
ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸಿ, ಹೊಸನಗರ ಹೋರಾಟ ಸಮಿತಿಯು ಐತಿಹಾಸಿಕ ಪಾದಯಾತ್ರೆ ಆರಂಭಿಸಿದೆ. ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮತ್ತು ಜನರು ಈ ಹೋರಾಟದಲ್ಲಿ ಭಾಗವಹಿಸಿದ್ದು, 2004ರಲ್ಲಿ ರದ್ದಾದ ಕ್ಷೇತ್ರ ಮರಳಿ ಪಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.
ಶಿವಮೊಗ್ಗ (ಏ.05): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಜನತೆಯ ದಶಕಗಳ ಕಾಲದ ಕನಸು ಮತ್ತು ನ್ಯಾಯಯುತ ಬೇಡಿಕೆಯಾದ ‘ಹೊಸನಗರ ವಿಧಾನಸಭಾ ಕ್ಷೇತ್ರ’ ಮರುಸ್ಥಾಪನೆಗೆ ಈಗ ಹೋರಾಟದ ಕಿಚ್ಚು ಹತ್ತಿದೆ. ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದಿನಿಂದ ಐತಿಹಾಸಿಕ ನಗರ (ಬಿದನೂರು) ಪಟ್ಟಣದಿಂದ ರಿಪ್ಪನಪೇಟೆಯವರೆಗೆ ಬೃಹತ್ ಪಾದಯಾತ್ರೆ ಆರಂಭವಾಗಿದೆ.
ದೈವದ ಪ್ರಾರ್ಥನೆಯೊಂದಿಗೆ ಆರಂಭವಾದ ಪಾದಯಾತ್ರೆ:
ಶನಿವಾರ ಬೆಳಿಗ್ಗೆ ಹೊಸನಗರ ತಾಲೂಕಿನ ನಗರದ ಬಳಿಯ ಪ್ರಸಿದ್ಧ ಚಿಕ್ಕಪೇಟೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಹೊಸನಗರದ ಮೂಲಗದ್ದೆ ಮಠದ ಅಭಿನವ ಶ್ರೀ ಚನ್ನಬಸವ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರ ನೇತೃತ್ವದಲ್ಲಿ ಈ ಪಾದಯಾತ್ರೆ ಹೊರಟಿದೆ. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ‘ಹೊಸನಗರ ಕ್ಷೇತ್ರ ಮರುಸ್ಥಾಪನೆಯಾಗಲಿ, ತಾಲೂಕಿಗೆ ನ್ಯಾಯ ಸಿಗಲಿ’ ಎಂಬ ಘೋಷಣೆಗಳನ್ನು ಕೂಗಿದರು.
ಪಕ್ಷಾತೀತವಾಗಿ ಒಂದಾದ ರಾಜಕೀಯ ನಾಯಕರು:
ಈ ಹೋರಾಟದ ವಿಶೇಷತೆಯೆಂದರೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಇವರೊಂದಿಗೆ ಮಾಜಿ ಶಾಸಕರುಗಳಾದ ಕಿಮ್ಮನೆ ರತ್ನಾಕರ್, ಹರತಾಳು ಹಾಲಪ್ಪ, ಮತ್ತು ಕಲಗೋಡು ರತ್ನಾಕರ್ ಅವರು ಕೂಡ ಹೆಜ್ಜೆ ಹಾಕುವ ಮೂಲಕ ಹೊಸನಗರದ ಅಸ್ಮಿತೆಯ ಹೋರಾಟಕ್ಕೆ ಸಾಥ್ ನೀಡಿದರು. ಮಲೆನಾಡಿನ ಅಭಿವೃದ್ಧಿಗಾಗಿ ಎಲ್ಲ ನಾಯಕರು ಕೈಜೋಡಿಸಿರುವುದು ಸಾರ್ವಜನಿಕರ ಗಮನ ಸೆಳೆದಿದೆ.
