
ಸ್ಯಾನ್ ಡಿಯಾಗೋದ ಬಾರ್ ಡ್ಯಾನ್ಸರ್ ಒಬ್ಬರು ಮಾಡಿದ ಟಿಕ್ಟಾಕ್ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಅಮೆರಿಕದ ಸೈನಿಕರು ಇರಾನ್ಗೆ ಹೋಗುವ ಬಗ್ಗೆ ತಮ್ಮ ಬಳಿ ಹೇಳಿಕೊಳ್ಳುತ್ತಿದ್ದಾರೆ ಎಂದು ಆಕೆ ಹೇಳಿದ್ದಾಳೆ. ಇದು ಅಮೆರಿಕದ ಸೇನಾ ರಹಸ್ಯಗಳ ಸುರಕ್ಷತೆ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿಯುತ್ತಿವೆ. ಇರಾನ್ ವಿರುದ್ಧ ಕೇವಲ ವೈಮಾನಿಕ ದಾಳಿ ಮಾತ್ರವಲ್ಲದೆ, ಅಮೆರಿಕ ಈಗ ಬೃಹತ್ ಭೂಯುದ್ಧಕ್ಕೆ (Ground War) ಸಜ್ಜಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಇಂತಹ ಅನುಮಾನಗಳಿಗೆ ಪುಷ್ಟಿ ನೀಡುವಂತೆ, ಅಮೆರಿಕದ ಸೇನಾ ನೆಲೆಗಳ ಬಳಿಯ ಬಾರ್ ಮತ್ತು ಸ್ಟ್ರಿಪ್ ಕ್ಲಬ್ಗಳಲ್ಲಿ ಸೈನಿಕರು ಯುದ್ಧದ ರಹಸ್ಯಗಳನ್ನು ಬಾಯಿಬಿಡುತ್ತಿರುವುದು ಈಗ ಜಾಗತಿಕವಾಗಿ ಚರ್ಚೆಗೆ ಕಾರಣವಾಗಿದೆ.
ಸೈನಿಕರ ರಹಸ್ಯ ಸೋರಿಕೆ ಮಾಡಿದ ಬಾರ್ ಡ್ಯಾನ್ಸರ್!
ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಮೂಲದ ಬಾರ್ ಡ್ಯಾನ್ಸರ್ ಚಾರ್ಮ್ ಡೇಝ್ (Charm Daze) ಈ ಆಘಾತಕಾರಿ ವಿಷಯವನ್ನು ಜಗತ್ತಿಗೆ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಚಾರ್ಮ್, ತಮ್ಮ ಟಿಕ್ಟಾಕ್ ವಿಡಿಯೋದಲ್ಲಿ ಅಮೆರಿಕದ ಯುವ ಸೈನಿಕರ ಮಾನಸಿಕ ಸ್ಥಿತಿ ಮತ್ತು ಅವರ ಮುಂದಿನ ನಿಯೋಜನೆಯ ಬಗ್ಗೆ ಗಂಭೀರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ನಮ್ಮ ಕ್ಲಬ್ಗೆ ಬರುತ್ತಿರುವ ಯುವ ಸೈನಿಕರು ತೀವ್ರ ಖಿನ್ನತೆಯಲ್ಲಿದ್ದಾರೆ. ಮುಂದಿನ ವಾರ ನಮ್ಮನ್ನು ಇರಾನ್ ವಿರುದ್ಧದ ಯುದ್ಧಕ್ಕೆ ಕಳುಹಿಸಲಾಗುತ್ತಿದೆ ಎಂದು ಅವರು ಅಳಲು ತೋಡಿಕೊಳ್ಳುತ್ತಿದ್ದಾರೆ’ ಎಂದು ಚಾರ್ಮ್ ಹೇಳಿದ್ದಾರೆ.
ಪಿಜ್ಜಾ ಹಟ್ ಆಯ್ತು, ಈಗ ಸ್ಟ್ರಿಪ್ ಕ್ಲಬ್ ಸರದಿ!
