
2005ರಲ್ಲಿ ಪೆರೋಲ್ ಮೇಲೆ ತೆರಳಿ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಯ ಕೈದಿಯನ್ನು, 21 ವರ್ಷಗಳ ನಂತರ ವಿಜಯಪುರ ವಿಶೇಷ ಪೊಲೀಸ್ ತಂಡವು ಮಹಾರಾಷ್ಟ್ರದಲ್ಲಿ ಬಂಧಿಸಿದೆ. ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಆರೋಪಿಯನ್ನು ಮರಳಿ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.
ವಿಜಯಪುರ: ಇಲ್ಲಿನ ಕೇಂದ್ರ ಕಾರಾಗೃಹದಿಂದ 2005 ಮಾರ್ಚ್ 25ರಂದು 10 ದಿನಗಳ ಪೆರೋಲ್ ರಜೆ ಪಡೆದು, ತನ್ನ ಊರಿಗೆ ಹೋಗಿದ್ದು, ಪೆರೋಲ್ ರಜೆ ಅವಧಿ ಮುಗಿದ ಮೇಲೆ ಮರಳಿ ಹಾಜರಾಗದೇ, ತಲೆಮರೆಸಿಕೊಂಡಿದ್ದ ಆರೋಪಿಯನ್ನು 21 ವರ್ಷದ ಬಳಿಕ ಶನಿವಾರ ಬಂಧಿಸಲಾಗಿದೆ. ಸೋಲಾಪುರ ಮೂಲದ ಆರೋಪಿ ಆಜಾನ್ ಹುಸೇನ್ ಮುಜಾವರ ಉರ್ಫ್ ಶೇಖ ಬಂಧಿತ ಆರೋಪಿ. ಜಿಲ್ಲೆಯ ಆಲಮೇಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೊಲೆ ಪ್ರಕರಣದಲ್ಲಿ ಬಂಧಿಯಾಗಿ, ಪ್ರಧಾನ ಮತ್ತು ಸತ್ರ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಗಾಗಿದ್ದ ಈತ, ಸದ್ಯ ಪೊಲೀಸರ್ ಅತಿಥಿಯಾಗಿದ್ದಾನೆ. ಈ ಬಗ್ಗೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ ಜಿಲ್ಲೆಯ ಕಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧನಕ್ಕೆ ವಿಶೇಷ ತಂಡ ರಚನೆ
ಕಳೆದ 21 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಶಿಕ್ಷಾಬಂಧಿ ಆರೋಪಿ ಆಜಾನ್ ಹುಸೇನ್ ಮುಜಾವರ ಉರ್ಫ್ ಶೇಖನ ಪತ್ತೆಗೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಐ ರವಿ ಯಡವನ್ನವರ, ಪಿಎಸ್ಐ ರಾಕೇಶ ಬಗಲಿ ಹಾಗೂ ಸಿಬ್ಬಂದಿ ಆಸೀಫ ಗುಡಗುಂಟಿ, ಎಂ.ಕೆ.ಹಾವಡಿ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಇದನ್ನೂ ಓದಿ: ಕೊಪ್ಪಳ: ಕುಕನೂರು ಬಳಿ ಕಾಲುವೆಯಲ್ಲಿ ಎರಡು ಸುಟ್ಟ ಮೃತದೇಹ ಪತ್ತೆ, ಹತ್ಯೆ ಮಾಡಿರುವ ಶಂಕೆ!
ತಂಡವು ಖಚಿತ ಮಾಹಿತಿ ಮೇರೆಗೆ 2026 ಏ.11ರಂದು ಮಹಾರಾಷ್ಟ್ರ ರಾಜ್ಯದ ಇಚಲಕರಂಜಿ ಪಟ್ಟಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿ, ಮರಳಿ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.
ಉತ್ತಮ ಕರ್ತವ್ಯ ನಿರ್ವಹಿಸಿದ ವಿಜಯಪುರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯವನ್ನು ಶ್ಲಾಘಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರು ಎಂದು ಕೂಡ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
Scroll to load tweet…