ಬೆಳಗಾವಿ, (ನವೆಂಬರ್ 02): ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ) ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ನಾಲ್ವರು ವಿಜೇತರಾಗಿದ್ದಾರೆ. ನ್ಯಾಯಾಲಯದ ಆದೇಶದಂತೆ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ, ಜಾರಕಿಹೊಳಿ ಟೀಂ ಸ್ಪಷ್ಟ ಬಹುಮತ ಸಿಕ್ಕಿದೆ. ಇನ್ನು ಮುಂದಿನ 15 ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಯಾರು ಅಧ್ಯಕ್ಷರಾಗಿ ಇರಲಿದ್ದಾರೆ ಎನ್ನುವುದನ್ನು ಜಾರಕಿಹೊಳಿ ಬ್ರದರ್ಸ್ (ಜಾರಕಿಹೊಳಿ ಬ್ರದರ್ಸ್)ತೀರ್ಮಾನಿಸಲಿದ್ದಾರೆ. ಹೀಗಾಗಿ ಅಧ್ಯಕ್ಷರ ಆಯ್ಕೆ ತೀವ್ರ ಕುತೂಹಲ ಮೂಡಿಸಿದೆ.
ಡಿಸಿಸಿ ಬ್ಯಾಂಕಿನ 16 ನಿರ್ದೇಶಕರ ಸ್ಥಾನಗಳ ಮೇಲಿನ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಇನ್ನುಳಿದ 7 ಸ್ಥಾನಗಳಿಗೆ ಅಕ್ಟೋಬರ್ 19 ರಂದು ಮತದಾನವಾಗಿತ್ತು. ಇನ್ನು ಅಂದು ಸಂಜೆಯೇ ರಾಮದುರ್ಗ, ಅಥಣಿ ಹಾಗೂ ರಾಯಬಾಗ ಕ್ಷೇತ್ರಗಳ ನಿರ್ಧೇಶಕರ ಫಲಿತಾಂಶ ಪ್ರಕಟವಾಗಿದೆ.ಆದ್ರೆ, ಹುಕ್ಕೇರಿ, ನಿಪ್ಪಾಣಿ ಬೈಲಹೊಂಗಲ ಮತ್ತಾಯ ಚನ್ನಮ್ಮನ ಕಿತ್ತೂರು ಕ್ಷೇತ್ರಗಳಿಂದ ಗೆದ್ದವರು ಯಾರು ಸೋತವರು ಯಾರು ಎಂಬುದು ಖಚಿತವಾಗಿದ್ದರೂ ಕೋರ್ಟ್ ತಡೆಯಾಜ್ಞೆ ನೀಡಿದ ಫಲಿತಾಂಶ ಪ್ರಕಟವಾಗಿಲ್ಲ.
ಇದನ್ನೂ ಓದಿ: 29 ವರ್ಷದ ನಂತರ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧಿಕಾರ: ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ಎಂದ ಜಾರಕಿಹೊಳಿ
ಈಗ ಚುನಾವಣಾ ಫಲಿತಾಂಶ ಪ್ರಕಟಕ್ಕೆ ನ್ಯಾಯಾಲಯದಿಂದ ಆದೇಶ ದೊರೆತ ಚುನಾವಣಾಧಿಕಾರಿ ಶ್ರವಣ ನಾಯ್ಕ ಅವರು ಇಂದು (ನವೆಂಬರ್ 02) ಮತ ಎಣಿಕೆ ಪ್ರಕ್ರಿಯೆ ನಡೆಸಿ ಫಲಿತಾಂಶ ಪ್ರಕಟಿಸಿದರು. ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ ಹಾಗೂ ಹುಕ್ಕೇರಿ ತಾಲ್ಲೂಕಿನ ಫಲಿತಾಂಶ ಪ್ರಕಟವಾಗಿದೆ. ಬೈಲಹೊಂಗಲದಿಂದ ಮಹಾಂತೇಶ ದೊಡ್ಡಗೌಡರ್ 54 ಮತದಿಂದ ಆಯ್ಕೆಯಾಗಿದ್ದರೆ, ಕಿತ್ತೂರಿನಿಂದ ನಾನಾಸಾಹೇಬ್ ಪಾಟೀಲ್ 17 ಮತ ಪಡೆದು ಆಯ್ಕೆಯಾಗಿದ್ದಾರೆ.
