ರಾಜ್ಯ ಪೊಲೀಸ್ ಇಲಾಖೆ ಮರ್ಯಾದೆ ತೆಗೆದ ಮತ್ತೊಬ್ಬ ಸಿಬ್ಬಂದಿ, ಬರೋಬ್ಬರಿ 11 ಲಕ್ಷ ಕದ್ದು ಹೆಂಡತಿಗೆ ಚಿನ್ನ ಉಡುಗೊರೆ! | Bengaluru Police Scandal Head Constable Caught Stealing Money From Car Gow

ರಾಜ್ಯ ಪೊಲೀಸ್ ಇಲಾಖೆ ಮರ್ಯಾದೆ ತೆಗೆದ ಮತ್ತೊಬ್ಬ ಸಿಬ್ಬಂದಿ, ಬರೋಬ್ಬರಿ 11 ಲಕ್ಷ ಕದ್ದು ಹೆಂಡತಿಗೆ ಚಿನ್ನ ಉಡುಗೊರೆ! | Bengaluru Police Scandal Head Constable Caught Stealing Money From Car Gow



ರಾಜ್ಯ ಪೊಲೀಸ್ ಇಲಾಖೆ ಮರ್ಯಾದೆ ತೆಗೆದ ಮತ್ತೊಬ್ಬ ಸಿಬ್ಬಂದಿ, ಬರೋಬ್ಬರಿ 11 ಲಕ್ಷ ಕದ್ದು ಹೆಂಡತಿಗೆ ಚಿನ್ನ ಉಡುಗೊರೆ! | Bengaluru Police Scandal Head Constable Caught Stealing Money From Car Gow

ಸೈಬರ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಓರ್ವ ವಿಚಾರಣೆಗೆ ಕರೆತಂದಿದ್ದ ಆರೋಪಿಯ ಕಾರಿನಿಂದ 11ಲಕ್ಷ ರೂ. ಕದ್ದ ಘಟನೆ ಸಿಸಿಟಿವಿ ದೃಶ್ಯಾವಳಿಯಿಂದ ಬಯಲಾಗಿದೆ. ಈ ಘಟನೆಯು ಇತ್ತೀಚೆಗೆ ಹೆಚ್ಚುತ್ತಿರುವ ಪೊಲೀಸ್ ಇಲಾಖೆಯೊಳಗಿನ ಅಪರಾಧ ಕೃತ್ಯಗಳ ಸರಣಿಗೆ ಸೇರಿದ್ದು, ಇಲಾಖೆಯ ಗೌರವಕ್ಕೆ ಧಕ್ಕೆ ತಂದಿದೆ.

ಬೆಂಗಳೂರು: ನಾಗರಿಕರ ಸುರಕ್ಷತೆಗಾಗಿ ಕಾವಲಿನಲ್ಲಿರಬೇಕಾದ ಕೆಲ ಪೊಲೀಸ್ ಸಿಬ್ಬಂದಿಯ ಕಳ್ಳಾಟಗಳು ನಿರಂತರವಾಗಿ ಬಯಲಾಗುತ್ತಿದ್ದು, ಇಲಾಖೆಯ ಗೌರವಕ್ಕೆ ಗಂಭೀರ ಧಕ್ಕೆ ತಂದಿವೆ. ಸಿದ್ದಾಪುರ ದರೋಡೆ ಪ್ರಕರಣದಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ ಅಣ್ಣಪ್ಪ ನಾಯಕ್ ಬಂಧನವಾಗಿರುವುದು ಮರೆಸುವ ಮುನ್ನವೇ, ಇದೀಗ ಸೈಬರ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಜೆ.ಬಿ. ಉಲ್ಲಾ ಎಂಬಾತನಿಂದ ಲಕ್ಷಾಂತರ ರೂಪಾಯಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯನ್ನು ವಿಚಾರಣೆಗಾಗಿಯೇ ಕರೆದುಕೊಂಡು ಬಂದಿದ್ದಾಗ ಈ ಘಟನೆ ಸಂಭವಿಸಿರುವುದು ಆಶ್ಚರ್ಯಕರ ಸಂಗತಿ.

ವಿಚಾರಣೆಗೆ ತಂದ ಆರೋಪಿ ಕಾರಿನಲ್ಲಿದ್ದ 11 ಲಕ್ಷ ರೂಪಾಯಿ ನಾಪತ್ತೆ!

