
ಟೌನ್ ಹಾಲ್ ಬಳಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ಮೊದಲೇ ಘೋಷಿಸಿದ್ದರು. ಆದರೂ ಎರಡು ಲಾರಿಗಳಲ್ಲಿ ನೂರಾರು ಕಾರ್ಮಿಕರು ಜಮಾಯಿಸಿ ರಸ್ತೆ ತಡೆ ನಡೆಸಲು ಮುಂದಾದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪೊಲೀಸರು ಸಾರಾಸಗಟು ಬಂಧನ ಪ್ರಕ್ರಿಯೆ ಆರಂಭಿಸಿದರು. ಸುಮಾರು 5 ಬಿಎಂಟಿಸಿ ಬಸ್ಸುಗಳಲ್ಲಿ 500ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ನಗರದ ಹೊರವಲಯದ ಮೈದಾನಗಳಿಗೆ ಕರೆದೊಯ್ದರು.
‘ಪ್ರತಿಭಟನಾಕಾರರು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲಿ, ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಸಹಿಸುವುದಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆಯಾಗಿ ಭಾರತ್ ಬಂದ್ ಹಿನ್ನೆಲೆಯಲ್ಲಿ ಟೌನ್ ಹಾಲ್ ರಣರಂಗದಂತಾಗಿದ್ದು, ಸಾರ್ವಜನಿಕರು ಮಾತ್ರ ಪೊಲೀಸರ ಮತ್ತು ಸಂಘಟನೆಗಳ ನಡುವೆ ಸಿಲುಕಿ ಪರದಾಡುವಂತಾಯಿತು.