ಸಾಮರ್ಥ್ಯ ಇರೋರಿಗೆ ಸಿಗುತ್ತಿಲ್ಲ ಅವಕಾಶ, ಕರ್ನಾಟಕ ಕ್ರೀಡಾ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ! ಸಿಡೆದಿದ್ದ ಅಥ್ಲೀಟ್ಸ್‌ | Karnataka Mission Olympics Scheme Row Athletes Allege Bias And Lack Of Transparency In Selection Gdp

ಸಾಮರ್ಥ್ಯ ಇರೋರಿಗೆ ಸಿಗುತ್ತಿಲ್ಲ ಅವಕಾಶ, ಕರ್ನಾಟಕ ಕ್ರೀಡಾ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ! ಸಿಡೆದಿದ್ದ ಅಥ್ಲೀಟ್ಸ್‌ | Karnataka Mission Olympics Scheme Row Athletes Allege Bias And Lack Of Transparency In Selection Gdp



ಸಾಮರ್ಥ್ಯ ಇರೋರಿಗೆ ಸಿಗುತ್ತಿಲ್ಲ ಅವಕಾಶ, ಕರ್ನಾಟಕ ಕ್ರೀಡಾ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ! ಸಿಡೆದಿದ್ದ ಅಥ್ಲೀಟ್ಸ್‌ | Karnataka Mission Olympics Scheme Row Athletes Allege Bias And Lack Of Transparency In Selection Gdp

ಕರ್ನಾಟಕದ ‘ಮಿಷನ್ ಒಲಿಂಪಿಕ್ಸ್’ ಯೋಜನೆಯಲ್ಲಿ ಅರ್ಹ ಕ್ರೀಡಾಪಟುಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಮತ್ತು ರಾಜಕೀಯ ಪ್ರಭಾವವಿದೆ ಎಂದು ಆರೋಪಿಸಿರುವ ಅವರು, ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮ ಸೇರಿದಂತೆ ಹಲವರು ತನಿಖೆಗೆ ಒತ್ತಾಯಿಸಿದ್ದಾರೆ.

ಕರ್ನಾಟಕ ಕ್ರೀಡಾ ಇಲಾಖೆಯ ವಿರುದ್ಧ ಕ್ರೀಡಾಪಟುಗಳ ಅಸಮಾಧಾನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮಿಷನ್ ಒಲಿಂಪಿಕ್ಸ್ ಯೋಜನೆಯಡಿ ಅರ್ಹ ಕ್ರೀಡಾಪಟುಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಮತ್ತು ರಾಜಕೀಯ ಪ್ರಭಾವವಿದೆ ಎಂಬ ಗಂಭೀರ ಆರೋಪಗಳು ಹೊರಹೊಮ್ಮಿವೆ.

ರಾಜ್ಯವನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಪದಕಗಳನ್ನು ಜಯಿಸಿದ ಕ್ರೀಡಾಪಟುಗಳೇ ಈ ಯೋಜನೆಯಿಂದ ಹೊರಗುಳಿದಿದ್ದಾರೆ ಎನ್ನುವುದು ಪ್ರಮುಖ ಆಕ್ಷೇಪವಾಗಿದೆ. ಒಲಿಂಪಿಕ್ಸ್‌ಗೆ ತಯಾರಿ ನಡೆಸುವ ಸಾಮರ್ಥ್ಯ ಹೊಂದಿರುವ ಕ್ರೀಡಾಪಟುಗಳಿಗೆ ಸರ್ಕಾರ ವರ್ಷಕ್ಕೆ ₹10 ಲಕ್ಷ ಆರ್ಥಿಕ ನೆರವು ನೀಡುವ ಮಿಷನ್ ಒಲಿಂಪಿಕ್ಸ್ ಯೋಜನೆ ಜಾರಿಯಲ್ಲಿದ್ದು, ನಾಲ್ಕು ವರ್ಷಗಳ ಕಾಲ ಈ ನೆರವು ನೀಡಲಾಗುತ್ತದೆ. ಆದರೆ ಈ ಸೌಲಭ್ಯ ಅರ್ಹರಿಗೆ ಸಿಗುತ್ತಿಲ್ಲ ಎಂಬುದು ಕ್ರೀಡಾಪಟುಗಳ ಆರೋಪ.

“ಅರ್ಹರಿಗೆ ಅವಕಾಶ ಇಲ್ಲ” ಕ್ರೀಡಾಪಟು ಅಸಮಾಧಾನ

ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾತನಾಡಿದ ಕ್ರೀಡಾಪಟು ಸ್ನೇಹಾ, “ನಾವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಹಾಗೂ ಭಾರತವನ್ನು ಪ್ರತಿನಿಧಿಸಿ ಪದಕಗಳನ್ನು ಜಯಿಸಿದ್ದೇವೆ. ಆದರೂ ನಮ್ಮನ್ನು ಮಿಷನ್ ಒಲಿಂಪಿಕ್ಸ್ ಯೋಜನೆಯಲ್ಲಿ ಪರಿಗಣಿಸಲಾಗಿಲ್ಲ. ಯಾವುದೇ ಗಮನಾರ್ಹ ಸಾಧನೆ ಮಾಡದ ಕೆಲ ಕ್ರೀಡಾಪಟುಗಳನ್ನು ರಾಜಕೀಯ ಪ್ರಭಾವದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮ ಕೂಡ ಆಕ್ರೋಶ

