
ಉಮೇಶ ಮೇಟಿ ಅವರಿಗೆ ಟಿಕೆಟ್ ದೊರಕಬೇಕೆಂದು ಜನರ ಮತ್ತು ನಮ್ಮ ನಿರೀಕ್ಷೆ ಇತ್ತು. ಅದರಂತೆಯೇ ಹೈಕಮಾಂಡ್ ಅವರು ಉಮೇಶ ಮೇಟಿಗೆ ಟಿಕೆಟ್ ನೀಡಿದ್ದಾರೆಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ (ಮಾ.22): ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ದಿ.ಎಚ್.ವೈ.ಮೇಟಿ ಅವರ ಪುತ್ರ ಉಮೇಶ ಮೇಟಿ ಅವರಿಗೆ ಟಿಕೆಟ್ ದೊರಕಬೇಕೆಂದು ಜನರ ಮತ್ತು ನಮ್ಮ ನಿರೀಕ್ಷೆ ಇತ್ತು. ಅದರಂತೆಯೇ ಹೈಕಮಾಂಡ್ ಅವರು ಉಮೇಶ ಮೇಟಿಗೆ ಟಿಕೆಟ್ ನೀಡಿದ್ದಾರೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಸ್ತುತ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮೇಟಿ ಕುಟುಂಬಸ್ಥರ ಮೇಲೆ ಅಲ್ಲಿನ ಜನ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಬಾಗಲಕೋಟೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ನಾವು ಈ ಉಪಚುನಾವಣೆಯ ಗೆಲುವಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ, ಉಮೇಶ ಮೇಟಿ ಗೆಲುವಿಗೆ ಕಷ್ಟವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಾಗಲಕೋಟೆಯಲ್ಲಿ ಉಮೇಶ ಮೇಟಿ ಅವರ ಪರ ಪ್ರಚಾರ ಮಾಡುತ್ತೇನೆ. ಅಲ್ಲದೇ, ದಾವಣಗೆರೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ಪ್ರಚಾರಕ್ಕೂ ಹೋಗುತ್ತೇನೆ. ಆದರೆ, ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರಕ್ಕೆ ಆದ್ಯತೆ ನೀಡುತ್ತೇನೆ. ಎರಡು ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಕುಟುಂಬ ರಾಜಕಾರಣ ನಮ್ಮ ಪಕ್ಷದಲ್ಲಿ ಅಷ್ಟೇ ಇಲ್ಲಾ, ಎಲ್ಲಾ ಪಕ್ಷದಲ್ಲೂ ಇದೆ. ಪಕ್ಷದ ರಾಜ್ಯದಲ್ಲೂ ಇದೆ. ಹೀಗಾಗಿ ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕಿ ಟಕೆಟ್ ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಶಾಸಕರ ವಿರುದ್ಧ ಸಚಿವ ಸತೀಶ ಆಕ್ರೋಶ
ನಗರದ ಕಸ ವಿಲೇವಾರಿ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಬೆಳಗಾವಿ ನಗರದ ಕಸ ವಿಲೇವಾರಿ ಸಮಸ್ಯೆ ಕಳೆದ ಇಪ್ಪತ್ತು ವರ್ಷಗಳಿಂದ ಇದೆ. ಶಾಶ್ವತವಾಗಿ ಸಮಸ್ಯೆ ಬಗೆಹರಿಸಲು ನಗರದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಹೊಸ ಘನತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ನಾನು ಅನೇಕ ಬಾರಿ ಸೂಚಿಸಿದ್ದೇನೆ. ಆದರೆ, ಇದಕ್ಕೆ ಶಾಸಕ ಅಭಯ ಪಾಟೀಲ್ ಅವರು ಆಸಕ್ತಿ ತೋರುತ್ತಿಲ್ಲ. ವರ್ಷಕ್ಕೊಬ್ಬರು ಮಾಹಾನಗರ ಪಾಲಿಕೆ ಆಯುಕ್ತರು ಬದಲಾಗುತ್ತಾರೆ. ಮೇಯರ್, ಉಪಮೇಯರ್ ಮಾಡುವುದೇ ಅವರ ದೊಡ್ಡ ಸಾಧನೆಯಾಗಿದೆ ಎಂದು ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರದ ಅರಣ್ಯ, ಪರಿಸರಿ ಇಲಾಖೆಯ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅನುಮತಿ ದೊರೆಯುತ್ತಿಲ್ಲ. ಆದ್ದರಿಂದ ಈಗಾಗಲೇ ಸಿದ್ದತೆ ಮಾಡಿಕೊಂಡಿದ್ದು ನನ್ನ ನೇತೃತ್ವದಲ್ಲಿಯೇ ಸರ್ವಪಕ್ಷದ ನಿಯೋಗ ಕೊಂಡ್ಯೊಯ್ಯುತ್ತೇನೆ ಎಂದ ಸಚಿವರು, ಹಿಪ್ಪರಗಿ ಬ್ಯಾರೇಜ್ ನ ಗೇಟ್ ಸಂಖ್ಯೆ 22 ಮುರಿದುಬಿದ್ದ ಪರಿಣಾಮ, ಸುಮಾರು 2.5 ರಿಂದ 3.5 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗಿದೆ. ಈ ಗಂಭೀರ ಜಲಸಂಕಷ್ಟ ಪರಿಹರಿಸಲು ಮಹಾರಾಷ್ಟ್ರ ಸರ್ಕಾರದಿಂದ ಹೆಚ್ಚುವರಿ ನೀರನ್ನು ಬಿಡುಗಡೆಗೊಳಿಸುವಂತೆ ಕೋರಲು ಕರ್ನಾಟಕದ ಜನಪ್ರತಿನಿಧಿಗಳ ನಿಯೋಗವು ಮಹಾರಾಷ್ಟ್ರಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದರು.