
ಟ್ರಾವೆಲ್ ವ್ಲಾಗರ್ ದೀಪಕ್ ಸಮಲ್ ಅವರು ತಮ್ಮ ಮಗ ರೈಲಿನಲ್ಲಿ ಚಿಪ್ಸ್ ಚೆಲ್ಲಿದಾಗ, ಅದನ್ನು ಮಗುವಿನ ಕೈಯಲ್ಲೇ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಮೂಲಭೂತ ಕರ್ತವ್ಯದ ಬಗ್ಗೆ ಪಾಠ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ನಮ್ಮಲ್ಲಿ ಮೂಲಭೂತ ಹಕ್ಕುಗಳ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಮೂಲಭೂತ ಕರ್ತವ್ಯಗಳ ಬಗ್ಗೆ ಮಾತನಾಡುವವರು ಕಡಿಮೆ ಆ ಕರ್ತವ್ಯವನ್ನು ಮಾಡುವವರು ಕಡಿಮೆಯೇ . ಇದೇ ಕಾರಣಕ್ಕೆ ಭಾರತದಲ್ಲಿ ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಗಳ ಬಗ್ಗೆಕೇಳುವವರೇ ಇಲ್ಲವಾಗಿದ್ದಾರೆ. ಅವು ಯಾವಾಗಲೂ ಮನುಷ್ಯರ ಬಳಕೆಗೆ ಯೋಗ್ಯವಾದ ಸ್ಥಿತಿಯಲ್ಲಿ ಇರುವುದೇ ಇಲ್ಲ. ಸಾರ್ವಜನಿಕ ರೈಲು ನಿಲ್ದಾಣಗಳು ಬಸ್ ನಿಲ್ದಾಣಗಳು ಆಸ್ಪತ್ರೆಗಳಲ್ಲಿ ಇರುವ ಅವ್ಯವಸ್ಥೆಗಳೇ ಇದಕ್ಕೆ ಸಾಕ್ಷಿ. ಅವುಗಳನ್ನು ಜನ, ಯಾರದೋ ವಸ್ತು ಹಾಳಾದರೆ ನಮಗೇನು ಎಂಬಂತೆ ಬಳಸುವುದೇ ಅವುಗಳ ಸ್ಥಿತಿ ಹಾಗಾಗುವುದಕ್ಕೆ ಕಾರಣ. ಯಾರಿಗೂ ಅದು ನಮ್ಮ ತೆರಿಗೆ ಹಣದಿಂದ ಸಿದ್ಧಗೊಂಡವುಗಳು ನಾವು ಅವುಗಳಿಗೆ ತೆರಿಗೆ ಕಟ್ಟುತ್ತೇವೆ ಎಂಬ ಯೋಚನೆಗಳಿಲ್ಲ. ಆದರೆ ಇಲ್ಲೊಬ್ಬರು ತಂದೆ ಮಗುವಿಗೆ ಮೂಲಭೂತ ಕರ್ತವ್ಯದ ಬಗ್ಗೆ ಎಳವೆಯಲ್ಲೇ ಪಾಠ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಮೂಲಭೂತ ಕರ್ತವ್ಯದ ಪಾಠ ಮಾಡಿದ ಅಪ್ಪ:
ಟ್ರಾವೆಲ್ ವ್ಲಾಗರ್ ದೀಪಕ್ ಸಮಲ್ ಎಂಬುವವರು ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣುವಂತೆ ಅವರ ಸಣ್ಣಮಗು ರೈಲಿನಲ್ಲಿ ಚಿಪ್ಸ್ ಚೆಲ್ಲಿದ್ದು, ಅದನ್ನು ಆ ಮಗುವಿನ ಕೈಯಲ್ಲಿ ಹೆಕ್ಕಿಸಿ ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಗಲೀಜು ಮಾಡಬಾರದು ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂಬ ಪಾಠ ಮಾಡಿದ್ದಾರೆ. ಗಲೀಜನ್ನು ಸ್ವತಃ ಸ್ವಚ್ಛಗೊಳಿಸುವುದೋ ಅಥವಾ ರೈಲ್ವೆ ಸ್ವಚ್ಛತಾ ಸಿಬ್ಬಂದಿಗೆ ಕಾಯುವ ಬದಲು ಅವರು ತಮ್ಮ ಮಗನ ಕೈಯಿಂದಲೇ ರೈಲ್ವೆಯ ನೆಲಹಾಸನ್ನುಸ್ವಚ್ಛಗೊಳಿಸಿದ್ದಾರೆ. ಈ ವೀಡಿಯೋ ವೈರಲ್ ಆಗಿದ್ದು, ಎಳವೆಯಲ್ಲೇ ಮಕ್ಕಳಿಗೆ ಹೇಗೆ ತಮ್ಮ ಕರ್ತವ್ಯಗಳು, ಸಾರ್ವಜನಿಕ ಆಸ್ತಿಯ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ತೋರಿಸಿಕೊಡುತ್ತದೆ.
