
Bengaluru Karaga 2026 ಐತಿಹಾಸಿಕ ಬೆಂಗಳೂರು ಹಸಿ ಕರಗ ಮಹೋತ್ಸವವು ಸಂಪಂಗಿ ಕೆರೆ ಅಂಗಳದಲ್ಲಿ ಭಕ್ತಿ-ಭಾವದಿಂದ ಆರಂಭವಾಗಿದೆ. ಬುಧವಾರ ರಾತ್ರಿ ನಡೆಯಲಿರುವ ಹೂವಿನ ಕರಗವು ನಗರದ ಪ್ರಮುಖ ಭಾಗಗಳಲ್ಲಿ ಸಂಚರಿಸಲಿದ್ದು, ಇದಕ್ಕಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಬೆಂಗಳೂರು (ಏ.1): ಐತಿಹಾಸಿಕ ಬೆಂಗಳೂರು ಹಸಿ ಕರಗ ಮಹೋತ್ಸವ ಪ್ರಾರಂಭವಾಗಿದ್ದು, ಮಂಗಳವಾರ ಬೆಳಗ್ಗೆ ನಗರದ ಸಂಪಂಗಿ ಕೆರೆ ಅಂಗಳದಲ್ಲಿರುವ ಶಕ್ತಿಪೀಠದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹಸಿಕರಗ ಮಹೋತ್ಸವ ಅತ್ಯಂತ ಭಕ್ತಿ-ಭಾವದಿಂದ ಜರುಗಿತು.
ನಸುಕಿನ 3 ಗಂಟೆಗೆ ಸಂಪಂಗಿ ಕೆರೆಯ ಶಕ್ತಿಪೀಠದಲ್ಲಿ ವಿಶೇಷ ಪೂಜೆ ಹಾಗೂ ಗಂಗೆ ಪೂಜೆ ನೆರವೇರಿಸಲಾಯಿತು. ಕರಗ ಹೊರುವ ಅರ್ಚಕ ಜ್ಞಾನೇಂದ್ರ ಅವರು ಗಂಗೆ ಪೂಜೆ ನೆರವೇರಿಸಿ ಹಸಿಕರಗವನ್ನು ಹೊತ್ತು ವೀರಕುಮಾರರೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಅಲ್ಲಿಂದ ಜಿಬಿಎ ಕೇಂದ್ರ ಕಚೇರಿಯಲ್ಲಿರುವ ಆದಿಶಕ್ತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬುಧವಾರ ಹೂವಿನ ಕರಗ:
ಬುಧವಾರ ರಾತ್ರಿ ಬಹುನಿರೀಕ್ಷೆಯ ಹೂವಿನ ಕರಗ ಜರುಗಲಿದೆ. ಹೂವಿನ ಕರಗ ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ.
ಕರಗದ ವಿಶೇಷ ಅಲಂಕಾರಕ್ಕಾಗಿ ಲಕ್ಷಾಂತರ ರು. ಮೌಲ್ಯದ ತಾಜಾ ಮಲ್ಲಿಗೆ ಹೂವುಗಳನ್ನು ತರಿಸಲಾಗುತ್ತಿದೆ. ಎಂದಿನಂತೆ ವಿಶೇಷ ಕರ್ಪೂರ ಪೂಜೆ ನಡೆಯಲಿದೆ. ಬುಧವಾರ ರಾತ್ರಿ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಹೂವಿನ ಕರಗ ನಗರದ ಪ್ರಮುಖ ಕೇಂದ್ರ ಭಾಗಗಳಲ್ಲಿ ಸಂಚರಿಸಲಿದೆ ಎಂದು ಎಂದು ಕರಗ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಲಕರಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಓಟಿಸಿ ರಸ್ತೆ, ಅವೆನ್ಯೂ ರಸ್ತೆ, ಮಾರ್ಕೆಟ್ ರಸ್ತೆ, ಪೊಲೀಸ್ ರಸ್ತೆ, ಕಾಟನ್ ಪೇಟೆ, ಮಸ್ತಾನ್ ಸಾಬ್ ದರ್ಗಾ, ಬಳೆಪೇಟೆ, ಅಣ್ಣಮ್ಮ ದೇವಾಲಯ, ಕಿಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಜುಮ್ಮಾ ಮಸೀದಿ ಮತ್ತು ತಿಗಳರಪೇಟೆ ಮತ್ತಿತರ ಪ್ರದೇಶಗಳಲ್ಲಿ ಸಂಚರಿಸಲಿದೆ.
ಬಿಗಿ ಬಂದೋಬಸ್ತ್
ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿರುವುದರಿಂದ ಸಂಪಂಗಿ ಕೆರೆ ಮತ್ತು ದೇವಸ್ಥಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಈ ಬಾರಿ ಕರಗ ಮಹೋತ್ಸವದ ಎಲ್ಲ ಹಣಕಾಸು ಲೆಕ್ಕಾಚಾರಗಳು ಮತ್ತು ಪ್ರಕ್ರಿಯೆಗಳು ಅತ್ಯಂತ ಪಾರದರ್ಶಕವಾಗಿ ನಡೆಯಲಿವೆ ಎಂದು ಸಮಿತಿ ತಿಳಿಸಿದೆ.