
ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ ಶಾಮನೂರು, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ತಾಯಿ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಜೊತೆಗೂಡಿ ನಾಮಪತ್ರ ಸಲ್ಲಿಸಿದ್ದಾರೆ. ತಾತನ ಕಾರು, ಕಚೇರಿ ಬಗ್ಗೆ ಭಾವುಕರಾದರು. ಆದರೆ ಬಿ ಫಾರಂ ಸಿಗುವ ಮುನ್ನವೇ ತಾಯಿ ನಾಮಪತ್ರ ಸಲ್ಲಿಕೆ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ದಾವಣಗೆರೆ (ಮಾ.20): ನಮ್ಮ ತಾತನ ಆಫೀಸ್ ರೂಮಿನಲ್ಲಿಯೇ ನಾನು ನಾಮಪತ್ರ ಭರ್ತಿ ಮಾಡಿದ್ದು, ಅವರ ಕಾರಿನಲ್ಲಿಯೇ ಬಂದು ಚುನಾವಣಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಅವರ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ. ನಾಳೆಯೇ ಪಕ್ಷದ ಬಿ-ಫಾರಂ ಸಿಗುವ ಸಾಧ್ಯತೆಯಿದೆ ಎಂದು ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ ಶಾಮನೂರು ಹೇಳಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಇಂದು ಒಂದು ಪ್ರಮುಖ ಅಧ್ಯಾಯ ಬರೆಯಲ್ಪಟ್ಟಿದೆ. ಹಿರಿಯ ನಾಯಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ ಶಾಮನೂರು ಅವರು ಇಂದು ತಮ್ಮ ತಾಯಿ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರ ಜೊತೆಗೂಡಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಮರ್ಥ ಮತ್ತು ಪ್ರಭಾ ಮಲ್ಲಿಕಾರ್ಜುನ ಅವರು ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ತಾತನ ನೆನಪು ಮತ್ತು ಭಾವುಕ ಕ್ಷಣಗಳು:
ತಮ್ಮ ರಾಜಕೀಯ ಜೀವನದ ಮೊದಲ ಹೆಜ್ಜೆಯನ್ನು ಅತ್ಯಂತ ಭಾವುಕವಾಗಿ ಇರಿಸಿದ ಸಮರ್ಥ, ‘ತಾತಾ ಬಳಸುತ್ತಿದ್ದ ಕಾರಿನಲ್ಲೇ ಬಂದು ನಾಮಪತ್ರ ಸಲ್ಲಿಸಿದ್ದು ನನಗೆ ಅಪಾರ ಖುಷಿ ಮತ್ತು ಧೈರ್ಯ ನೀಡಿದೆ. ಆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಹತ್ತಾರು ದೇವರ ಫೋಟೋಗಳಿವೆ, ಅವು ನಮಗೆ ಶ್ರೀರಕ್ಷೆ. ಅಷ್ಟೇ ಅಲ್ಲದೆ, ತಾತನ ಆಫೀಸ್ ರೂಮ್‌ನಲ್ಲೇ ಕುಳಿತು ನಾನು ನಾಮಪತ್ರದ ಫಾರ್ಮ್‌ಗಳನ್ನು ಭರ್ತಿ ಮಾಡಿದ್ದೇನೆ. ಅವರ ಆಶೀರ್ವಾದ ಸದಾ ನನ್ನ ಮೇಲಿದೆ’ ಎಂದು ಹೇಳಿದರು. ಕ್ಷೇತ್ರಾದ್ಯಂತ ತಮಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿ-ಫಾರಂ ನಿರೀಕ್ಷೆ ಮತ್ತು ತಾಂತ್ರಿಕ ತಂತ್ರಗಾರಿಕೆ:
ಸಮರ್ಥ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾತ್ರವಲ್ಲದೆ, ಪಕ್ಷೇತರ ಅಭ್ಯರ್ಥಿಯಾಗಿಯೂ ನಾಮಪತ್ರ ಸಲ್ಲಿಸಿರುವುದು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ, ‘ದಾಖಲೆಗಳಲ್ಲಿ ಯಾವುದೇ ತಾಂತ್ರಿಕ ಲೋಪಗಳಾಗಿ ನಾಮಪತ್ರ ತಿರಸ್ಕೃತಗೊಳ್ಳಬಾರದು ಎಂಬ ಮುನ್ನೆಚ್ಚರಿಕೆಯಿಂದ ಪಕ್ಷೇತರವಾಗಿ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದೇವೆ. ಇದು ಕೇವಲ ಟೆಕ್ನಿಕಲ್ ರೀಸನ್ ಅಷ್ಟೇ. ಇಂದು ಸಂಜೆ ಅಥವಾ ನಾಳೆ ವೇಳೆಗೆ ಕಾಂಗ್ರೆಸ್ ಬಿ-ಫಾರಂ ಸಿಗುವ ನಿರೀಕ್ಷೆಯಿದೆ. ಸೋಮವಾರ ನಮ್ಮ ನಾಯಕರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಅಧಿಕೃತವಾಗಿ ಬಿ-ಫಾರಂನೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತೇವೆ’ ಎಂದು ವಿವರಿಸಿದರು.
ಬಿಜೆಪಿ ಟೀಕೆಗೆ ತಿರುಗೇಟು:
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ವಿರೋಧಿ ಎಂಬ ಬಿಜೆಪಿಯ ಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಭಾ ಮಲ್ಲಿಕಾರ್ಜುನ, ‘ಬಿಜೆಪಿಯವರು ನಮ್ಮ ಕೋಟೆಯನ್ನು ಭೇದಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮಲ್ಲಿರುವ ಸಣ್ಣಪುಟ್ಟ ವಿಚಾರಗಳನ್ನು ಹೈಲೈಟ್ ಮಾಡಿ ಜನರ ಹಾದಿ ತಪ್ಪಿಸಲು ನೋಡುತ್ತಿದ್ದಾರೆ. ಆದರೆ, ದಾವಣಗೆರೆ ದಕ್ಷಿಣ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಜೊತೆಗೂಡಿ ನಾವು ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ. ನಮ್ಮ ಶಕ್ತಿ ಏನು ಎಂಬುದು ಬಿಜೆಪಿಗೆ ಚುನಾವಣಾ ಫಲಿತಾಂಶದ ದಿನ ತಿಳಿಯಲಿದೆ’ ಎಂದು ಖಡಕ್ ಉತ್ತರ ನೀಡಿದರು.
ಗೆಲುವಿನ ದೃಢ ಸಂಕಲ್ಪ:
ಸಮರ್ಥ ಅವರು ಯುವಶಕ್ತಿಯ ಪ್ರತೀಕವಾಗಿ ಕಣಕ್ಕಿಳಿದಿದ್ದು, ಕ್ಷೇತ್ರದ ಹಿರಿಯರ ಅನುಭವ ಮತ್ತು ಯುವಕರ ಉತ್ಸಾಹವನ್ನು ಜೊತೆಗೂಡಿಸಿಕೊಂಡು ಹೋಗುವ ಸಂಕಲ್ಪ ಮಾಡಿದ್ದಾರೆ. ಶಾಮನೂರು ಕುಟುಂಬದ ಪರಂಪರೆಯನ್ನು ಉಳಿಸುವ ಮತ್ತು ಕ್ಷೇತ್ರದ ಅಭಿವೃದ್ಧಿಯನ್ನು ಮುಂದುವರಿಸುವ ಭರವಸೆಯನ್ನು ಈ ತಾಯಿ-ಮಗ ಜೋಡಿ ಮತದಾರರಿಗೆ ನೀಡಿದೆ.