
ಮನೆಯ ಮುಂದೆ ನಾಯಿ ಮರಿಗಳು ತಮ್ಮ ಪಾಡಿಗೆ ಆಟವಾಡುತ್ತಿರುವಾಗ ಆಟೋದಲ್ಲಿ ಬಂದ ಮಹಿಳೆ ನಾಯಿಮರಿಗಳ ಮೇಲೆ ಕ್ರೌರ್ಯ ಮೆರೆದಿದ್ದಾಳೆ. ಒಬ್ಬ ಮಹಿಳೆಯಾಗಿ ಇಂತಹ ಕ್ರೌರ್ಯ ಮೆರೆಯುವುದಕ್ಕೆ ಹೇಗೆ ಮನಸ್ಸು ಬಂದಿತು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇದೀಗ ಮಹಿಳೆಯ ಸ್ತೀತಿ ಏನಾಗಿದೆ ಒಮ್ಮೆ ನೋಡಿ.
ಪ್ರಾಣಿಗಳ ಮೇಲಿನ ಕ್ರೌರ್ಯದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಆದರೆ ತಮಿಳುನಾಡಿನ ಮದುರೈನಲ್ಲಿ ನಡೆದ ಈ ತಾಜಾ ಘಟನೆ ಮಾತ್ರ ಮನುಷ್ಯತ್ವವೇ ನಾಚುವಂತಿದೆ. ಕ್ಷುಲ್ಲಕ ಕಾರಣಕ್ಕಾಗಿ ಅಮಾನವೀಯವಾಗಿ ವರ್ತಿಸಿದ ಮಹಿಳೆಯೊಬ್ಬಳು, ಬೀದಿನಾಯಿ ಮರಿಗಳನ್ನು ಗೋಡೆಗೆ ಅಪ್ಪಳಿಸಿ ಕೊಲೆ ಮಾಡಿರುವ ಘಟನೆ ಈಗ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಈ ಭೀಕರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ಹಿನ್ನೆಲೆ ಏನು?
ವರದಿಗಳ ಪ್ರಕಾರ, ಮದುರೈ ಸಮೀಪದ ಈ ಪ್ರದೇಶದಲ್ಲಿ ಇಬ್ಬರು ನೆರೆಹೊರೆಯವರ ನಡುವೆ ಜಗಳ ನಡೆದಿತ್ತು. ಈ ಜಗಳದ ನಡುವೆ ಮತ್ತೊಂದು ಮನೆಯವರು ಮಹಿಳೆಯ ಮಗನ ಮೇಲೆ ಕಲ್ಲು ಎಸೆದಿದ್ದರು ಎಂಬ ಆರೋಪವಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ತನ್ನ ಸಿಟ್ಟನ್ನು ಮನೆಯ ಮುಂದೆ ಆಟವಾಡುತ್ತಿದ್ದ ಮೂಕ ಪ್ರಾಣಿಗಳ ಮೇಲೆ ತೀರಿಸಿಕೊಂಡಿದ್ದಾಳೆ. ರಸ್ತೆಯಲ್ಲಿ ಓಡಾಡುತ್ತಿದ್ದ ಪುಟ್ಟ ನಾಯಿ ಮರಿಗಳನ್ನು ಹಿಡಿದು ಒಂದರ ನಂತರ ಒಂದರಂತೆ ಗೋಡೆಗೆ ಬಲವಾಗಿ ಅಪ್ಪಳಿಸಿದ್ದಾಳೆ. ಈ ಕ್ರೂರ ಕೃತ್ಯದಿಂದಾಗಿ ಎರಡು ನಾಯಿ ಮರಿಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿವೆ.
ಸಿಸಿಟಿವಿಯಲ್ಲಿ ಸೆರೆಯಾದ ಕ್ರೌರ್ಯ:
ಮಹಿಳೆಯ ಈ ಪೈಶಾಚಿಕ ಕೃತ್ಯದ ವಿಡಿಯೋ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಮಹಿಳೆ ಅತ್ಯಂತ ನಿರ್ದಯವಾಗಿ ನಾಯಿ ಮರಿಗಳನ್ನು ಕಾಲಿನಿಂದ ಒದೆಯುವುದು ಮತ್ತು ಗೋಡೆಗೆ ಅಪ್ಪಳಿಸಿ ಅವುಗಳು ನರಳುವಂತೆ ಮಾಡುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದನ್ನು ಕಂಡ ಪ್ರಾಣಿ ಪ್ರೇಮಿಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಾಯಿಪಾಡು ಅಂದ್ರೆ ಇದೇನಾ?’ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಮಹಿಳೆಯರು ನಿಜವಾಗಿಯೂ ಮೃದು ಮನಸ್ಸಿನವರೇ?
ಸಾಮಾನ್ಯವಾಗಿ ಮಹಿಳೆಯರನ್ನು ಮಮತೆ, ಕರುಣೆ ಮತ್ತು ವಾತ್ಸಲ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಇಂತಹ ಘಟನೆಗಳು ನಡೆದಾಗ ಆ ನಂಬಿಕೆ ಸುಳ್ಳಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಾಗ ಮನುಷ್ಯ ಎಂತಹ ಕೀಳು ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಈ ಮಹಿಳೆಯೇ ಸಾಕ್ಷಿ. ರಕ್ಷಣೆಯಿಲ್ಲದ ಪ್ರಾಣಿಗಳ ಮೇಲೆ ಈ ಮಟ್ಟದ ಕ್ರೌರ್ಯ ಮೆರೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ.
Scroll to load tweet…
Scroll to load tweet…
ಕಠಿಣ ಕ್ರಮಕ್ಕೆ ಆಗ್ರಹ:
ಘಟನೆ ಸಂಬಂಧಿಸಿ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಸ್ಥಳೀಯರು ಪೋಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಪೋಲೀಸರು ಆರೋಪಿ ಮಹಿಳೆ ಮೀನಾಕ್ಷಿ ಮಿಶ್ರಾ ಎಂಬಾಕೆಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾರ್ವಜನಿಕರು ಈಕೆಯ ಮೇಲೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಮೂಕ ಪ್ರಾಣಿಗಳ ಮೇಲೆ ದರ್ಪ ತೋರುವ ಇಂತಹ ಮಾನಸಿಕ ಅಸ್ವಸ್ಥರಿಗೆ ಕಠಿಣ ಶಿಕ್ಷೆಯಾಗದ ಹೊರತು ಇಂತಹ ಘಟನೆಗಳು ನಿಲ್ಲುವುದಿಲ್ಲ. ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ನಾವು ಮರೆಯಬಾರದು.