Headlines

Blood Donation: ರಕ್ತದಾನ ಮಹಾದಾನ: ಯಾರು ಮಾಡಬಹುದು? ಏನು ಲಾಭ? ಇಲ್ಲಿದೆ ಸಂಪೂರ್ಣ ಮಾಹಿತಿ | Blood Donation Awareness Benefits Rules Kannada Health Gvd

Blood Donation: ರಕ್ತದಾನ ಮಹಾದಾನ: ಯಾರು ಮಾಡಬಹುದು? ಏನು ಲಾಭ? ಇಲ್ಲಿದೆ ಸಂಪೂರ್ಣ ಮಾಹಿತಿ | Blood Donation Awareness Benefits Rules Kannada Health Gvd



Blood Donation: ರಕ್ತದಾನ ಮಹಾದಾನ: ಯಾರು ಮಾಡಬಹುದು? ಏನು ಲಾಭ? ಇಲ್ಲಿದೆ ಸಂಪೂರ್ಣ ಮಾಹಿತಿ | Blood Donation Awareness Benefits Rules Kannada Health Gvd

ಹಿಮೋಗ್ಲೋಬಿನ್ ಅಧಿಕವಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವರಲ್ಲಿ ಅದು 18ರಿಂದ 23ರ ತನಕವೂ ಹೋಗಿ, ರಕ್ತ ದಪ್ಪವಾಗುತ್ತದೆ. ಇದರಿಂದ, ನರಗಳಲ್ಲಿ ನೀರಂತೆ ಹರಿಯುವ ನೆತ್ತರು ಗಟ್ಟಿಯಾಗಿ, ಗಂಟಾಗಿ ತೊಂದರೆಯಾಗುತ್ತದೆ.

ಮೈತ್ರಿ ಎಸ್‌. ಅಶ್ವತ್ಥಪುರ

ಮಹಾದಾನವೆಂದು ಕರೆಸಿಕೊಳ್ಳುವ ರಕ್ತದಾನದ ಬಗ್ಗೆ, ಕಳೆದ 38 ವರ್ಷಗಳಿಂದ ರಕ್ತದ ಒಡನಾಟದಲ್ಲಿರುವ ಬೆಂಗಳೂರಿನ ಲಯನ್ಸ್ ಇಂಟರ್ನ್ಯಾಷ್ನಲ್ ಬ್ಲಡ್ ಸೆಂಟರ್‌ನ ಹಿರಿಯ ವೈದ್ಯಾಧಿಕಾರಿಯಾಗಿರುವ ಡಾ| ಬಾಲರಾಜ್ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಕಣ್ಣಿನಿಂದ ಕಿಡ್ನಿಯ ತನಕ, ಹೃದಯದಿಂದ ಮೆದುಳಿನ ವರೆಗೆ ಹಲವು ಅಂಗಗಳನ್ನು ದಾನ ಮಾಡಬಹುದು. ಆದರೆ ಅದು ಸಾಧ್ಯವಾಗುವುದು ಮರಣಾನಂತರ. ಹೀಗಿದ್ದರೂ ನಮ್ಮ ದೇಹದ ಒಂದು ಭಾಗವನ್ನು ನಾವು ಜೀವಂತವಾಗಿರುವಾಗಲೇ ದಾನ ಮಾಡಬಹುದು, ಅದೂ ವರ್ಷದಲ್ಲೆರಡು ಬಾರಿ ಎಂದರೆ ಅದು ರಕ್ತವನ್ನು ಮಾತ್ರ.

ದೇಶದ ಜೀವಾಳವಾಗಿರುವ ನದಿಗಳು ನಕ್ಷೆಯಲ್ಲಿ ನೀಲಿ ರೇಖೆಯಂತೆ ಕಾಣುವಂದದಿ ನಮ್ಮ ದೇಹದಲ್ಲೂ ಹಸಿರು ಕಾಲುವೆಗಳಲ್ಲಿ ಕೆಂಪು ನೆತ್ತರು ಹರಿಯುವುದನ್ನು ನೋಡಬಹುದು. ಶರೀರದಲ್ಲಿ ಸುಮಾರು 4.5 ಲೀ.ನಷ್ಟಿರುವ ರಕ್ತದಲ್ಲಿ ಶೇ.8-9ರಷ್ಟನ್ನು ದಾನ ಮಾಡಿದರೂ ನಮ್ಮಲ್ಲಿ ಅದರ ಕೊರತೆಯಾಗದು ಎಂಬುದೇ ವಿಶೇಷ.

