ಬೆಳಗಾವಿಯಲ್ಲಿ ತೀವ್ರ ಸ್ವರೂಪ ಪಡೆದ ಕಬ್ಬು ಬೆಳೆಗಾರರ ಹೋರಾಟ
ಬೆಳಗಾವಿ, ನವೆಂಬರ್ 4: ಕಬ್ಬು ದರ ನಿಗದಿ ಮತ್ತು ಬಾಕಿ ಪಾವತಿಗೆ ಬೆಳಗಾವಿಯ (ಬೆಳಗಾವಿ ರೈತರ ಪ್ರತಿಭಟನೆ) ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಜಿಲ್ಲೆಯ ಅಥಣಿಯಲ್ಲಿ ರೈತರು, ಕನ್ನಡಪರ ಸಂಘಟನೆಗಳ ಬೆಂಬಲದೊಂದಿಗೆ ಬಂದ್‌ಗೆ ಕರೆ ನೀಡಿದ್ದು, ಜಿಲ್ಲೆಯ ಪ್ರಮುಖ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಬೆಳಗಾವಿಯ ಅಥಣಿ, ಚಿಕ್ಕೋಡಿ, ಗುರ್ಲಾಪುರ, ಜಾಂಬೋಟಿ, ಗೋಕಾಕ್ ಸೇರಿದಂತೆ ವಿವಿಧ ಕಡೆಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ಅಂಗಡಿ–ಮಳಿಗೆಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಗಿದೆ. ಗೋಕಾಕ್-ಅಥಣಿ ರಸ್ತೆ, ದರೂರ ಹಲ್ಯಾಳ ಸೇತುವೆ ಮೆಲೆ ರಸ್ತೆ ಬಂದ್ ಮಾಡಿ ಪ್ರತಿಭಟನೆ.
ಹೋರಾಟಕ್ಕೆ ವಿದ್ಯಾರ್ಥಿಗಳ ಸಾಥ್
ರೈತ ಸಂಘದ ಮುಖಂಡ ಗಣೇಶ ಈಳಿಗೇರ್ ನೇತೃತ್ವದಲ್ಲಿ ಗೋಕಾಕ್ ಪಟ್ಟಣದ ನಾಕಾ ನಂಬರ್ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು, ಈ ರೈತರ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳು ಸಾಥ್ ನೀಡಿದರು. ಕಬ್ಬಿಗೆ 3,500ರೂ. ದರ ನಿಗದಿ ಮಾಡುವಂತೆ ರೈತರು ಸೂಚಿಸಿದ್ದಾರೆ. ಎರಡು ದಿನದಲ್ಲಿ ದರ ಘೋಷಣೆ ಮಾಡದಿದ್ದರೆ ರಾಷ್ಟ್ರೀಯ ಹೆದ್ದಾರಿ ನಾಲ್ಕು, ಬೆಂಗಳೂರು ಪುಣೆ ಬಂದ್ ಮಾಡುವ ಎಚ್ಚರಿಕೆ.
ಪ್ರತಿಭಟನೆಗೆ ನಾನು ಸಾಥ್ ನೀಡುತ್ತೇನೆಂದ ವಿಜಯೇಂದ್ರ
ರೈತರ ಈ ಪ್ರತಿಭಟನೆ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಗುರ್ಲಾಪುರದಲ್ಲಿ ಕೆಲ ದಿನಗಳಿಂದ ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ನ್ಯಾಯಯುತವಾಗಿರುವ ಬೇಡಿಕೆಗಳನ್ನು ಪ್ರಸ್ತುತಪಡಿಸುವಂತೆ ಇದೆ. ಈ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದಾಗ ವಿರೋಧ ಪಕ್ಷವಾಗಿ ನಾವು ಬೆಂಬಲ ನೀಡಬೇಕಾಗಿದೆ. ನಾನು ಸಹ ಪಕ್ಷದ ಎಲ್ಲಾ ಮುಖಂಡರ ಜೊತೆಗೆ ಚರ್ಚೆ ಮಾಡಿ, ರೈತರ ಪ್ರತಿಭಟನೆಗೆ ಬೆಂಬಲ ಕೊಡಲು ಬಂದಿದ್ದೇನೆ.
