ಬೆಂಗಳೂರು, ಡಿಸೆಂಬರ್ 15: ಬೆಂಗಳೂರು (ಬೆಂಗಳೂರು) ಸಂಚಾರ ಬಾಕಿ ಇರುವ ಫೈನ್ ಪಾವತಿಗೆ ಡಿಸ್ಕೌಂಟ್ ನೀಡಿದ ರೀತಿಯಲ್ಲಿ ಜಲಮಂಡಳಿ ಕೂಡ ನೀರಿನ ಬಿಲ್ ಬಾಕಿ ಉಳಿಸಿಕೊಂಡವರಿಗೆ ಒಂದು ಬಾರಿ ಪರಿಹಾರ ವಿನಾಯಿತಿ ಕೊಡಲು ಮುಂದಾಗಿದೆ. ಕಾವೇರಿ ನೀರಿನ ವಿಳಂಬ ಶುಲ್ಕ ಮತ್ತು ಬಡ್ಡಿ ಮೇಲೆ ಸಂಪೂರ್ಣ ವಿನಾಯಿತಿ ನೀಡಲಾಗುವುದು. ಆದರೆ ಅಸಲು ಹಣದಲ್ಲಿ ಯಾವುದೇ ವಿನಾಯಿತಿ ಇಲ್ಲ. ಮೂರು ತಿಂಗಳ ಕಾಲ ಬಾಕಿ ಮೊತ್ತ ವಿನಾಯಿತಿಗೆ ಅವಕಾಶ ನೀಡಲಿದೆ. ಜಲಮಂಡಳಿ ಈ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಜನವರಿ ತಿಂಗಳಿನಿಂದ OTS ಜಾರಿಯಾಗುವ ಸಾಧ್ಯತೆ ಇದೆ.
ನೀರಿನ ಬಿಲ್: 700 ಕೋಟಿ ರೂ. ಬಾಕಿ!
ವಿಶ್ವದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ, ಜಲಮಂಡಳಿಯು 11.14 ಲಕ್ಷ ನೀರಿನ ಸಂಪರ್ಕಗಳನ್ನು ಕಲ್ಪಿಸಿದೆ. ನಗರದ 1.55 ಕೋಟಿ ಜನರ ಬಾಯಾರಿಕೆ ನೀಗುತ್ತಿದೆ. ನೂರು ಕಿ.ಮೀ. ದೂರದ ಕಾವೇರಿಯಿಂದ ನೀರು ತರುತ್ತಿರುವ ಜಲಮಂಡಳಿಗೆ ನೀರು ಮತ್ತು ಶುಲ್ಕವೇ ಆದಾಯದ ಪ್ರಮುಖ ಮೂಲ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು, ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ನೀರಿನ ಸಂಪರ್ಕ ಪಡೆದಿರುವ ಸಾರ್ವಜನಿಕರು ಸಮರ್ಪಕವಾಗಿ ಪಾವತಿಸುತ್ತಿಲ್ಲ. ಇದರಿಂದ ಜಲಮಂಡಳಿಯು ದೈನಂದಿನ ನಿರ್ವಹಣೆಗೆ ಹಣ ಹೊಂದಿಸಲು ಪರದಾಡುತ್ತಿದೆ. ಹಲವು ವರ್ಷಗಳಿಂದ ಗ್ರಾಹಕರು 700 ಕೋಟಿ ರೂ. ಶುಲ್ಕ ಬಾಕಿ ಉಳಿಸಿಕೊಂಡಿದ್ದು, ಅಸಲು 450 ಕೋಟಿ ಹಣ ಬರುವ ನಿರೀಕ್ಷೆಯಿದೆ.
ಬೆಂಗಳೂರು ಜಲಮಂಡಳಿಯ ವನ್ ಟೈಮ್ ಸೆಟಲ್‌ಮೆಂಟ್ ನಿರ್ಧಾರದ ಬಗ್ಗೆ ಬೆಂಗಳೂರಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಒಳ್ಳೆಯ ನಿರ್ಧಾರ. ನಮ್ಮ ಕಛೇರಿಯ ನೀರಿನ ಬಿಲ್ ಎರಡೂವರೆ ಲಕ್ಷ ರೂ. ಇತ್ತು. ಬಡ್ಡಿ ಮತ್ತು ಫೈನ್ ಸೇರಿ ಲಕ್ಷಾಂತರ ರೂಪಾಯಿ ಆಗಿದೆ. ಇದೀಗ ವನ್ ಟೈಮ್ ಸೆಟಲ್ಮೆಂಟ್ ಅವಕಾಶದಿಂದ ನಮಗೆ ಅನುಕೂಲ ಆಗಲಿದೆ.
ನೀರಿನ ಬಾಕಿ ಬಿಲ್ ಪಾವತಿ ಹೇಗೆ?
ಬಾಕಿ ಬಿಲ್ ಹಣ ಪಾವತಿ ಮಾಡಲು ಬಿಡಬ್ಲೂಎಸ್ಎಸ್ಬಿ ಆನ್‌ಲೈನ್, ಆಫ್‌ಲೈನ್ (ಜಲಮಂಡಳಿ ಕಚೇರಿ) ಮತ್ತು ಇತರ ಬ್ಯಾಂಕಿಂಗ್ ಪಾವತಿ ವ್ಯವಸ್ಥೆಗಳ ಮೂಲಕ ಪಾವತಿಗೆ ಅವಕಾಶ ನೀಡಲಾಗುತ್ತದೆ. ಮಾರ್ಚ್ ಅಂತ್ಯದವರೆಗೆ ಈ ಓಟಿಎಸ್ ಸಿಸ್ಟಮ್ ಜಾರಿಯಲ್ಲಿರುವ ನಿರೀಕ್ಷೆಯಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