ರಕ್ತದಾನ ಯಾಕೆ ಮಾಡಬೇಕು?: ಜೀವದ್ರವವಾದ ನೆತ್ತರನ್ನು ಕೃತಕವಾಗಿ ಸೃಷ್ಟಿಸಲು ವಿಜ್ಞಾನಕ್ಕಿನ್ನೂ ಸಾಧ್ಯವಿಲ್ಲ. ಅಗತ್ಯವಿದ್ದಾಗ ರಕ್ತವನ್ನು ಇನ್ನೊಬ್ಬ ಮಾನವನ ದೇಹದಿಂದಲೇ ಪಡೆಯಬೇಕಾಗುವುದು. ಅಪಘಾತ, ಶಸ್ತ್ರಚಿಕಿತ್ಸೆ, ಪ್ರಸವ, ಕ್ಯಾನ್ಸರ್ ಚಿಕಿತ್ಸೆಯ ವೇಳೆ ಔಷಧಿಗಳಷ್ಟೇ ಅಗತ್ಯವಾದುದು ರಕ್ತ. ಹೀಗಾಗಿ, ನಾವು ದಾನ ಮಾಡಿದ ರಕ್ತವು ಇನ್ಯಾರದೋ ಜೀವವನ್ನುಳಿಸುತ್ತದೆ ಎಂದರೆ ಅದಕ್ಕಿಂತ ದೊಡ್ಡ ಸಂತೃಪ್ತಿ ಇರಲಾರದು. ಅಂತೆಯೇ, ರಕ್ತ ನೀಡಿದ ಬಳಿಕ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುವುದು ವೈಯಕ್ತಿಕ ಲಾಭ. ಕೊಲೆಸ್ಟ್ರಾಲ್ ಮಟ್ಟವೂ ಇಳಿಕೆಯಾಗುವ ಕಾರಣ ಹೃದಯಾಘಾತದ ಸಾಧ್ಯತೆ ಕಮ್ಮಿಯಾಗುತ್ತದೆ. ಭೌತಿಕ ಲಾಭ ನೋಡುವುದಾದರೆ, 1,000 ರು.ನಿಂದ 1,500 ರು. ಬೆಲೆಯ 1 ಯೂನಿಟ್ ರಕ್ತವನ್ನು ನಮಗೆ ಅಥವಾ ನಮ್ಮವರಿಗೆ ಅಗತ್ಯವಿದ್ದಾಗ ರಕ್ತನಿಧಿಯಿಂದ ಉಚಿತವಾಗಿ ಪಡೆಯಬಹುದು.

ಯಾರ್ಯಾರು ಕೊಡಬಹುದು: 18 ವರ್ಷ ಮೇಲ್ಪಟ್ಟ ಯಾರಾದರೂ ರಕ್ತದಾನವನ್ನು ಮಾಡಬಹುದು. ಆದರೂ ದಾನಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಅದರನ್ವಯ ವಯಸ್ಸಿಗೆ ತಕ್ಕಂತೆ ದೇಹದ ತೂಕ (ಸರಾಸರಿ 45 ಕೆ.ಜಿ.) ಇರಬೇಕು. ರಕ್ತದೊತ್ತಡ ಸಾಮಾನ್ಯವಾಗಿರಬೇಕು. ಹಿಮೋಗ್ಲೋಬಿನ್ ಪ್ರಮಾಣ ಕನಿಷ್ಠ 12.5ರಷ್ಟಿರುವುದು ಕಡ್ಡಾಯ. ಪುರುಷರು 3 ತಿಂಗಳಿಗೊಮ್ಮೆ ಹಾಗೂ ಸ್ತ್ರೀಯರು 4 ಮಾಸಗಳಿಗೊಮ್ಮೆ ರಕ್ತದಾನ ಮಾಡಲು ಅನುಮತಿಯಿದೆ. ಈ ಮಹದ್ಕಾರ್ಯವನ್ನು 65ರ ಹರೆಯದ ತನಕ ಮಾಡಬಹುದಾಗಿದೆ.

