
ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿಯ ‘ಆಪರೇಷನ್ ಕಮಲ’ದ ಭೀತಿಯಿಂದ 12 ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆಯಂತೆ ಆಗಮಿಸಿರುವ ಅವರು, ಬಿಡದಿ ಬಳಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಅಸ್ಸಾಂನಲ್ಲಿ ಕಾಂಗ್ರೆಸ್ ಶಾಸಕರಿಗೆ ಅಪರೇಷನ್ ಕಮಲದ ಭೀತಿ
ಬೆಂಗಳೂರು: ಅಸ್ಸಾಂನಲ್ಲಿ ಕೆಲ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ನಡುವೆ ಅಸ್ಸಾಂ ರಾಜ್ಯದಲ್ಲಿನ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ‘ಆಪರೇಷನ್ ಕಮಲ’ ಮಾಡುವ ಶಂಕೆ ಹಿನ್ನೆಲೆಯಲ್ಲಿ 12 ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಆಗಮಿಸಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣೆ ಉಸ್ತುವಾರಿ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ ಅವರ ಸಲಹೆ ಮೇರೆಗೆ ಗುರುವಾರ ರಾತ್ರಿ ಅಸಾಂನಿಂದ ಹೊರಟು ಬೆಂಗಳೂರಿಗೆ ಶಾಸಕರು ಬಂದಿದ್ದಾರೆ. 12 ಶಾಸಕರಿಗೆ ಬಿಡದಿ ಬಳಿಯ ವಂಡರ್‌ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ ಎಂದು ಗೊತ್ತಾಗಿದೆ. 126 ಶಾಸಕರನ್ನು ಹೊಂದಿರುವ ಅಸ್ಸಾಂ ವಿಧಾನಸಭೆ ಚುನಾವಣೆ ಶೀಘ್ರದಲ್ಲಿ ನಡೆಯಲಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಕರ್ನಾಟಕ ಮಾದರಿ ಅನುಸರಿಸಿದ್ರೆ ಅಸ್ಸಾಂ ಗೆಲ್ಬಹುದು ಎಂದ ಡಿಕೆಶಿ
ವಿಧಾನಪರಿಷತ್ತು: ಇತ್ತ ಅಸ್ಸಾಂ ಚುನಾವಣೆ ಹೇಗೆ ಗೆಲ್ಲಬೇಕು ಎಂಬುದಕ್ಕೆ ಕೃತಕ ಬುದ್ದಿಮತ್ತೆಯು (ಎಐ) ಕರ್ನಾಟಕ ಮಾದರಿ ಅನುಸರಿಸಿ ಎಂದು ಹೇಳುತ್ತದೆ ಎಂಬ ಸ್ವಾರಸ್ಯಕರ ವಿಚಾರವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದನದಲ್ಲಿ ಬಿಚ್ಚಿಟ್ಟರು. ಪ್ರಶೋತ್ತರ ಕಲಾಪ ವೇಳೆ ಬಿಜೆಪಿಯ ಭಾರತಿ ಶೆಟ್ಟಿ ಅವರು ಆಡಳಿತ ಸುಧಾರಣೆಯಲ್ಲಿ ಕೃತಕ ಬುದ್ದಿಮತ್ತೆ ಬಳಕೆ ಕುರಿತು ಕೇಳಿದ ಪ್ರಶ್ನೆ ವೇಳೆ ನಡೆದ ಚರ್ಚೆಯಲ್ಲಿ ಉತ್ತರಿಸಿದ ಡಿ.ಕೆ.ಶಿವಕುಮಾರ್, ನಾನು ಎಐ ಬಗ್ಗೆ ತಿಳಿದಿರಲಿಲ್ಲ. ಚುನಾವಣೆ ವಿಚಾರವಾಗಿ ಅಸ್ಸಾಂಗೆ ಹೋಗಿದ್ದಾಗ ಎಐ ಬಳಕೆ ಮಾಡಿದೆ. ಹೌ ಟು ವಿನ್ ಅಸ್ಸಾಂ ಎಲೆಕ್ಷನ್ (ಅಸ್ಸಾಂ ಚುನಾವಣೆ ಗೆಲ್ಲುವುದು ಹೇಗೆ?) ಎಂದು ಎಐಗೆ ಪ್ರಶ್ನಿಸಿದೆ. ಅದರದ್ದೇ ಆದ ಒಂದು ಮಾಹಿತಿ ನೀಡಿತು. ಜತೆಗೆ ಇಫ್ ಯು ಗೋ ವಿತ್ ಕರ್ನಾಟಕ ಮಾಡೆಲ್ ಯು ವಿಲ್ ವಿನ್ ಎಲೆಕ್ಷನ್ (ಕರ್ನಾಟಕ ಮಾದರಿಯಂತೆ ಹೋದರೆ ಚುನಾವಣೆ ಗೆಲ್ಲುತ್ತೀರಿ) ಎಂದು ತಿಳಿಸಿತು ಎಂದರು.
