ಬೆಳಗಾವಿ, ಡಿಸೆಂಬರ್ 17: ಗೃಹಲಕ್ಷ್ಮೀ ಯೋಜನೆ ವಿಚಾರವಾಗಿ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ಮಾಹಿತಿ ತಪ್ಪು ಎಂಬ ಕಾರಣಕ್ಕೆ ವಿಪಕ್ಷಗಳು ಕೋಲಾಹಲವನ್ನೇ ಎಬ್ಬಿಸುವೆ. ವಾಗ್ಯುದ್ಧ, ಸಭಾತ್ಯಾಗದಂತಹ ಘಟನೆಗಳು ನಡೆದು ಸಚಿವರು ವಿಷಾದ ವ್ಯಕ್ತಪಡಿಸಿದ ಪ್ರಸಂಗವೂ ನಡೆದಿದೆ. ಹೀಗಿದ್ದರೂ ಪ್ರತಿಪಕ್ಷಗಳ ಆಕ್ರೋಶ ಮಾತ್ರ ಕಡಿಮೆಯಾಗುವುದಿಲ್ಲ. ಈ ನಡುವೆ ರಾಜ್ಯ ಸರ್ಕಾರದ ಮತ್ತೊಂದು ಬೇಜವಾಬ್ದಾರಿ ಸದನದಲ್ಲಿ ಬಟಾ ಬಯಲಾಗಿದೆ. ಪರಿಷತ್ ಸದಸ್ಯರಿಗೆ ಉತ್ತರ ನೀಡುವ ವಿಚಾರದಲ್ಲಿ ಎಡವಟ್ಟು ನಡೆದಿರೋದೀಗ ಬಹಿರಂಗವಾಗಿದೆ.
ಉತ್ತರ ಇದೆ ಎಂದು ನೀಡಿದ್ದು ಖಾಲಿ ಪೆನ್ಡ್ರೈವ್ !
ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ನವೀನ್ ಕಲಾಪದಲ್ಲಿ ಪ್ರಶ್ನೆ ಕೇಳಿದ್ದು, ಇದಕ್ಕೆ ಉತ್ತರ ಇದೆ ಎಂದು ನೀಡಿದ ಪೆಂಡ್ರೈವ್ ಖಾಲಿಯಾಗಿದೆ ಎಂಬ ಆರೊಪ ಕೇಳಿಬಂದಿದೆ. ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ನೀಡಿದ್ದ ಉತ್ತರದ ಬಗ್ಗೆ ಸದಸ್ಯ ನವೀನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ನೀಡಿದ್ದ ಪೆನ್ಡ್ರೈವ್‌ನಲ್ಲಿ ಏನೂ ಇರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ, ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್
ಸರ್ಕಾರಕ್ಕೆ ಉಪಸಭಾಪತಿ ಸೂಚನೆ
ಸದಸ್ಯರ ಆರೋಪದ ಈ ರೀತಿಯ ಲೋಪ ಆಗದಂತೆ ನೋಡಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಸಭಾಪತಿ ಪೀಠ ಖಡಕ್ ಸೂಚನೆ ನೀಡಿದೆ. ಇಂತಹ ವಿಚಾರಗಳು ಮುಂದೆ ಮುರುಕಳಿಸಬಾರದು ಎಂದು ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ತಾಕೀತು ಮಾಡಿದ್ದಾರೆ. ಜೊತೆಗೆ, ನಿಮಗೆ ಸೂಕ್ತ ಉತ್ತರ ಪೆಂಡ್ರೈವ್ ನಲ್ಲೇ ಸಿಗುತ್ತದೆ ಎಂದು ಬಿಜೆಪಿ ಸದಸ್ಯ ನವೀನ್ ಅವರಿಗೆ ಉಪಸಭಾಪತಿ ಅವರು ಭರವಸೆ ನೀಡಿದ ಹಿನ್ನೆಲೆ ವಿಷಯ ಸುಖಾಂತ್ಯ ಕಂಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.