ಯಾರ್ಯಾರು ಮಾಡಬಾರದು?: ಹಿಮೋಗ್ಲೋಬಿನ್, ದೇಹದ ತೂಕ, ಬಿ.ಪಿ.ಗಳಂತಹ ಅಂಶಗಳನ್ನು ಹೊರತುಪಡಿಸಿ, ಆ್ಯಂಟಿಬಯೋಟಿಕ್‌ನಂತಹ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ಆ ಸಮಯದಲ್ಲಿ ರಕ್ತದಾನ ಮಾಡುವಂತಿಲ್ಲ. ಅಂತೆಯೇ ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ, ಗರ್ಭಿಣಿಯಾಗಿರುವಾಗ, ಬಾಣಂತಿಯಾಗಿರುವಾಗ ಅಥವಾ ಎದೆಹಾಲುಣಿಸುತ್ತಿರುವಾಗ ರಕ್ತದಾನ ಮಾಡಲು ಶಕ್ತರಾಗಿರುವುದಿಲ್ಲ. ಇಂದು ಸ್ಟೈಲ್‌ ಹೆಸರಲ್ಲಿ ಸಾಮಾನ್ಯವಾಗಿಬಿಟ್ಟಿರುವ ಟ್ಯಾಟೂವನ್ನು ಹಾಕಿಸಿಕೊಂಡ 1 ವರ್ಷದ ವರೆಗೂ ನೆತ್ತರದಾನ ವರ್ಜಿತ. ಧೂಮಪಾನದ ಚಟವಿರುವವರು ರಕ್ತಕೇಂದ್ರಕ್ಕೆ ಕಾಲಿಡುವ 6 ತಾಸುಗಳ ಮೊದಲೇ ಹೊಗೆಬತ್ತಿಯಿಂದ ಅಂತರ ಕಾಯ್ದುಕೊಂಡಿರಬೇಕು. ಮದ್ಯವು ನೇರವಾಗಿ ರಕ್ತಕ್ಕೇ ಸೇರಿಕೊಳ್ಳುವ ಕಾರಣ, ರಕ್ತವನ್ನು ಕೊಡುವ 24 ಗಂಟೆಗಳ ಮುನ್ನವೇ ಮದ್ಯಪ್ರಿಯರು ಮನಸ್ಸು ಗಟ್ಟಿ ಮಾಡಿಕೊಂಡು ಅದರಿಂದ ದೂರವಿರಬೇಕು.

ಅನೇಮಿಯಾ ಗೆಲ್ಲೋದು ಹೇಗೆ?: ಮಹಿಳೆಯರಲ್ಲಿ ಹಿಮೊಗ್ಲೋಬಿನ್ ಪ್ರಮಾಣ 12ರಿಂದ 14 ಹಾಗೂ ಪುರುಷರಲ್ಲದು 14-16 ಇರುತ್ತದೆ. ಇದು 10ಕ್ಕಿಂತ ಕೆಳಗಿಳಿದರೆ ಅನೇಮಿಯಾ ಎನ್ನಲಾಗುತ್ತದೆ. ರಕ್ತದಲ್ಲಿ ಕಬ್ಬೀಣಾಂಶದ ಕೊರತೆಯಿಂದ ಕಾಣಿಸಿಕೊಳ್ಳುವ ಇದು ಕೆಲವರಲ್ಲಿ ಅನುವಂಶಿಕವಾಗಿ ಬಂದಿರುವ ಸಾಧ್ಯತೆಯಿರುತ್ತದೆ. ಮಾಂಸಾಹಾರಿಗಳು ರೆಡ್ ಮೀಟ್ ಸೇವನೆಯಿಂದ ಈ ಕೊರತೆಯನ್ನು ನೀಗಿಸಿಕೊಳ್ಳಬಹುದಾದರೆ, ಸಸ್ಯಹಾರಿಗಳಿಗೆ ಹಣ್ಣು, ತರಕಾರಿ, ಸೊಪ್ಪುಗಳೇ ಮದ್ದು. ಅದರಲ್ಲೂ ದಾಳಿಂಬೆ, ಕಲ್ಲಂಗಡಿ, ಸಿಟ್ರಸ್(ಹುಳಿ) ಅಂಶವಿರುವ ಫಲಗಳು, ಬೀಟ್ರೂಟ್, ಒಣಹಣ್ಣುಗಳು, ಪಾಲಕ್ ಸಹಕಾರಿ. ಇವೆಲ್ಲವುಗಳ ಸೇವನೆಯಿಂದಲೂ ಸುಧಾರಿಸದಿದ್ದರೆ ಹಿಮೋಗ್ಲೋಬಿನ್ ಹೆಚ್ಚಿಸಲೆಂದೇ ಇರುವ ಮಾತ್ರೆಗಳ ನೆರವು ಪಡೆಯಬಹುದು.