ಇನ್ನು ನಿಪ್ಪಾಣಿಯಿಂದ ಅಣ್ಣಾಸಾಬ್ ಜೊಲ್ಲೆ 71 ಮತ ಪಡೆದು ಆಯ್ಕೆ, ಹುಕ್ಕೇರಿಯಿಂದ ರಮೇಶ್ ಕತ್ತಿ 59 ಮತ ಪಡೆದು ಆಯ್ಕೆಯಾಗಿದ್ದಾರೆ. ಆ ಮೂಲಕ ಡಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಟೀಂಗೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಈಗ ಅಧ್ಯಕ್ಷ ಯಾರಾಗಲಿದ್ದಾರೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ. ಜಾರಕಿಹೊಳಿ ಬ್ರದರ್ಸ್ ಹೇಳಿದಂತೆ ಲಿಂಗಾಯತ ಸಮುದಾಯದವರೇ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಲಿದ್ದಾರೆ. ಹೀಗಾಗಿ ಲಿಂಗಾಯತ ಸಮುದಾಯಕ್ಕೆ ಸೇರಿದ ಬಿಜೆಪಿ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಸೇರಿದಂತೆ ಇತರ ಅಧ್ಯಕ್ಷ ಸ್ಥಾನ ರೇಸಿನಲ್ಲಿದ್ದು, ಅಂತಿಮವಾಗಿ ಯಾರನ್ನು ಮಾಡಬೇಕೆಂದು ಜಾರಕಿಹೊಳಿ ಬ್ರದರ್ಸ್ ನಿರ್ಧರಿಸಲಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬೀಗುತ್ತಿದ್ದ ಜಾರಕಿಹೊಳಿ ಬ್ರದರ್ಸ್ ಗೆ ಶಾಕ್ ಕೊಟ್ಟ ಸವದಿ ಸಹೋದರರು
ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದ ಅಣ್ಣಾಸಾಬ್ ಜೊಲ್ಲೆ
ಇನ್ನು ನಿಪ್ಪಾಣಿ ನಿರ್ದೇಶಕರಾಗಿ ಆಯ್ಕೆಯಾದ ಮಾಜಿ ಸಂಸದ ಅಣ್ಣಾಸಾಬ್ ಜೊಲ್ಲೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಹೈಕೋರ್ಟ್ ಆದೇಶದಂತೆ ಇವತ್ತು ಫಲಿತಾಂಶ ಘೋಷಣೆಯಾಗಿದೆ. ನಾನು ಸೇರಿಸಿದ ನಾಲ್ಕು ಮತಕ್ಷೇತ್ರದ ಫಲಿತಾಂಶ ಬಂದಿದೆ.71 ಮತಗಳನ್ನು ಗಳಿಸುವುದರ ಮೂಲಕ ಡಿಸಿಸಿ ಬ್ಯಾಂಕ್ಗೆ ಆಯ್ಕೆಯಾಗಿದೆ. ಇನ್ನೊಂದು 15 ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ನಾನು ಸೇರಿದಂತೆ ಎಲ್ಲರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿರುವೆ. ನಾವೆಲ್ಲರೂ ಜಾರಕಿಹೊಳಿ ಬ್ರದರ್ಸ್ ಬಾಣದಲ್ಲಿ ಇದ್ದೇವೆ. ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಜೊತೆಗೆ ಚರ್ಚಿಸಿ ಅಧ್ಯಕ್ಷರು ಆಯ್ಕೆ ಮಾಡುತ್ತಾರೆ.