಸಿಗುವುದು ಕಷ್ಟವಂತೆ! ಅಷ್ಟಕ್ಕೂ ಈ ಮಲವನ್ನು ತೀವ್ರವಾದ ಜಠರಗರುಳಿನ ಸಮಸ್ಯೆಗಳು ಮತ್ತು ಸಂಭಾವ್ಯವಾಗಿ ಮಾನಸಿಕ ಆರೋಗ್ಯ ಸ್ಥಿತಿಗಳನ್ನು ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಫೆಕಲ್ ಮೈಕ್ರೋಬಯೋಟಾ ಟ್ರಾನ್ಸ್ಪ್ಲಾಂಟ್ಸ್ (FMT) ಗಾಗಿ ದೇಣಿಗೆಗಳನ್ನು ಬಳಸಲಾಗುತ್ತದೆ.
ಕಠಿಣ ತಪಾಸಣೆ:
ಈ ಪ್ರಕ್ರಿಯೆಯು ಅತ್ಯಂತ ಆರೋಗ್ಯಕರವಾಗಿರುವುದರ ಜೊತೆಗೆ, “ಮಲ” ಅತ್ಯುನ್ನತ ಗುಣಮಟ್ಟದ್ದಾಗಿದೆ ಎಂದು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ತಪಾಸಣೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಈ ಬಗ್ಗೆ truelysimran ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಯುವತಿಯೊಬ್ಬಳು ಮಾಹಿತಿ ನೀಡಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.