ಬೆಂಗಳೂರು, ಅಕ್ಟೋಬರ್ 18: ಎಲ್ಲಾ ಜನಸಾಮಾನ್ಯರು ಎಲ್ಲಾದರೂ ಹೊರಗೆ ಹೋಗಬೇಕಾದರೆ ನೆನಪಾಗುವುದು ಬಿಎಂಟಿಸಿ. ಆದರೆ ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ (ಬಿಎಂಟಿಸಿ) ಜನರು ಒಂದು ಕ್ಷಣ ಯೋಚಿಸುತ್ತಾರೆ ಅಂದರೆ. ಏಕೆಂದರೆ ಉತ್ತಮ ಸಾರಿಗೆ ಸೇವೆಗೆ ಹೆಸರಾಗಿದ್ದ ಬಿಎಂಟಿಸಿ ಬಸ್‌ಗಳು ಅಮಾಯಕ ಜನರ ಜೀವ ತೆಗೆಯುವ ಯಮಸ್ಬರೂಪಿಗಳಾಗಿ ಮಾರ್ಪಟ್ಟಿವೆ. ಇದೀಗ ಮತ್ತೊಂದು ಅಪಘಾತ ಸಂಭವಿಸಿದ್ದು, 9 ವರ್ಷದ ಬಾಲಕಿ ಬಿಎಂಟಿಸಿ ಬಸ್ ಹರಿದು ದಾರುಣ ಅಂತ್ಯ (ಸಾವು) ಕಂಡಿದ್ದಾಳೆ.
ಬೆಂಗಳೂರಿನಲ್ಲಿ ಉತ್ತಮ ಸಾರಿಗೆ ಸೇವೆ ನೀಡುವಲ್ಲಿ ಹೆಸರುವಾಸಿಯಾದ ಬಿಎಂಟಿಸಿ ಸಂಸ್ಥೆಗೆ ಇತ್ತೀಚೆಗೆ ಮೇಲಿಂದ ಮೇಲೆ ಕಪ್ಪು ಚುಕ್ಕೆಗಳು ಬೀಳುತ್ತಿವೆ. ಬೇಜವಾಬ್ದಾರಿತನ ಪ್ರದರ್ಶಿಸಿ ಅಮಾಯಕ ಜನರ ಜೀವದ ಜೊತೆಗೆ ಕೆಲ ಬಿಎಂಟಿಸಿ ಬಸ್ ಚಾಲಕರು ಚೆಲ್ಲಾಟ ಆಡುತ್ತಿದ್ದಾರೆ. ಈ ರೀತಿಯ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ಅದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ 9 ವರ್ಷದ ಬಾಲಕಿ ಭುವನ ಮೇಲೆ ಬಿಎಂಟಿಸಿ ಚಕ್ರ ಹರಿದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಜಾಜಿನಗರ ಮೊದಲನೇ ಬ್ಲಾಕ್‌ನ ಸಿಗ್ನಲ್‌ನಲ್ಲಿ ನಡೆದಿದೆ.
ಇದನ್ನೂ ಓದಿ: ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ ಮೂರು ಸಾವಿರ ಬಸ್ ಮಾರ್ಗಗಳು: ಪರಿಷ್ಕರಣೆ
ರಾಜಾಜಿನಗರ ಮೊದಲನೇ ಬ್ಲಾಕ್‌ನಲ್ಲಿರುವ ಪಂಚ ಜನ್ಯ ವಿದ್ಯಾಪೀಠ ಶಾಲೆಯಲ್ಲಿ ಐದನೇ ತರಗತಿ ತರಗತಿಯಲ್ಲಿ 9 ವರ್ಷದ ಭುವನ ತನ್ನ ಇಬ್ಬರು ಸಹೋದರಿಯರ ಜೊತೆ ಸಿಗ್ನಲ್ ದಾಟುವ ವೇಳೆ ಬಿಎಂಟಿಸಿ ಚಕ್ರಕ್ಕೆ ಸಿಲುಕಿ ನರಳಿ ಕೊನೆಯುಸಿರೆಳೆದಿದ್ದಾಳೆ. ಘಟನೆ ಬಳಿಕ ಕೂಡಲೇ ಸಾರ್ವಜನಿಕರು ಭುವನಳನ್ನ ಸಮೀಪದಲ್ಲೇ ಇದ್ದ ಫೋರ್ಟಿಸ್ ಆಸ್ಪತ್ರೆಗೆ ಕರೆ ತಂದರೂ, ಅಷ್ಟರಲ್ಲೇ ಕೊನೆಯುಸಿರೆಳೆದ ಬಾಲಕಿ.
ಸ್ಥಳಕ್ಕೆ ಬಂದ ಭುವನ ಪೋಷಕರ ಆಕ್ರಂದನ ಕರುಳು ಹಿಂಡುವಂತಿತ್ತು. ಭುವನ ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ಭುವನ ಅವರ ತಂದೆ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದು, ತಾಯಿ ಜೋಳದ ವ್ಯಾಪಾರ ಮಾಡುತ್ತಾ ಮೂರು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಬಳಿಯ ಬೋವಿ ಪಾಳ್ಯದಲ್ಲಿ ವಾಸ ಇತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹರಿದು ಬಾಲಕ ಸ್ಥಳದಲ್ಲೇ ಸಾವು
ಒಟ್ಟಾರೆ ಬಿಎಂಟಿಸಿ ಬಸ್ಸುಗಳಲ್ಲಿ ಇತ್ತೀಚೆಗೆ ನಡೆದ ಘಟನೆ ಜನ ಗಾಬರಿ ಪಡುವ ಹಾಗೆ ಒಂದಾದ ಮೇಲೆ ಒಂದರಂತೆ ಮರುಕಳಿಸುತ್ತಿದೆ. ಜನಸಾಮಾನ್ಯರು ಬಸ್ ಹತ್ತುವುದಿರಲಿ ರಸ್ತೆಯಲ್ಲಿ ಓಡಾಟ ಮಾಡುವುದಕ್ಕೂ ಭಯಪಡುವ ಹಾಗೆ ಕೆಲ ಬಿಎಂಟಿಸಿ ಬಸ್ ಚಾಲಕರು ಅಪಾಯಕಾರಿ ಚಾಲನೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳುವುದು ಯಾವಾಗ? ಬಿಎಂಟಿಸಿ ಹಿರಿಯ ಅಧಿಕಾರಿಗಳು ಏನೇ ಸಬೂಬು ಹೇಳುತ್ತಿದ್ದರೂ, ಘಟನೆಗಳು ನಡೆಯುತ್ತಲೇ ಇವೆ, ಸಾರ್ವಜನಿಕರ ಛೀಮಾರಿಗೆ ಗುರಿಯಾಗಿದೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.