ಟಾರ್ಗೆಟ್ ಒಲಿಂಪಿಕ್ ಸ್ಕೀಮ್ ಹಂಚಿಕೆ ಕುರಿತು ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ ತಯಾರಿಗೆ ವರ್ಷಕ್ಕೆ ₹10 ಲಕ್ಷ ನೀಡಲಾಗುತ್ತಿದೆ. ನಾವು ಕೂಡ ಅರ್ಜಿ ಸಲ್ಲಿಸಿದ್ದೇವೆ. ಆದರೆ ಕೇವಲ ಕೆಲವರಿಗೆ ಮಾತ್ರ ಹಣ ಜಮೆಯಾಗಿದೆ. ವಯಸ್ಸಿನ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 2024ರಲ್ಲಿಯೂ ಈ ಯೋಜನೆಯಡಿ ನನಗೆ ಯಾವುದೇ ನೆರವು ಸಿಗಲಿಲ್ಲ. ಆದರೆ ಹಣ ಪಡೆದ ಕೆಲವರು ಒಲಿಂಪಿಕ್ಸ್‌ಗೆ ಆಯ್ಕೆಯಾಗಲಿಲ್ಲ. ಈ ಬಾರಿಯೂ ಹಲವಾರು ಅರ್ಹ ಕ್ರೀಡಾಪಟುಗಳು ಹೊರಗುಳಿದಿದ್ದಾರೆ,” ಎಂದು ಆರೋಪಿಸಿದ್ದಾರೆ.

“ಪ್ರದರ್ಶನವೇ ಮಾನದಂಡವಾಗಲಿ”

ಪೂವಮ್ಮ ಅವರು ಕೇಂದ್ರ ಸರ್ಕಾರದ ಟಾಪ್ (TOPS) ಯೋಜನೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿ, “ಅಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ರ್ಯಾಂಕಿಂಗ್ ಹಾಗೂ ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇದೇ ಮಾದರಿಯನ್ನು ಇಲ್ಲಿ ಕೂಡ ಅನುಸರಿಸಬೇಕು. ವಯಸ್ಸು ಮುಖ್ಯವಲ್ಲ, ಪ್ರದರ್ಶನವೇ ಮುಖ್ಯ ಮಾನದಂಡವಾಗಬೇಕು,” ಎಂದು ಹೇಳಿದ್ದಾರೆ.

ತನಿಖೆಗೆ ಒತ್ತಾಯ

ಕ್ರೀಡಾಪಟುಗಳು ಮುಖ್ಯಮಂತ್ರಿಗಳಿಗೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. 2024ರ ಒಲಿಂಪಿಕ್ಸ್ ತಯಾರಿ ಸಹಾಯಧನ ವಿತರಣೆ ಕುರಿತು ಸ್ಪಷ್ಟತೆ ಇಲ್ಲದಿರುವುದು ಹಾಗೂ ಹಣ ಪಡೆದವರ ಪಟ್ಟಿಯನ್ನು ಬಹಿರಂಗಪಡಿಸದಿರುವುದೂ ಅನುಮಾನಗಳಿಗೆ ಕಾರಣವಾಗಿದೆ.

ಇದಲ್ಲದೆ, 2028ರ ಒಲಿಂಪಿಕ್ಸ್ ತಯಾರಿ ಸಹಾಯಧನ ಸೇರಿದಂತೆ ಹಳೆಯ ಅನುದಾನಗಳ ವಿತರಣೆಯಲ್ಲೂ ರಾಜಕೀಯ ಹಸ್ತಕ್ಷೇಪವಿದೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರಭಾವ ಬಳಸಿ ಅನೇಕ ಕ್ರೀಡಾಪಟುಗಳ ಹೆಸರನ್ನು ಸೇರಿಸಲಾಗಿದೆ ಎಂಬುದು ಕ್ರೀಡಾಪಟುಗಳ ಮತ್ತೊಂದು ಗಂಭೀರ ಆರೋಪವಾಗಿದೆ.

ಒಟ್ಟಾರೆ, ಮಿಷನ್ ಒಲಿಂಪಿಕ್ಸ್ ಯೋಜನೆಯ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ, ರಾಜಕೀಯ ಪ್ರಭಾವ ಮತ್ತು ಅರ್ಹ ಕ್ರೀಡಾಪಟುಗಳ ಕಡೆಗಣನೆ ಎಂಬ ಆರೋಪಗಳು ಕರ್ನಾಟಕ ಕ್ರೀಡಾ ಇಲಾಖೆಗೆ ಸವಾಲಾಗಿ ಪರಿಣಮಿಸಿವೆ. ತಕ್ಷಣವೇ ನ್ಯಾಯಸಮ್ಮತ ಹಾಗೂ ಪಾರದರ್ಶಕ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೆ ತರುವಂತೆ ಕ್ರೀಡಾಪಟುಗಳು ಆಗ್ರಹಿಸಿದ್ದಾರೆ.



Source link

Leave a Reply

Your email address will not be published. Required fields are marked *