ಹೆಚ್ಚಾದ್ರೂ ತೊಂದರೆ: ಹಿಮೋಗ್ಲೋಬಿನ್ ಅಧಿಕವಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವರಲ್ಲಿ ಅದು 18ರಿಂದ 23ರ ತನಕವೂ ಹೋಗಿ, ರಕ್ತ ದಪ್ಪವಾಗುತ್ತದೆ. ಇದರಿಂದ, ನರಗಳಲ್ಲಿ ನೀರಂತೆ ಹರಿಯುವ ನೆತ್ತರು ಗಟ್ಟಿಯಾಗಿ, ಗಂಟಾಗಿ ತೊಂದರೆಯಾಗುತ್ತದೆ. ಇದೂ ಸಹ ರಕ್ತದಾನದಿಂದ ಪರಿಹಾರವಾಗುತ್ತದೆ.

ರಕ್ತದೊಳಗಡಗಿವೆ 3 ಅಂಶಗಳು: ಕೆಂಪಗಿರುವ ರಕ್ತದಲ್ಲಿ ಹಳದಿ ಬಣ್ಣದ ಪ್ಲಾಸ್ಮಾ ಮತ್ತು ಪ್ಲೇಟ್ಲೆಟ್‌ಗಳಿರುತ್ತವೆ. ದಾನಿಯ ಮೈಯ್ಯಿಂದ ಹೀರಿದ ನೆತ್ತರನ್ನನು ಸೆಂಟ್ರಿಫ್ಯೂಜ್ ಮಾಡುವ ಮೂಲಕ ಈ 3 ಅಂಶಗಳಾಗಿ ಬೇರ್ಪಡಿಸಲಾಗುವುದು. 450 ಎಂ.ಎಲ್ ರಕ್ತದಿಂದ 200 ಎಂ.ಎಲ್. ಕೆಂಪುಕಣ, ಅಷ್ಟೇ ಪ್ರಮಾಣದ ಪ್ಲಾಸ್ಮಾ ಮತ್ತು 50 ಎಂ.ಎಲ್. ಪ್ಲೇಟ್ಲೆಟ್ ಸಿಗುತ್ತದೆ. ಅಗತ್ಯವಿರುವ ಪರೀಕ್ಷೆಗಳ ಬಳಿಕ ಅವನ್ನು ಶೇಖರಿಸಲಾಗುವುದು ಹಾಗೂ ಆವಶ್ಯಕತೆಗೆ ತಕ್ಕಂತೆ ಬಳಸಲಾಗುವುದು. ಇಲ್ಲಿ ದಾನಿಯ ಮೈಯ್ಯಿಂದ ತೆಗೆದ ರಕ್ತವು ರೋಗಿಯ ಮೈಸೇರುವ ತನಕ ಎಲ್ಲಿಯೂ ಬಾಹ್ಯ ಪರಿಸರದೊಂದಿಗೆ ಸಂಪರ್ಕಕ್ಕೆ ಬರುವುದಿಲ್ಲ ಎಂಬುದು ವಿಶೇಷ. ಆದ್ದರಿಂದಲೇ ಇದನ್ನು ‘ನರದಿಂದ ನರದ ವರೆಗಿನ ಪ್ರಕ್ರಿಯೆʼ(ವೇಯ್ನ್‌ ಟು ವೇಯ್ನ್‌) ಎನ್ನುವುದು.