ಸೈಬರ್ ಅಪರಾಧ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ, ವಿಚಾರಣೆಗೆ ಕರೆದೊಯ್ಯುವ ವೇಳೆಗೆ ತನ್ನ ಕಾರಿನಲ್ಲಿ 11 ಲಕ್ಷ ರೂಪಾಯಿ ಇರುವ ಬ್ಯಾಗ್ ಇಟ್ಟಿದ್ದ. ವಿಚಾರಣೆಯ ನಂತರ ಆತನನ್ನು ಜೈಲಿಗೆ ಕಳಿಸಲಾಯಿತು. ನಂತರ ಜಾಮೀನು ಪಡೆದು ಆತ ಹೊರಬಂದಾಗ, ಕಾರಿನಲ್ಲಿದ್ದ ಹಣದ ಬ್ಯಾಗ್ ನಾಪತ್ತೆಯಾಗಿರುವುದು ಅವನ ಗಮನಕ್ಕೆ ಬಂದಿತು. ಆರೋಪಿ ತಕ್ಷಣವೇ ಸೈಬರ್ ಠಾಣೆಯ ಸಿಬ್ಬಂದಿಯವರ ಗಮನಕ್ಕೆ ಈ ವಿಚಾರ ತಂದಾಗ, ಅಧಿಕಾರಿಗಳು ಮೊದಲಿಗೆ ಗಾಬರಿಗೊಂಡರು ಬಳಿಕ ಸಿಸಿಟಿವಿ ಚಿತ್ರೀಕರಣವನ್ನು ಪರಿಶೀಲಿಸಿದರು. ಈ ಪರಿಶೀಲನೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಜೆ.ಬಿ. ಉಲ್ಲಾ ಕಾರಿನಲ್ಲಿದ್ದ 11 ಲಕ್ಷ ರೂಪಾಯಿ ಹಣದ ಬ್ಯಾಗ್‌ನ್ನು ತೆಗೆದುಕೊಂಡು ಹೋಗಿರುವುದು ದೃಢಪಟ್ಟಿತು.

ಸಿ.ಸಿ.ಟಿ.ವಿ ಕ್ಯಾಮರಾ ಬಯಲಿಗೆಳೆದ ಕಳ್ಳತನ

ಸಿಸಿಟಿವಿ ದೃಶ್ಯಾವಳಿಯಲ್ಲಿ ಜೆಬಿ ಉಲ್ಲಾ ಆರೋಪಿಯ ಕಾರಿನತ್ತ ಹೋಗಿ, ಬ್ಯಾಗ್‌ನ್ನು ಎತ್ತಿಕೊಂಡು ಆರಾಮವಾಗಿ ಹೋಗಿರುವುದು ಸೆರೆಯಾಗಿದೆ. ಹಣ ಕದ್ದ ನಂತರ ತನಗೇನೂ ಗೊತ್ತಿಲ್ಲ ಎನ್ನುವಂತೆ ಹಲವು ದಿನಗಳಿಂದ ಸಾಮಾನ್ಯವಾಗಿ ಕೆಲಸಕ್ಕೆ ಬರುತ್ತಿದ್ದುದೂ ಗಮನಾರ್ಹ. ಘಟನೆಯ ಬಗ್ಗೆ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸಿಂ ಅವರಿಗೆ ದೂರು ಸಲ್ಲಿಸಲಾಯಿತು. ಸೈಬರ್ ಪೊಲೀಸರು ಜೆಬಿ ಉಲ್ಲಾ ಅವರ ಮನೆಗೆ ಸರ್ಚ್ ಮಾಡಲು ತೆರಳಿದಾಗ, ಆತ ಮನೆಯ ಒಳಬಿಡದೆ ಗಲಾಟೆ ಮಾಡಿದ್ದಾನೆಂದು ತಿಳಿದುಬಂದಿದೆ.

ಪೊಲೀಸರು ಮನೆಯ ಒಳ ಭಾಗ ಪರಿಶೀಲಿಸಿದಾಗ, ಮಲಗುವ ಕೋಣೆಯ ಬೆಡ್ ಕೆಳಗೆ ಲಕ್ಷಾಂತರ ರೂ. ಹಣವನ್ನು ಜೋಡಿಸಿ ಇಟ್ಟಿದ್ದು ಪತ್ತೆಯಾಯಿತು. ಕದ್ದ ಹಣದಿಂದಲೇ ತನ್ನ ಪತ್ನಿಗೆ ಆಭರಣಗಳನ್ನು ಕೊಟ್ಟಿರುವುದು ಕೂಡಾ ತನಿಖೆಯಲ್ಲಿ ಬಹಿರಂಗವಾಗಿದೆ. ಕದ್ದ ಹಣದಲ್ಲಿ ಸುಮಾರು ಎರಡು ಲಕ್ಷ ರೂಪಾಯಿ ಮಾತ್ರ ವಾಪಸ್ ನೀಡಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಭಾಗದಲ್ಲಿ ಹೆಚ್ಚುತ್ತಿರುವ ಅವ್ಯವಸ್ಥೆ: ಆತಂಕದಲ್ಲಿ ನಗರ ಪೊಲೀಸರು