ಸಮಲ್ ತನ್ನ ಎರಡು ವರ್ಷದ ಮಗನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಆಟವಾಡುತ್ತಾ ಮಗು ನೆಲದಾದ್ಯಂತ ಚಿಪ್ಸ್ ಅನ್ನು ಹರಡಿತು. ನಾನೇ ಅದನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದಿತ್ತು. ಇದು ಕೆಲವೇ ಸೆಕೆಂಡುಗಳನ್ನು ತೆಗೆದುಕೊಳ್ಳುತ್ತಿತ್ತು.ಆದರೆ ನಾನು ಹಾಗೆ ಮಾಡಲಿಲ್ಲ, ಏಕೆಮದರೆ ಕೆಲವೊಮ್ಮೆ ಮಕ್ಕಳಿಗೆ ನೀಡುವ ಆರಾಮವೂ ಅವರಿಗೆ ಕಲಿಸಬಹುದಾದ ಪಾಠವನ್ನು ತಪ್ಪಿಸುತ್ತದೆ ಎಂದು ಸಮಲ್ ವೀಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ನೆಲದ ಮೇಲೆ ಎಸೆದ ವಸ್ತುಗಳನ್ನು ಯಾರು ಸ್ವಚ್ಛಗೊಳಿಸುತ್ತಾರೆ ಎಂದು ಅವರು ತಮ್ಮ ಮಗನನ್ನು ಪ್ರಶ್ನಿಸಿದರು. ಆ ಪುಟ್ಟ ಮಗು ಅದರ ಅರಿವಿಲ್ಲದೇ ಮುಖ ನೋಡುತ್ತಾ ನಿಂತಾಗ ಸಮಲ್ ಮಗುವಿಗೆ ಅಂತಹ ಪರಿಸ್ಥಿತಿಯಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂದು ನಿಧಾನವಾಗಿ ಕಲಿಸಿದರು. ನಾನು ಅವನಿಗೆ ವಿವರಿಸಿದೆ, ಇದು ನಮ್ಮ ಮನೆಯಲ್ಲ, ಆದರೆ ಇದು ಇನ್ನೂ ನಮ್ಮ ಸ್ಥಳ. ಈ ರೈಲು ಎಲ್ಲರಿಗೂ ಸೇರಿದೆ. ನಾವು ಗಲೀಜು ಮಾಡಿದಾಗ, ಬೇರೆ ಯಾರೋ ಅದನ್ನು ಸ್ವಚ್ಛಗೊಳಿಸಬೇಕಾಗುತ್ತದೆ ಎಂದು ಹೇಳಿದರು. ಹೀಗೆ ಹೇಳಿದ ನಂತರ ಅವರ ಮಗು ನಿಧಾನವಾಗಿ ಬಾಗಿ ತಾನು ಎಸೆದ ಚಿಪ್ಸ್‌ಗಳನ್ನು ಕೆಳಗೆ ಬಾಗಿ ಹೆಕ್ಕಲು ಆರಂಭಿಸಿದನು.
ಇದನ್ನೂ ಓದಿ: ನಕಲಿ ಕಾನೂನು ಪದವಿಯೊಂದಿಗೆ ಹೈಕೋರ್ಟ್‌ನಲ್ಲಿ 5 ವರ್ಷಗಳ ಕಾಲ ಜಡ್ಜ್ ಆಗಿ ಸೇವೆ ಸಲ್ಲಿಸಿದ ವ್ಯಕ್ತಿ
ಸಮಲ್ ಅವರ ಮಗ ನಿಧಾನವಾಗಿ ಚಿಪ್ಸ್ ಅನ್ನು ಎತ್ತಿಕೊಂಡು ಟ್ರೇ ಮೇಲೆ ರಾಶಿಯಾಗಿ ಇಡುತ್ತಿರುವುದನ್ನು ಕಾಣಬಹುದು ಮತ್ತು ಸಮಲ್ ಮಗುವಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಮಕ್ಕಳಿಗೆ ಗದರಿಸಬೇಡಿ. ಕೋಪ ಬೇಡ. ಕೇವಲ ಒಂದು ಕ್ಷಣದ ತಿಳುವಳಿಕೆ. ಮತ್ತು ಆ ಸಣ್ಣ ಕ್ರಿಯೆಯಲ್ಲಿ, ಒಂದು ದೊಡ್ಡ ಪಾಠವನ್ನು ಹೇಳಿಕೊಡಲಾಯಿತು. ಶುಚಿತ್ವವನ್ನು ಸೂಚನೆಗಳ ಮೂಲಕ ಕಲಿಸಲಾಗುವುದಿಲ್ಲ. ಘೋಷಣೆಗಳ ಮೂಲಕ ನಾಗರಿಕ ಪ್ರಜ್ಞೆಯನ್ನು ನಿರ್ಮಿಸಲಾಗುವುದಿಲ್ಲ. ಅದು ದೈನಂದಿನ ಕ್ಷಣಗಳಲ್ಲಿ ರೂಪುಗೊಳ್ಳುತ್ತದೆ ಎಂದು ಸಮಲ್ ಹೇಳಿದರು.
ಭಾರತೀಯ ರೈಲ್ವೆಯ ಮೂಲಕ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ರೈಲುಗಳನ್ನು ಸ್ವಚ್ಛವಾಗಿಡುವುದು ಕೇವಲ ಸಿಬ್ಬಂದಿಯ ಕರ್ತವ್ಯವಲ್ಲ, ಅದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಈ ವೀಡಿಯೋವನ್ನು 1.5 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಸಮಲ್ ಅವರಿಗೆ ಧನ್ಯವಾದ ಹೇಳಿದ್ದಾರೆ. ಹೆಚ್ಚಿನ ಪೋಷಕರು ಇದನ್ನು ಮಾಡುವುದಿಲ್ಲ, ಪೋಷಕರಾಗಿ ಒಳ್ಳೆಯ ಪಾಠ ಮಾಡಿದ್ದೀರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಮದುವೆ ಮಂಟಪದಲ್ಲೇ ಕ್ಯಾಮರಾ ಮುಂದೆಯೇ ವಧುವಿಗೆ ಗುಂಡೇಟು: ಮದ್ವೆ ವೀಡಿಯೋದಲ್ಲಿ ದೃಶ್ಯ ಸೆರೆ