ರಕ್ತಕ್ಕೂ ಇದೆ ಎಕ್ಸ್‌ಪೈರಿ ಡೇಟ್: ಜೀವದ್ರವವಾಗಿರುವ ರಕ್ತ ಅಲ್ಪಾಯುಷಿ. ಪ್ಲೇಟ್ಲೆಟ್‌ಗಳನ್ನು 5 ದಿನ, ಕೆಂಪು ಕಣಗಳನ್ನು 35 ದಿನ, ಪ್ಲಾಸ್ಮಾ 1 ವರ್ಷದ ವರೆಗೆ ವಿವಿಧ ಉಷ್ಣಾಂಶದಲ್ಲಿ ಶೇಖರಿಸಿಡಬಹುದು. ಇಷ್ಟು ಕಾಲವಾದ ಬಳಿಕ ನಿರುಪಯುಕ್ತವಾಗುವ ಅವುಗಳನ್ನು ವಿಶೇಷ ಸಾಧನ ಬಳಸಿ ಸುಟ್ಟು ವಿಲೇವಾರಿ ಮಾಡಲಾಗುತ್ತದೆ. ಕೆಲವನ್ನು ಔಷಧಿ ತಯಾರಿಕೆಗೂ ಬಳಸಲಾಗುವುದು.

ಫೇಕ್ ಬ್ಲಡ್ ಸೆಂಟರ್ ತಿಳಿಯೋದ್ಹೇಗೆ?: ಅನ್ಯಾಯದ ಕೆಲಸವನ್ನು ಕದ್ದುಮುಚ್ಚಿ ಮಾಡಲಾಗುತ್ತದೆ. ಆದ್ದರಿಂದ ಬ್ಲಡ್ ಸೆಂಟರ್ ನಕಲಿಯಾದಲ್ಲಿ ಅದರೆದುರು ದೊಡ್ಡ ಬೋರ್ಡ್ ಆಗಲಿ, ಒಳಗೆ ಲೈಸೆನ್ಸ್ ಆಗಲಿ ಪ್ರದರ್ಶನಕ್ಕೆ ಇರುವುದಿಲ್ಲ. ಆನ್‌ಲೈನ್‌ನಲ್ಲೂ ಅಧಿಕೃತ ಅಸ್ತಿತ್ವ ಇರುವುದಿಲ್ಲ. ಅಂತೆಯೇ ಯಾವ ವೈದ್ಯರೂ ಅನಧಿಕೃತ ಸೆಂಟರ್‌ಗಳಿಂದ ರಕ್ತ ಕೊಂಡು ತರಲು ಸೂಚಿಸುವುದಿಲ್ಲ. ಅಧಿಕೃತ ಬ್ಲಡ್ ಸೆಂಟರ್‌ಗಳಲ್ಲಿ ಅಗತ್ಯ ಪರೀಕ್ಷೆಗಳನ್ನು ಮಾಡಿದ ಬಳಿಕವಷ್ಟೇ ರಕ್ತವನ್ನು ತೆಗೆಯುತ್ತಾರೆ ಹಾಗೂ ವೈದ್ಯರ ಪ್ರಿಸ್ಕ್ರಿಪ್ಷನ್ ಇದ್ದರಷ್ಟೇ ರಕ್ತವನ್ನು ಕೊಡುತ್ತಾರೆ. ಈ ನಿಯಮಗಳನ್ನು ಪಾಲಿಸದಿದ್ದಲ್ಲಿಗಾ ಕೇಂದ್ರದ ಜಾತಕ ಜಾಲಾಡುವುದು ಅಗತ್ಯ.

