ಬೆಂಗಳೂರು, 7 ನವೆಂಬರ್: ಮೇರುನಟ ದಿವಂಗತ ಶಂಕರ್ ನಾಗ್ ಅವರ ಜನ್ಮದಿನದ (ಶಂಕರ್ ನಾಗ್ ಜನ್ಮದಿನ) ಪ್ರಯುಕ್ತ ಆಟೋ ಚಾಲಕರ ಸಂಘಟನೆಗಳ ನೇತೃತ್ವದಲ್ಲಿ 12ನೇ ವರ್ಷದ ‘ಚಾಲಕರ ದಿನಾಚರಣೆ’ ನವೆಂಬರ್ 9 ರಂದು ಜಯನಗರ 5ನೇ ಬ್ಲಾಕ್, ಶಾಲಿನಿ ಆಟದ ಮೈದಾನದಲ್ಲಿ ನಡೆಯುತ್ತಿದೆ. ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಈ ಕುರಿತು ಶುಕ್ರವಾರ (ನವೆಂಬರ್ 7) ಪ್ರೆಸ್‌ಕ್ಲಬ್‌ನಲ್ಲಿ ಪೀಸ್ ಆಟೋ ಮತ್ತು ವಿಷ್ಣುಸೇನಾ ಸಮಿತಿ ಹಾಗೂ ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಂಕರ್ ನಾಗ್ (ಶಂಕರ್ ನಾಗ್) ಅವರ ಜನ್ಮದಿನದ ಪ್ರಯುಕ್ತ ಹಂಪಿ ರಥದಂತೆ ಸಿಂಗಾರಗೊಂಡ ಆಟೋಗೆ ಚಾಲನೆ ನೀಡಲಾಯಿತು, ಶಂಕರ್ ನಾಗ್ ಮತ್ತು ಡಾ. ವಿಷ್ಣವರ್ಧನ್ ಫೋಟೋ ಹೊತ್ತ ಈ ರಥ ಬೆಂಗಳೂರಿನಾದ್ಯಂತ ಎಲ್ಲೆಡೆ ಮೆರವಣಿಗೆ ಹೋಗಲಿದೆ.
ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ರಘು ಎನ್. ನಾರಾಯಣ್ ಗೌಡ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎಸ್. ಅಶ್ವತ್ಥ ನಾರಾಯಣ್, ಸಾರಿಗೆ ಆಯುಕ್ತ ಎ.ಎಂ. ಯೋಗೇಶ್, ಆರಕ್ಷಕ ಮಹಾನಿರೀಕ್ಷರಾದ ಡಾ. ಎಂ.ಎ. ಸಲೀಂ ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಚಾಲಕರ ದಿನಾಚರಣೆಗೆ ‘ಆಟೋ ರಾಯಭಾರಿ’ಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.
‘ಪ್ರತಿ ವರ್ಷದಂತೆ ಈ ವರ್ಷವೂ ಶಂಕರ್ ನಾಗ್ ಅವರ ಜನ್ಮದಿನದ ಚಾಲಕರ ದಿನವಾಗಿ ಸಮಸ್ತ ಆಟೋ ಚಾಲಕರ ಸಮ್ಮುಖದಲ್ಲಿ ಅದ್ದೂರಿಯಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ 7 ಜನ ಪ್ರಾಮಾಣಿಕ ಚಾಲಕರು, ಹಿರಿಯ ಹಾಗೂ ಮಹಿಳಾ ಆಟೋ ಚಾಲಕರು ತಮ್ಮ ಸೇವೆಯನ್ನು ಗೌರವಿಸಿ ಚಿನ್ನದ ಪದಕವನ್ನು ವಿತರಿಸುತ್ತಿದ್ದಾರೆ, ಈ ಮೂಲಕ ಪ್ರಾಮಾಣಿಕ ಆಟೋ ಚಾಲಕರಿಗೆ ಇನ್ನಷ್ಟು ಹುರಿದುಂಬಿಸುವ ಕೆಲಸ ಮಾಡಿದ್ದೇವೆ’ ಎಂದು ರಘು ಹೇಳಿದರು.
ಆದರ್ಶ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ಯೂನಿಯನ್ ಅಧ್ಯಕ್ಷ ಎಂ. ಮಂಜುನಾಥ್ ಗೌಡ ಮಾತನಾಡಿ, ‘ಶಂಕರ್‌ನಾಗ್ ಅವರ ದಿನಾಚರಣೆ ಎಲ್ಲ ಚಾಲಕರಿಗೂ ಹಬ್ಬದ ದಿನದಂತೆ. ಹೀಗಾಗಿ ಹಬ್ಬದಂತೆಯೇ ಸಂಭ್ರಮಿಸಲು ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರು ಇರಲಿದ್ದಾರೆ. ಆಗಮಿಸುವ ಸುಮಾರು 4 ಸಾವಿರ ಚಾಲಕರಿಗೆ ಸಮವಸ್ತ್ರ ವಿತರಣೆ. ನಟ ಅಜಯ್ ರಾವ್ ಅವರು ಇಬ್ಬರು ಚಾಲಕರಿಗೆ ಧನಸಹಾಯ ಮಾಡಲಿದ್ದಾರೆ’ ಎಂದರು.
ಇದನ್ನೂ ಓದಿ: ಶಂಕರ್ ನಾಗ್ ಬಳಸುತ್ತಿದ್ದ ಆ ವಸ್ತುವನ್ನು ಕಂಡರೆ ಅನಂತ್ ನಾಗ್ಗೆ ಭಯ
ಆಟೋ ಮತ್ತು ಟ್ಯಾಕ್ಸಿ ಚಾಲಕರಿಲ್ಲದೇ ಸಾರಿಗೆ ವ್ಯವಸ್ಥೆ ಇಲ್ಲ. ಚಾಲಕರನ್ನು ಗೌರವಿಸಲು ಪ್ರತಿವರ್ಷ ನಡೆಸುತ್ತಿರುವ ಚಾಲಕರ ದಿನಾಚರಣೆಯನ್ನು ಸರ್ಕಾರವೇ ಜವಾಬ್ದಾರಿ ಹೊತ್ತು ಆಚರಿಸಬೇಕು. ಜೊತೆಗೆ, ಈ ದಿನವನ್ನು ಸರ್ಕಾರ ಅಧಿಕೃತವಾಗಿ ‘ಚಾಲಕರ ದಿನ’ವನ್ನಾಗಿ ಘೋಷಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿ. ಪ್ಯಾಕ್ ಸದಸ್ಯ ರಾಘವೇಂದ್ರ ಪೂಜಾರಿ ಮಾತನಾಡಿ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಗೌರವ ಸಂದಿರುವ ಚಾಲಕರ ದಿನಾಚರಣೆ ವೇಳೆ ಎಲ್ಲಾ ಆಟೋ ಚಾಲಕರು ‘ವಿಷ್ಣು ನಮನ’ ಸಲ್ಲಿಸಿದ್ದೇವೆ ಎಂದು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.