ಅತಿವೃಷ್ಟಿ ಸಂದರ್ಭದಲ್ಲಿ ಸಹ ಕಲ್ಯಾಣ ಕರ್ನಾಟಕದಲ್ಲಿ ನಾನು ಪ್ರವಾಸ ಮಾಡಿದ್ದೆ. ಭೀಕರ ಮಳೆಯಿಂದ ತೊಂದರೆಗೀಡಾದಾಗ ಉಸ್ತುವಾರಿ ಸಚಿವರಾಗಲಿ, ವಿಶೇಷ ಸಚಿವರಾಗಲಿ, ಕೃಷಿ ಸಚಿವರಾಗಲಿ ಉತ್ತರ ಕರ್ನಾಟಕ ಪ್ರವಾಸ ಮಾಡಲಿಲ್ಲ. ರೈತರು ಕಾರ್ಖಾನೆಗಳಲ್ಲಿ 6 ಮಿಲಿಯನ್ ಟನ್ ಕಬ್ಬು ಅರೆಯುತ್ತಾರೆ. ಅದರಿಂದ ರಾಜ್ಯ ಸರ್ಕಾರಕ್ಕೆ 50-60ಸಾವಿರ ಕೋಟಿ ಆದಾಯ ಬರುತ್ತಿದೆ. ಆದರೆ ಈಗ ಸಂಕಷ್ಟದಲ್ಲಿರುವ ರೈತರ ಪರಿಸ್ಥಿತಿ ಕೇಳಲು ರಾಜ್ಯ ಸರ್ಕಾರ ಮುಂದೆ ಬರುತ್ತಿಲ್ಲ. ಈ ಸರ್ಕಾರಕ್ಕೆ ನಾಡಿನ ರೈತರ ಮೇಲೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ ವಿಕೋಪಕ್ಕೆ ತಿರಗಿದ ಕಬ್ಬು ಬೆಳೆಗಾರರ ಹೋರಾಟ: ಕಿಡಿಗೇಡಿಗಳಿಂದ ಕಲ್ಲು ತೂರಾಟ
ಆದಷ್ಟು ಬೇಗ ಕಬ್ಬಿಗೆ ಬೆಲೆ ನಿಗದಿ ಮಾಡಿಸುತ್ತೇನೆಂದು ಪರಮೇಶ್ವರ್ ಹೇಳಿಕೆ
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್ , ಬೆಳಗಾವಿ ಪ್ರತಿಭಟನೆ ಕುರಿತು ನಾನೂ ಕೂಡ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಜತೆ ಚರ್ಚೆ ನಡೆಸಿದ್ದೇನೆ. ಆದಷ್ಟು ಬೇಗ ಕಬ್ಬಿಗೆ ಬೆಲೆ ನಿಗದಿ ಮಾಡಿ ಸಮಸ್ಯೆ ಬಗೆಹರಿಸಲು ಹೇಳಿದೆ. ಇಲ್ಲದಿದ್ರೆ ಪೊಲೀಸರಿಗೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತದೆ ಎಂದಿದ್ದೇನೆ. ಸತೀಶ್ ಜಾರಕಿಹೊಳಿ ಸೇರಿ ಆ ಭಾಗದ ಸಚಿವರ ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟಿದ್ದಾರೆ. ನಿನ್ನೆ ಒಬ್ಬರು ರೈತರು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಪೊಲೀಸರು ಅವರನ್ನು ರಕ್ಷಿಸಿದ್ದಾರೆ. ಈ ರೀತಿಯ ಘಟನೆಗಳು ಮರುಕಳಿಸಬಾರದು. ಬಿಜೆಪಿಯವರು ಸಹಜವಾಗಿ ಇಂತಹ ಸಂದರ್ಭದಲ್ಲಿ ಬೆಂಬಲ ನೀಡಿದ್ದಾರೆ. ಇಂಥ ಅವಕಾಶ ಮತ್ತೆ ಸಿಕ್ಕರೆ ಬಿಡುತ್ತಾರಾ? ಸರ್ಕಾರ ಕುರ್ಚಿಯಲ್ಲಿ ತೊಡಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಏನಾಗಿತ್ತು ಎಂದು ಅವರೇ ನೋಡಿಕೊಳ್ಳಲಿ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.