
ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಗಂಭೀರ ನಿರ್ಲಕ್ಷ್ಯ ತೋರಿದ್ದಾರೆ. ಎಡಗಾಲಿನಲ್ಲಿದ್ದ ರಾಡ್ ತೆಗೆಯಲು ಬಂದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ವೈದ್ಯರ ತಪ್ಪಿನಿಂದಾಗಿ ಮಹಿಳೆ ಇದೀಗ ಎರಡೂ ಕಾಲುಗಳಿಗೆ ಬ್ಯಾಂಡೇಜ್ ಹಾಕಿಕೊಂಡು ಹಾಸಿಗೆ ಹಿಡಿದಿದ್ದಾರೆ.
ಹಾಸನ (ಸೆ.23): ಹಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ ಡಾ ಸಂತೋಷ್ ವಿರುದ್ಧ ಗಂಭೀರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಎಡಗಾಲಿನಲ್ಲಿ ಅಳವಡಿಸಿದ್ದ ರಾಡ್ ತೆಗೆಯಲು ಹೋಗಿ ಬಲಗಾಲಿಗೆ ಶಸ್ತ್ರಚಿಕಿತ್ಸೆ ನಡೆಸಲು ಕೊಯ್ದ ಘಟನೆ ನಡೆದಿದೆ.
ಹಿಮ್ಸ್ ಆಸ್ಪತ್ರೆ ವೈದ್ಯರ ಎಡವಟ್ಟು ಹೇಗಾಯ್ತು?
ಚಿಕ್ಕಮಗಳೂರು ಜಿಲ್ಲೆಯ ಬೂಚನಹಳ್ಳಿ ಕಾವಲು ಗ್ರಾಮದ ಜ್ಯೋತಿ, ಎರಡೂವರೆ ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಎಡಗಾಲಿಗೆ ಗಂಭೀರ ಗಾಯಗೊಂಡಿದ್ದರು. ಆಗ ಎಡಗಾಲಿಗೆ ರಾಡ್ ಅಳವಡಿಸಲಾಗಿತ್ತು. ಇತ್ತೀಚೆಗೆ ರಾಡ್‌ನಿಂದ ಕಾಲುನೋವು ಕಾಣಿಸಿಕೊಂಡಿದ್ದರಿಂದ, ಜ್ಯೋತಿ ಡಾ. ಸಂತೋಷ್ ಅವರನ್ನು ಸಂಪರ್ಕಿಸಿದ್ದರು. ರಾಡ್ ತೆಗೆಯಲು ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದ ವೈದ್ಯರು ಅದರಂತೆ ಶನಿವಾರ ಜ್ಯೋತಿಯನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದರು.
ಎಡಗಾಲು ಬದಲು ಬಲಗಾಲು ಕೊಯ್ದ ವೈದ್ಯರು!
ನಿನ್ನೆ (ಸೋಮವಾರ) ನಡೆದ ಶಸ್ತ್ರಚಿಕಿತ್ಸೆ ವೇಳೆ, ಎಡಗಾಲಿನ ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ ನಡೆಸಿ ಗಂಭೀರ ಯಡವಟ್ಟು ಮಾಡಿದ್ದಾರೆ. ತಪ್ಪಿನ ಅರಿವಾದ ಬಳಿಕ ಎಡಗಾಲಿನಲ್ಲಿ ಅಳವಡಿಸಲಾಗಿದ್ದ ರಾಡ್ ತೆಗೆದರೂ, ಬಲಗಾಲು ಕೊಯ್ದಿದ್ದರಿಂದ ಎರಡೂ ಕಾಲುಗಳಿಗೆ ಬ್ಯಾಂಡೇಜ್ ಸುತ್ತಿರುವ ವೈದ್ಯರು. ಇದರಿಂದ ಜ್ಯೋತಿ ಓಡಾಡಲಾಗದೆ ಹಾಸಿಗೆ ಹಿಡಿದಿದ್ದಾರೆ. ಪ್ರಸ್ತುತ ಅವರು ಹಿಮ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಟುಂಬಸ್ಥರು ಆಕ್ರೋಶ:
ವೈದ್ಯರ ನಿರ್ಲಕ್ಷ್ಯದಿಂದ ತೀವ್ರ ನೋವು ಅನುಭವಿಸುತ್ತಿರುವ ಜ್ಯೋತಿ ಹಾಗೂ ಅವರ ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾ. ಸಂತೋಷ್ ಅವರ ತಪ್ಪಿನಿಂದ ತಮಗಾದ ಶಾರೀರಿಕ-ಮಾನಸಿಕ ಕಷ್ಟಕ್ಕೆ ಜ್ಯೋತಿ ಮತ್ತು ಕುಟುಂಬ ಕಣ್ಣೀರಿಡುತ್ತಿದ್ದಾರೆ. ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದೆ. ಆದರೆ ಹಿಮ್ಸ್ ಆಸ್ಪತ್ರೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಈ ಘಟನೆಯಿಂದ ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.