ಹೊಸನಗರ ಕ್ಷೇತ್ರಕ್ಕೆ ಏಕೆ ಬೇಕು ಮರುಸ್ಥಾಪನೆ?
2004ರಲ್ಲಿ ನಡೆದ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ (Delimitation) ಸಂದರ್ಭದಲ್ಲಿ ಹೊಸನಗರ ಕ್ಷೇತ್ರವನ್ನು ರದ್ದುಗೊಳಿಸಿ, ಅದನ್ನು ಪಕ್ಕದ ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿತ್ತು. ಇದರಿಂದಾಗಿ ಹೊಸನಗರ ತಾಲೂಕಿನ ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗಿದೆ ಎಂಬುದು ಸ್ಥಳೀಯರ ಗಂಭೀರ ಆರೋಪ. ಹೋರಾಟಗಾರರ ಪ್ರಕಾರ, ‘ಹೊಸನಗರ ತಾಲೂಕು ಐದು ಪ್ರಮುಖ ಜಲಾಶಯಗಳನ್ನು (ಶರಾವತಿ, ವರಾಹಿ, ಮಾಣಿ ಇತ್ಯಾದಿ) ರಾಜ್ಯಕ್ಕೆ ನೀಡಿದೆ. ನಾಡಿಗೆ ಬೆಳಕು ನೀಡಲು ತನ್ನ ಭೂಮಿಯನ್ನು ತ್ಯಾಗ ಮಾಡಿರುವ ಈ ಭಾಗಕ್ಕೆ ಇಂದು ಸ್ವಂತ ವಿಧಾನಸಭಾ ಕ್ಷೇತ್ರವೇ ಇಲ್ಲದಿರುವುದು ದೊಡ್ಡ ಅನ್ಯಾಯ. ತಾಲೂಕಿನ ಸಮಗ್ರ ಅಭಿವೃದ್ಧಿ ಮತ್ತು ಆಡಳಿತಾತ್ಮಕ ಅನುಕೂಲಕ್ಕಾಗಿ ಕ್ಷೇತ್ರ ಮರುಸ್ಥಾಪನೆ ಅನಿವಾರ್ಯ’ ಎಂದು ಒತ್ತಾಯಿಸಿದ್ದಾರೆ.
ಎರಡು ದಿನಗಳ ಪಾದಯಾತ್ರೆಯ ಹಾದಿ:
ಈ ಬೃಹತ್ ಪಾದಯಾತ್ರೆಯು ಮೊದಲ ದಿನ ನಗರದಿಂದ ಹೊರಟು ಹೊಸನಗರ ಪಟ್ಟಣ ತಲುಪಲಿದೆ. ಅಲ್ಲಿ ವಾಸ್ತವ್ಯ ಹೂಡಿದ ನಂತರ, ಎರಡನೇ ದಿನ ಅಂದರೆ ನಾಳೆ ಹೊಸನಗರದಿಂದ ರಿಪ್ಪನಪೇಟೆಯವರೆಗೆ ಸಾಗಲಿದೆ. ರಿಪ್ಪನಪೇಟೆಯಲ್ಲಿ ನಡೆಯಲಿರುವ ಬೃಹತ್ ಬಹಿರಂಗ ಸಮಾವೇಶದೊಂದಿಗೆ ಈ ಪಾದಯಾತ್ರೆ ಸಮಾರೋಪಗೊಳ್ಳಲಿದೆ. ಈ ಸಮಾವೇಶದ ಮೂಲಕ ಸರ್ಕಾರಕ್ಕೆ ಕಟ್ಟುನಿಟ್ಟಿನ ಸಂದೇಶ ರವಾನಿಸಲು ಹೋರಾಟ ಸಮಿತಿ ತೀರ್ಮಾನಿಸಿದೆ. ಒಂದು ವೇಳೆ ಸರ್ಕಾರ ಕ್ಷೇತ್ರ ಮರುಸ್ಥಾಪನೆಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ನಾಯಕರು ಎಚ್ಚರಿಕೆ ನೀಡಿದ್ದಾರೆ.