
ಬಾಗಲಕೋಟೆ, ಮಾರ್ಚ್ 29: ಏ.9ರಂದು ನಡೆಯಲಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿರುಬಿಸಿಲಿನಲ್ಲೂ ಕಾಂಗ್ರೆಸ್ ನಾಯಕರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ (ಸಿದ್ದರಾಮಯ್ಯ) ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ, ನಾಳೆಯಿಂದ ಅಭ್ಯರ್ಥಿ ಉಮೇಶ್ ಮೇಟಿ ಪರ ಮತಬೇಟೆಗೆ ಇಳಿಯಲಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ 5 ದಿನ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ.
ಸಿದ್ದರಾಮಯ್ಯಗೆ ಆಪ್ತರಾಗಿದ್ದ ಸಿಎಂ ಹಾಲುಮತದ ಹೆಚ್.ವೈ.ಮೇಟಿ ನಿಧನದಿಂದ ಬಾಗಲಕೋಟೆ ಕ್ಷೇತ್ರ ತೆರವಾಗಿತ್ತು. ಟಿಕೆಟ್ ಗಾಗಿ ಮೇಟಿ ಕುಟುಂಬದ ಮಧ್ಯೆಯೇ ಫೈಟ್ ನಡೆದಿತ್ತು. ಬಳಿಕ ಹೆಚ್.ವೈ. ಮೇಟಿ ಅವರ ಎರಡನೇ ಮಗ ಉಮೇಶ್ ಮೇಟಿಯನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಘೋಷಿಸಿತ್ತು.
ಆಪ್ತನ ಮಗನನ್ನು ಗೆಲ್ಲಿಸಲು 5 ದಿನಗಳ ಪ್ರಚಾರ
ಸದ್ಯ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಸಿಎಂ ಸಿದ್ದರಾಮಯ್ಯ, ಸರ್ಕಾರದ ವರ್ಚಸ್ಸಿನ ಜೊತೆ ಸಮುದಾಯ ಗೌರವ ಕಾಪಾಡಬೇಕಿದೆ. ಬಾದಾಮಿ ಕ್ಷೇತ್ರದಲ್ಲಿ ಒಮ್ಮೆ ಮಾತ್ರ ಪ್ರಚಾರ ನಡೆಸಿದ್ದರು. ಆದರೆ ಇದೀಗ ಆಪ್ತನ ಮಗನನ್ನು ಗೆಲ್ಲಿಸಲು 5 ದಿನ ಪ್ರಚಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ನಾಳೆ ಅಂದರೆ ಮಾರ್ಚ್ 30 ರಂದು ಬೆಳಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬಳ್ಳಾರಿ ಜಿಂದಾಲ್ ಏರ್‌ಸ್ಟ್ರಿಪ್‌ಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ನಂತರ ಹೆಲಿಕಾಪ್ಟರ್‌ನಲ್ಲಿ ಆಲಮಟ್ಟಿ ಡ್ಯಾಮ್‌ನತ್ತ ಪ್ರಯಾಣ ಬೆಳಸಲಿದ್ದಾರೆ. ಆಲಮಟ್ಟಿ ಡ್ಯಾಮ್ ಹೆಲಿಪ್ಯಾಡ್ ನಿಂದ ಕಾರಿನಲ್ಲಿ ಸುತಗುಂಡಾರ ಗ್ರಾಮಕ್ಕೆ ಆಗಮಿಸುವ ಸಿಎಂ, ಮಧ್ಯಾಹ್ನ 1 ಗಂಟೆಗೆ ಸುತಗುಂಡಾರ ಗ್ರಾಮದ ಅಭ್ಯರ್ಥಿ ಉಮೇಶ್ ಮೇಟಿ ಪರ ಪ್ರಚಾರ ಮಾಡಲಿದ್ದಾರೆ.
ಇದನ್ನೂ ಓದಿ: ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು?
ನಂತರ ನಾಯನೇಗಲಿ, ರಾಂಪುರ, ಬೇವೂರು ಗ್ರಾಮಗಳಲ್ಲಿ ಮತಯಾಚನೆ ಬಳಿಕ ಅಂದು ರಾತ್ರಿ ಆಲಮಟ್ಟಿಯಲ್ಲೇ ವಾಸ್ತವ ಹೂಡಲಿದ್ದಾರೆ. ಇನ್ನು ಮಾರ್ಚ್ 31ರಂದು ಬೆಳಗ್ಗೆ 11ಕ್ಕೆ ಮುಗಳೊಳ್ಳಿ, ಮಧ್ಯಾಹ್ನ 1ಗಂಟೆಗೆ ನೀಲಾನಗರ, 4ಗಂಟೆಗೆ ಐಹೊಳೆ ಮತ್ತು 6ಗಂಟೆಗೆ ಅಮೀನಗಡದಲ್ಲಿ ಸಿಎಂ ಸಿದ್ದರಾಮಯ್ಯ ಮತಯಾಚನೆ ಮಾಡಲಿದ್ದಾರೆ. ಏಪ್ರಿಲ್ 3, 4 ಮತ್ತು 6 ರಂದು 2 ನೇ ಹಂತದಲ್ಲಿ ಮತ್ತೆ ಪ್ರಚಾರ ನಡೆಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.