ಇದನ್ನೂ ಓದಿ: ಮೊನಾಲಿಸಾ ಜೊತೆ ಮದುವೆಗೆ ಫರ್ಮಾನ್ ಖಾನ್ ಪೋಷಕರಿಂದಲೂ ತೀವ್ರ ವಿರೋಧ: ಅವರು ಹೇಳಿದ್ದೇನು?
ಅದಕ್ಕೆ ಬಿಜೆಪಿಯ ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಎಐ ಹೇಳಿದಂತೆ ಚುನಾವಣೆ ಮಾಡಲಾಗದು ಎಂದು ಕಾಲೆಳೆದರು. ಆಗ ಡಿ.ಕೆ.ಶಿವಕುಮಾರ್, ಈಗಲೇ ನಿಮ್ಮ ಮೊಬೈಲ್‌ನಲ್ಲಿ ಎಐಗೆ ಪ್ರಶ್ನೆ ಕೇಳಿ. ನಾನು ಹೇಳಿದಂತೆಯೇ ಉತ್ತರ ನೀಡುತ್ತದೆ. ಬೇಕಿದ್ದರೆ ಹೊರಗೆ ಬನ್ನಿ ಅದನ್ನು ನಾನು ತೋರಿಸುತ್ತೇನೆ ಎಂದು ನಗುತ್ತಲೇ ತಿರುಗೇಟು ನೀಡಿದರು.
ಅದಕ್ಕೂ ಮುನ್ನ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಈಗ ಎಲ್ಲೆಡೆ ಕೃತಕ ಬುದ್ದಿಮತ್ತೆ ಬಳಕೆಯಾಗುತ್ತಿದೆ. ನ್ಯಾಯಾಲಯಗಳಲ್ಲೂ ಅದರ ಬಗ್ಗೆ ಚರ್ಚೆ ಮಾಡಲಾಗಿದೆ. ಎಐ ವಿಚಾರವಾಗಿ ಕೇಂದ್ರ ಸರ್ಕಾರ ಸಮ್ಮೇಳನ ನಡೆಸಿದೆ. ಸಿಬಿಎಸ್ಸಿಯಲ್ಲಿ 3ರಿಂದ 8ನೇ ತರಗತಿವರೆಗೆ ಈ ವಿಚಾರವನ್ನು ಪಠ್ಯದಲ್ಲಿ ಸೇರಿಸಲು ತಿಳಿಸಲಾಗಿದೆ. ಇನ್ನು, ಆಡಳಿತದಲ್ಲಿ ಎಐ ಬಳಕೆ ಕುರಿತಂತೆ ತೀರ್ಮಾನ ಮಾಡುವುದಕ್ಕೂ ಮುನ್ನ ದೊಡ್ಡ ಸಂಶೋಧನೆಯಾಗಬೇಕು. ಅದಾಗದೇ ತೀರ್ಮಾನಿಸಲಾಗದು ಎಂದು ಹೇಳಿದರು.
ಇದನ್ನೂ ಓದಿ: ಇರಾನ್‌ನಲ್ಲಿ 2.6 ರೂ.ಗೆ ಪೆಟ್ರೋಲ್: ತೈಲ ಸಂಪದ್ಭರಿತ ವೆನೆಜುವೆಲಾದಲ್ಲಿಯೂ ಪೆಟ್ರೋಲ್‌ಗೆ 5 ರೂ.ಗಿಂತ ಕಡಿಮೆ