
17 ವರ್ಷಗಳ ಅಮೆರಿಕ ವಾಸಕ್ಕೆ ಅಂತ್ಯ ಹಾಡಿ, ಎನ್‌ಆರ್‌ಐ ಕುಟುಂಬವೊಂದು ಭಾರತಕ್ಕೆ ಮರಳುತ್ತಿದೆ. ಮಗನಿಗೆ ಉತ್ತಮ ಸಾಮಾಜಿಕ ವಾತಾವರಣ ಮತ್ತು ನೆಮ್ಮದಿಯ ಜೀವನಕ್ಕಾಗಿ ಪುಣೆಯಲ್ಲಿ ನೆಲೆಸಲು ಈ ಫ್ಯಾಮಿಲಿ ನಿರ್ಧರಿಸಿದೆ. ಇದಕ್ಕಾಗಿ 4 ಕೋಟಿ ರೂ.ವರೆಗೂ ಖರ್ಚು ಮಾಡಲು ಸಿದ್ಧವಾಗಿದೆ.
ಅಮೆರಿಕದ ಅವಸರದ ಲೈಫ್ ಬೇಡವೇ ಬೇಡ, ಇದ್ದಷ್ಟು ದಿನ ನೆಮ್ಮದಿಯಾಗಿ ಬದುಕುವ ಜೀವನ ಬೇಕು ಅಂತಾ ಭಾರತಕ್ಕೆ ವಾಪಸ್ ಬರ್ತಿರೋ ಎನ್‌ಆರ್‌ಐ ಕುಟುಂಬವೊಂದರ ಕಥೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸುಮಾರು 17 ವರ್ಷ ವಿದೇಶದಲ್ಲಿದ್ದ ಮುಂಬೈ ಮೂಲದ ವ್ಯಕ್ತಿಯೊಬ್ಬರು, ತಮ್ಮ ಕುಟುಂಬದ ಈ ನಿರ್ಧಾರದ ಬಗ್ಗೆ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. ಇದರಲ್ಲಿ 10 ವರ್ಷ ಅವರು ಅಮೆರಿಕದ ನ್ಯೂಯಾರ್ಕ್‌ನಲ್ಲೇ ವಾಸವಾಗಿದ್ದರು.
ಮಗನ ಭವಿಷ್ಯಕ್ಕಾಗಿ ಈ ನಿರ್ಧಾರ
ತಮ್ಮ 3 ವರ್ಷದ ಮಗನಿಗೆ ಉತ್ತಮ ಶಿಕ್ಷಣದ ಜೊತೆಗೆ, ಆಟವಾಡಲು ಮತ್ತು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಸೂಕ್ತವಾದ ಸಾಮಾಜಿಕ-ಸಾಂಸ್ಕೃತಿಕ ವಾತಾವರಣವನ್ನು ಒದಗಿಸುವುದೇ ಈ ನಿರ್ಧಾರದ ಪ್ರಮುಖ ಉದ್ದೇಶ ಅಂತ ಅವರು ಹೇಳಿಕೊಂಡಿದ್ದಾರೆ. ಕೇವಲ ಐಷಾರಾಮಿ ಜೀವನಶೈಲಿಗಾಗಿ ವಿದೇಶದಲ್ಲಿ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದನ್ನ ಹೇಳಿದ್ದಾರೆ. ಸದ್ಯಕ್ಕೆ ವಿದೇಶಿ ಜೀವನ ಸುರಕ್ಷಿತವಾಗಿದ್ದರೂ, ಉಳಿತಾಯಕ್ಕಿಂತ ಹೆಚ್ಚಾಗಿ ಕುಟುಂಬದ ಜೊತೆಗಿನ ನೆಮ್ಮದಿಯ ಕ್ಷಣಗಳಿಗೆ ಹೆಚ್ಚು ಆದ್ಯತೆ ನೀಡುವುದಾಗಿ ಅವರು ಹೇಳಿಕೊಂಡಿದ್ದಾರೆ.
ಪತ್ನಿಯ ಅನುಕೂಲವೂ ಮುಖ್ಯ
ಮಹಾರಾಷ್ಟ್ರದ ಪುಣೆ ನಗರದ ಹೊರವಲಯದಲ್ಲಿ ಎಲ್ಲಾದರೂ ನೆಲೆಸಲು ಈ ಕುಟುಂಬ ಪ್ಲ್ಯಾನ್ ಮಾಡಿದೆ. ನಗರದ ಜನದಟ್ಟಣೆಯಿಂದ ದೂರವಿದ್ದು, ಶಾಂತವಾದ ವಾತಾವರಣದಲ್ಲಿರಲು ಅವರು ಬಯಸುತ್ತಿದ್ದಾರೆ. ಇದಕ್ಕಾಗಿ ಕೋರೆಗಾಂವ್ ಪಾರ್ಕ್, ಕಲ್ಯಾಣಿ ನಗರದಂತಹ ಏರಿಯಾಗಳಲ್ಲರಲು ಬಯಸಿದ್ದಾರೆ. ತಮ್ಮ ಪತ್ನಿ ನ್ಯೂಯಾರ್ಕ್ ಮೂಲದವರಾಗಿದ್ದು, ಇಂಗ್ಲಿಷ್ ಮಾತ್ರ ಮಾತನಾಡುತ್ತಾರೆ. ಹಾಗಾಗಿ, ಈ ಪ್ರದೇಶಗಳಲ್ಲಿರುವ ಅಂತರಾಷ್ಟ್ರೀಯ ಮಟ್ಟದ ವಾತಾವರಣ ಅವರಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ನಂಬಿದ್ದಾರೆ.
ಮನೆಗಾಗಿ 4 ಕೋಟಿ ಬಜೆಟ್ ಮೀಸಲು
ಭಾರತದಲ್ಲಿ ಮನೆ ಖರೀದಿಸಲು ಈ ಕುಟುಂಬ ಸುಮಾರು 3 ರಿಂದ 4 ಕೋಟಿ ರೂಪಾಯಿ ಬಜೆಟ್ ಇಟ್ಟುಕೊಂಡಿದೆ. ಒಂದು ವೇಳೆ, ಪ್ರಕೃತಿ ಸೌಂದರ್ಯವಿರುವ ಮತ್ತು ಶಾಂತವಾದ ಜಾಗ ಸಿಕ್ಕರೆ ಬಜೆಟ್ ಅನ್ನು ಇನ್ನಷ್ಟು ಹೆಚ್ಚಿಸಲು ಸಿದ್ಧರಿರುವುದಾಗಿ ಅವರು ಹೇಳಿದ್ದಾರೆ. ಭಾರತಕ್ಕೆ ಮರಳಿದ ನಂತರ, ಕೆಲಸದಿಂದ ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡು, ಬಳಿಕ ವೃತ್ತಿಜೀವನದ ಮುಂದಿನ ಹಂತದ ಬಗ್ಗೆ ಯೋಚಿಸಲು ಈ ಯುವಕ ನಿರ್ಧರಿಸಿದ್ದಾರೆ. ತಾಯ್ನಾಡಿನ ಸರಳ ಜೀವನವು ಹೊಸ ಆರಂಭಕ್ಕೆ ಶಕ್ತಿ ನೀಡುತ್ತದೆ ಎಂಬ ಭರವಸೆಯಲ್ಲಿ ಈ ಕುಟುಂಬವಿದೆ.