
ಯಾದಗಿರಿಯ ಸೈದಾಪುರದಲ್ಲಿ, ಕೆಕೆಆರ್ಟಿಸಿಯಿಂದ ವಜಾಗೊಂಡಿದ್ದ ಮಾಜಿ ಚಾಲಕ ಮಹಿಪಾಲರೆಡ್ಡಿ ಎಂಬಾತ ಕುಡಿದ ಮತ್ತಿನಲ್ಲಿ ಸರ್ಕಾರಿ ಬಸ್ಸನ್ನೇ ಕದ್ದೊಯ್ದಿದ್ದಾನೆ. ಬಸ್ಸನ್ನು ತನ್ನ ಸ್ವಗ್ರಾಮದ ದೇವಸ್ಥಾನದ ಮುಂದೆ ನಿಲ್ಲಿಸಿದ್ದಾನೆ.
ಯಾದಗಿರಿ (ಮಾ.21): ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ಕೆಕೆಆರ್ಟಿಸಿ (KKRTC) ಸಂಸ್ಥೆಗೆ ಶಾಕ್ ನೀಡುವಂತಹ ಘಟನೆಯೊಂದು ನಡೆದಿದೆ. ಸಂಸ್ಥೆಯಿಂದಲೇ ವಜಾಗೊಂಡಿದ್ದ ಮಾಜಿ ಚಾಲಕನೊಬ್ಬ ಕುಡಿದ ಮತ್ತಿನಲ್ಲಿ ಬಸ್ ನಿಲ್ದಾಣದಲ್ಲಿದ್ದ ಸರ್ಕಾರಿ ಬಸ್ಸನ್ನೇ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಸೈದಾಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಬಸ್ಸನ್ನು ಮಹಿಪಾಲರೆಡ್ಡಿ ಎಂಬ ಮಾಜಿ ಚಾಲಕ ಕದ್ದೊಯ್ದಿದ್ದಾನೆ. ಈತ ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬಸ್ ಕಳ್ಳತನ ಮಾಡಿದ ಈತ, ಅದನ್ನು ತನ್ನ ಸ್ವಗ್ರಾಮವಾದ ರಾಚನಳ್ಳಿಯ ದೇವಸ್ಥಾನದ ಮುಂದೆ ತಂದು ನಿಲ್ಲಿಸಿದ್ದಾನೆ.
ಯಾರು ಈ ಮಹಿಪಾಲರೆಡ್ಡಿ?
ಮಹಿಪಾಲರೆಡ್ಡಿ ಈ ಹಿಂದೆ ಕೆಕೆಆರ್ಟಿಸಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಈತನ ವಿರುದ್ಧ ಪ್ರಯಾಣಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ (ಜೇಬಿಗೆ ಇಳಿಸಿಕೊಳ್ಳುತ್ತಿದ್ದ) ಗಂಭೀರ ಆರೋಪಗಳಿದ್ದವು. ಇಂತಹ ಹಲವು ದೂರುಗಳ ಹಿನ್ನೆಲೆಯಲ್ಲಿ ಸಂಸ್ಥೆಯು ಈತನನ್ನು ಸೇವೆಯಿಂದ ವಜಾಗೊಳಿಸಿತ್ತು. ಕೆಲಸ ಹೋದ ಸಿಟ್ಟೋ ಅಥವಾ ಕುಡಿದ ಮತ್ತಿನ ಅವಾಂತರವೋ, ಈತ ಈಗ ಬಸ್ಸನ್ನೇ ಕದ್ದು ಸುದ್ದಿಯಾಗಿದ್ದಾನೆ.
ಪೊಲೀಸ್ ದೂರು ದಾಖಲು
ತಮ್ಮ ಬಸ್ ನಾಪತ್ತೆಯಾಗಿರುವುದನ್ನು ಕಂಡು ಬೆಚ್ಚಿಬಿದ್ದ ಕೆಕೆಆರ್ಟಿಸಿ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ ಬಸ್ ಪತ್ತೆ ಮಾಡಿದ್ದಾರೆ. ಸದ್ಯ ಮಹಿಪಾಲರೆಡ್ಡಿ ವಿರುದ್ಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.