ಸಾಮಾನ್ಯವಾಗಿ ಅಮೆರಿಕ ಯಾವುದೇ ದೇಶದ ಮೇಲೆ ದೊಡ್ಡ ಮಟ್ಟದ ದಾಳಿ ಮಾಡುವ ಮುನ್ನ, ಪೆಂಟಗನ್ ಸುತ್ತಮುತ್ತಲಿನ ಪಿಜ್ಜಾ ಹಟ್ಗಳಲ್ಲಿ ಆರ್ಡರ್ಗಳ ಸಂಖ್ಯೆ ದಿಢೀರ್ ಏರಿಕೆಯಾಗುತ್ತದೆ ಎಂಬುದು ಜಗತ್ತಿಗೆ ತಿಳಿದಿರುವ ‘ಪಿಜ್ಜಾ ಮೀಟರ್’ ರಹಸ್ಯ. ಆದರೆ ಈಗ ಸೈನಿಕರೇ ತಮ್ಮ ಕೊನೆಯ ದಿನಗಳನ್ನು ಕಳೆಯಲು ಎಂಬಂತೆ ಬಾರ್ ಮತ್ತು ಕ್ಲಬ್ಗಳಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿರುವುದು ಯುದ್ಧದ ಮುನ್ಸೂಚನೆ ಎನ್ನಲಾಗುತ್ತಿದೆ. ಚಾರ್ಮ್ ಕೆಲಸ ಮಾಡುವ ಕ್ಲಬ್ ಸ್ಯಾನ್ ಡಿಯಾಗೋ ನೇವಲ್ ಬೇಸ್ ಮತ್ತು ಕ್ಯಾಂಪ್ ಪೆಂಡಲ್ಟನ್ನಂತಹ ಪ್ರಮುಖ ಸೇನಾ ಕೇಂದ್ರಗಳ ಸಮೀಪದಲ್ಲಿದೆ.
‘ಹಸುಗೂಸು ಮುಖದ’ ಸೈನಿಕರ ಆತಂಕ
ವಿಡಿಯೋದಲ್ಲಿ ಸೈನಿಕರ ಬಗ್ಗೆ ಭಾವುಕರಾಗಿ ಮಾತನಾಡಿರುವ ಚಾರ್ಮ್, ‘ಅವರೆಲ್ಲಾ ತುಂಬಾ ಸಣ್ಣ ವಯಸ್ಸಿನವರು. ನೋಡಲು ಹಸುಗೂಸುಗಳಂತೆ ಕಾಣುತ್ತಾರೆ. ಅವರು ತಮ್ಮ ಬಳಿಯಿರುವ ಹಣವನ್ನೆಲ್ಲಾ ಕ್ಲಬ್ನಲ್ಲಿ ಖರ್ಚು ಮಾಡಿ, ತಮ್ಮನ್ನು ಯುದ್ಧಕ್ಕೆ ಕಳುಹಿಸುತ್ತಿರುವ ಬಗ್ಗೆ ಹೇಳುತ್ತಿದ್ದಾರೆ. ಅವರನ್ನು ನೋಡಿ ‘ಬೈ’ ಹೇಳುವುದು ನನಗೆ ನೋವು ನೀಡುತ್ತಿದೆ’ ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಅಮೆರಿಕದ ಮಿಲಿಟರಿ ರಹಸ್ಯಗಳು ಇಷ್ಟು ಸುಲಭವಾಗಿ ಕ್ಲಬ್ಗಳಲ್ಲಿ ಸೋರಿಕೆಯಾಗುತ್ತಿರುವುದು ಭದ್ರತಾ ಸಂಸ್ಥೆಗಳ ಆತಂಕಕ್ಕೆ ಕಾರಣವಾಗಿದೆ.
ಯುದ್ಧಕ್ಕೆ ಸಜ್ಜಾಗುತ್ತಿರುವ ಟ್ರಂಪ್ ಸರ್ಕಾರ?
ವರದಿಗಳ ಪ್ರಕಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮರೈನ್ ಎಕ್ಸ್ಪೆಡಿಷನರಿ ಯೂನಿಟ್ಗಳು ಮತ್ತು 82ನೇ ಏರ್ಬೋರ್ನ್ನ ಸಾವಿರಾರು ಸೈನಿಕರನ್ನು ಇರಾನ್ಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಸುಮಾರು 3,500ಕ್ಕೂ ಹೆಚ್ಚು ಸೈನಿಕರು ಪಶ್ಚಿಮ ಏಷ್ಯಾ ತಲುಪಿದ್ದಾರೆ ಎನ್ನಲಾಗಿದೆ. ಆದರೆ, ಅಮೆರಿಕದ ಒಳಗೆ ಈ ಯುದ್ಧಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಶೇ. 60ಕ್ಕೂ ಹೆಚ್ಚು ಅಮೆರಿಕನ್ನರು ಇರಾನ್ ವಿರುದ್ಧದ ಯುದ್ಧವನ್ನು ಬಯಸುತ್ತಿಲ್ಲ ಎಂದು ತಿಳಿದುಬಂದಿದೆ. ಈ ನಡುವೆ ಸೈನಿಕರ ಈ ರಹಸ್ಯ ಸಂಭಾಷಣೆಗಳು ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.