ಈ ಘಟನೆ ನಗರದ ಪೊಲೀಸರನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಇಲಾಖೆಯ ಗೌರವದ ಬಗ್ಗೆ ಗಂಭೀರ ಪ್ರಶ್ನೆ ಎದ್ದಿದೆ. ಇದಕ್ಕೂ ಮುನ್ನ ಸಿದ್ದಾಪುರ ದರೋಡೆ ಪ್ರಕರಣದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್‌ ಬಂಧಿತನಾಗಿದ್ದ. ಜೆಪಿ ನಗರದಲ್ಲಿ ಸೀನಿಯರ್ ಸಿಟಿಜನ್‌ ಬಳಿ ಹಣ ಪಡೆದ ಆರೋಪ, ಬೆಳ್ಳಂದೂರು ಪೊಲೀಸ್ ಠಾಣೆಯ ಮೇಲೆ ಬಂದಿದ್ದ ಮಾರಣಾಂತಿಕ ಪ್ರಕರಣದಲ್ಲಿ ಹಣ ಪಡೆದ ಆರೋಪ ಇವೆಲ್ಲವೂ ಇಲಾಖೆಯೊಳಗಿನ ಶಿಸ್ತು ಕೊರತೆ ಸ್ಪಷ್ಟಪಡಿಸುತ್ತಿವೆ.

ಇಷ್ಟೆಲ್ಲ ನಡೆದರೂ ಸೈಬರ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಜೆಬಿ ಉಲ್ಲಾ ಮೇಲಿನ ಕಳ್ಳತನದ ದೂರು, ಹಾಗೂ ಪ್ರಕರಣ ಮುಚ್ಚಿಹಾಕಲು ಕೆಲ ಸಿಬ್ಬಂದಿ ನಡೆಸಿದ ಯತ್ನಗಳು ಪೊಲೀಸರ ಮೇಲಿನ ನಂಬಿಕೆಗೆ ಗಂಭೀರ ಧಕ್ಕೆ ತಂದಿವೆ. ನಗರದ ಜನರು ಮತ್ತು ನಾಗರಿಕ ಸಂಘಟನೆಗಳು ಈಗ ಗೃಹ ಇಲಾಖೆ ಹಾಗೂ ಪೊಲೀಸ್ ಹಿರಿಯಾಧಿಕಾರಿಗಳವರೆಗೂ ಗಂಭೀರ ಪ್ರಶ್ನೆಗಳನ್ನು ಕೇಳುವಂತಾಗಿದೆ.

  • ನಿಮ್ಮ ಇಲಾಖೆಯಲ್ಲಿ ಶಿಸ್ತು ಎಂಬ ಪದಕ್ಕೆ ಅರ್ಥ ಉಳಿದಿದೆಯೇ?
  • ಕ್ರಮ ಕೈಗೊಳ್ಳಬೇಕಾದವರು ತಾವೇ ಅಪರಾಧಿಗಳಿಗೆ ರಕ್ಷೆಯಾಗುತ್ತಿರುವುದು ಎಷ್ಟು ಸರಿ?
  • ನಿಮ್ಮ ಇಲಾಖೆಯ ಕರ್ಮಕಾಂಡ ದಿನಕ್ಕೊಂದು ಬಯಲಾಗ್ತಿದೆ..?
  • ಮಾನ್ಯ ಗೃಹಸಚಿವರೇ ಏನಿದು ನಿಮ್ಮ ಇಲಾಖೆಯ ಸಿಬ್ಬಂದಿಗಳ ಕರ್ಮಕಾಂಡ..?
  • ಯಾವಾಗ ಇದಕ್ಕೆಲ್ಲ ಬ್ರೇಕ್..?
  • ದೇಶದಲ್ಲೆ ಒಳ್ಳೆಯ ಹೆಸರು ಪಡೆದ ಇಲಾಖೆಗೆ ಕಪ್ಪುಚುಕ್ಕೆ..?
  • ಇಂತವರೆಲ್ಲಾ ಬೇಕಾ ನಿಮ್ಮ ಇಲಾಖೆಗೆ..?
  • ದೂರುದಾರನ ಬೆದರಿಸಿ ಪ್ರಕರಣ ಮುಚ್ಚಿ ಹಾಕುತ್ತಿರುವುದು ಎಷ್ಟು ಸರಿ..?

ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರ ನಂಬಿಕೆ ಕುಂದದೆ ಇರಬೇಕಾದರೆ, ಇಂತಹ ಪ್ರಕರಣಗಳಿಗೆ ಕಠಿಣ ಮತ್ತು ತಕ್ಷಣದ ಕ್ರಮ ಅವಶ್ಯಕವಾಗಿದೆ. ಇಲಾಖೆ ಒಳಗಿನ ಕಂತ್ರಿಗಳನ್ನು ಹೊರಹಾಕದೇ ಬಿಟ್ಟರೆ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಗಂಭೀರ ಪ್ರಶ್ನೆಯಲ್ಲೇ ಉಳಿಯುತ್ತದೆ.



Source link

Leave a Reply

Your email address will not be published. Required fields are marked *