ರಕ್ತಸಂಬಂಧಿಗಳಿಗೆ ಕೊಡ್ಬೇಡಿ: ಯಾರಿಗಾದರೂ ತುರ್ತಾಗಿ ನೆತ್ತರು ಬೇಕಾದಾಗ ಅವರ ಹತ್ತಿರದ ಸಂಬಂಧಿಗಳಿಂದ ಪಡೆದರೆ ಸೂಕ್ತ ಎಂದು ಭಾವಿಸಲಾಗುತ್ತದೆ. ಆದರೆ ವೈದ್ಯರ ಪ್ರಕಾರ, ಅಪರಿಚಿತರ ರಕ್ತವೇ ಅತ್ಯುತ್ತಮ. ಮಕ್ಕಳು ತಂದೆ-ತಾಯಿಗೆ, ಹೆತ್ತವರು ಮಕ್ಕಳಿಗೆ ಅಥವಾ ಒಡಹುಟ್ಟಿದವರಿಗೆ ರಕ್ತವನ್ನು ಕೊಡಬಾರದು. ಕಾರಣ, ತೀರಾ ಹತ್ತಿರದ ಸಂಬಂಧಿಕರ ರಕ್ತದಲ್ಲಿನ ಡಿಎನ್‌ಎ ಸಾಮ್ಯವಾಗಿರುತ್ತದೆ. ಇದರಿಂದ ಟಿಎ-ಜಿವಿಎಚ್‌ಡಿಯಂತಹ ಕಾಯಿಲೆಗಳು ಬರುವ ಸಂಭವವಿರುತ್ತದೆ. ಆದ್ದರಿಂದಲೇ ವೈದ್ಯರು ಅಗತ್ಯವಿದ್ದಾಗ ರಕ್ತ ಕೇಂದ್ರಗಳಿಂದ ಅದನ್ನು ತರುವಂತೆ ಸೂಚಿಸುವುದು.

ಸತ್ಯ/ಮಿಥ್ಯ

ರಕ್ತದಾನ ಮಾಡುವಾಗ ತುಂಬಾ ನೋವಾಗುತ್ತದೆ- ಸೊಳ್ಳೆ ಕಚ್ಚಿಸಿಕೊಂಡಂತೆ

ನನ್ನಲ್ಲಿ ರಕ್ತದ ಕೊರತೆಯಾಗುತ್ತದೆ, ನಿಶ್ಶಕ್ತನಾಗುತ್ತೇನೆ- ಖಂಡಿತ ಇಲ್ಲ

ಕಬ್ಬಿಣಾಂಶ ಕಮ್ಮಿಯಾಗುತ್ತದೆ- ಆ ಕ್ಷಣಕ್ಕೆ ಆದರೂ ಮರುಪೂರಣಗೊಳಿಸುವ ಶಕ್ತಿ ದೇಹಕ್ಕಿದೆ

ಕಾಯಿಲೆ ಬರುತ್ತದೆ- ಸೂಜಿಯೊಂದು ಶುಚಿಯಾಗಿದ್ದರೆ ಆತಂಕದ ಅಗತ್ಯವಿಲ್ಲ

ರಕ್ತಸಂಬಂಧಿಗಳಿಗಷ್ಟೇ ಕೊಡಬೇಕು- ಕೊಡಲೇಬಾರದು. ಸಮಸ್ಯೆಯಾಗುವ ಸಾಧ್ಯತೆ ಹೆಚ್ಚು

ರಕ್ತವು ವಿದೇಶಕ್ಕೆ ರಫ್ತಾಗುತ್ತದೆ- ವಾಸಿಸುವ ಪರಿಸರಕ್ಕೆ ತಕ್ಕಂತ ದೇಹಸ್ಥಿತಿ ಭಿನ್ನವಾಗಿರುವ ಕಾರಣ ದೇಶಗಳ ನಡುವೆ ರಕ್ತದ ವಿನಿಮಯವಿಲ್ಲ

ಮಹಿಳೆಯರೇ, ರಕ್ತ ಕೊಡಬೇಡಿ- ಹೀಗನ್ನುವವರ ಮಾತು ಕೇಳಬೇಡಿ

ಸಸ್ಯಹಾರಿಗಳೂ ಕೊಡಬಾರದು- ಹಾಗಂದುಕೊಂಡರೆ ದೇಶದಲ್ಲಿ 50% ರಕ್ತದ ಕೊರತೆಯಾದೀತು

ಕೊಟ್ಟ ರಕ್ತ ವೇಸ್ಟ್ ಆದೀತು- ಚಿಂತೆ ಬೇಡ. ಹಾಳಾಗುವ ಮೊದಲೇ ಅಗತ್ಯವಿದ್ದಲ್ಲಿಗೆ ಕಳಿಸಿಕೊಟ್ಟು ಸೂಕ್ತ ರೀತಿಯಲ್ಲಿ ಬಳಕೆ ಮಾಡುತ್ತಾರೆ



Source link

Leave a Reply

Your email address will not be published. Required fields are marked *