ಬೆಂಗಳೂರಿನ ಯಮಲೂರಿನಲ್ಲಿ ನೇಪಾಳಿ ಮನೆಗೆಲಸದವರು ₹18 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಆಗಿದ್ದರು. ಆರೋಪಿಗಳ ಪತ್ತೆಗಾಗಿ ನೇಪಾಳಕ್ಕೆ ತೆರಳಿದ್ದ ಪೊಲೀಸರ ತಂಡ, ಒಂದು ತಿಂಗಳ ಸತತ ಹುಡುಕಾಟದ ನಂತರ ಯಾವುದೇ ಸುಳಿವು ಸಿಗದೆ ಬರಿಗೈಯಲ್ಲಿ ಹಿಂದಿರುಗಿದೆ.

ಬೆಂಗಳೂರು (ಮಾ.05): ಸಿಲಿಕಾನ್ ಸಿಟಿ ಬೆಂಗಳೂರಿನ ಮಾರತ್‌ಹಳ್ಳಿ ಸಮೀಪದ ಯಮಲೂರಿನಲ್ಲಿ ನಡೆದಿದ್ದ ಬೃಹತ್ ಕಳ್ಳತನ ಪ್ರಕರಣದ ತನಿಖೆ ಈಗ ಅಕ್ಷರಶಃ ಕಗ್ಗಂಟಾಗಿ ಪರಿಣಮಿಸಿದೆ. ಮನೆಯೊಂದರಿಂದ ಸುಮಾರು 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದ ನೇಪಾಳಿ ಮೂಲದ ಖದೀಮರ ಪತ್ತೆಗಾಗಿ ನೇಪಾಳಕ್ಕೆ ತೆರಳಿದ್ದ ವೈಟ್‌ಫೀಲ್ಡ್ ವಿಭಾಗದ ಪೊಲೀಸರ ನಾಲ್ಕು ತಂಡಗಳು ಒಂದು ತಿಂಗಳ ಸತತ ಹುಡುಕಾಟದ ನಂತರ ಬರಿಗೈಲಿ ಮರಳಿವೆ.

ಕಳೆದ ಜನವರಿ 25ರಂದು ಈ ಭೀಕರ ದರೋಡೆ ನಡೆದಿತ್ತು. ಕೃತ್ಯ ನಡೆದು ಒಂದೂವರೆ ತಿಂಗಳು ಕಳೆದರೂ ಆರೋಪಿಗಳ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರು ನೇಪಾಳದ ಗಡಿ ದಾಟಿ ಅಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳ ಫೋಟೋ ಹಿಡಿದುಕೊಂಡು ನೇಪಾಳದ ಗಂಜ್ ಹಾಗೂ ಅಕ್ಕಪಕ್ಕದ ಗುಡ್ಡಗಾಡು ಪ್ರದೇಶಗಳಲ್ಲಿ ಪೊಲೀಸರು ಮನೆಮನೆಗೂ ತೆರಳಿ ತಪಾಸಣೆ ನಡೆಸಿದ್ದಾರೆ.

ಅತ್ಯಂತ ಕಠಿಣವಾದ ಭೌಗೋಳಿಕ ಪರಿಸ್ಥಿತಿಗಳ ನಡುವೆಯೂ ನಡೆಸಿದ ಈ ಕಾರ್ಯಾಚರಣೆಯ ವಿಡಿಯೋಗಳು ಈಗ ಲಭ್ಯವಾಗಿವೆ. ಆದರೆ, ಕಿಲೆಬಾಜ ಕಳ್ಳರು ಪೊಲೀಸರಿಗೆ ಯಾವುದೇ ಸುಳಿವು ಬಿಟ್ಟುಕೊಡದೆ ನಾಪತ್ತೆಯಾಗಿದ್ದಾರೆ.

ಬೆಂಗಳೂರಿನಿಂದ 18 ಕೋಟಿ ಮೌಲ್ಯದ ಚಿನ್ನವನ್ನು ಈ ಗ್ಯಾಂಗ್ ನೇಪಾಳಕ್ಕೆ ಸಾಗಿಸಿದ ಹಾದಿ ಸಿನಿಮಾ ಕಥೆಯನ್ನೂ ಮೀರಿಸುವಂತಿದೆ.

ತಾಂತ್ರಿಕ ದಾಖಲೆಗಳ ಪ್ರಕಾರ ಆರೋಪಿಗಳ ಪಯಣ ಹೀಗಿತ್ತು:

ಜನವರಿ 25 ಮುಂಜಾನೆ: ದರೋಡೆ ಮುಗಿಸಿ ಯಮಲೂರಿನಿಂದ ಬಿಎಂಟಿಸಿ ಬಸ್ ಏರಿದ ಗ್ಯಾಂಗ್, ಮಾರತ್‌ಹಳ್ಳಿ ಬ್ರಿಡ್ಜ್ – ಟಿನ್ ಫ್ಯಾಕ್ಟರಿ – ರಿಂಗ್ ರೋಡ್ – ಹೆಬ್ಬಾಳ ಮಾರ್ಗವಾಗಿ ಯಶವಂತಪುರ ತಲುಪಿತು.

ಯಶವಂತಪುರ ಟು ಮುಂಬೈ: ಯಶವಂತಪುರದಿಂದ ಖಾಸಗಿ ಬಸ್ ಮೂಲಕ ನೇರವಾಗಿ ಮಹಾರಾಷ್ಟ್ರದ ಮುಂಬೈಗೆ ಪರಾರಿಯಾದರು.

ಮುಂಬೈ ಟು ಲಕ್ನೋ: ಮುಂಬೈನಿಂದ ರೈಲು ಅಥವಾ ಬಸ್ ಮೂಲಕ ಉತ್ತರ ಪ್ರದೇಶದ ಲಕ್ನೋ ತಲುಪಿದರು.

ಬಾರ್ಡರ್ ದಾಟಿದ್ದು ಹೀಗೆ: ಲಕ್ನೋದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ‘ರುಪಾಡಿಯಾ’ ಎಂಬ ಗಡಿ ಪ್ರದೇಶಕ್ಕೆ ತೆರಳಿದ ಗ್ಯಾಂಗ್, ಅಲ್ಲಿನ ಅತೀ ಸೂಕ್ಷ್ಮ ಹಾಗೂ ಕಳ್ಳದಾರಿಗಳ ಮೂಲಕ ನೇಪಾಳಕ್ಕೆ ಪ್ರವೇಶ ಮಾಡಿದೆ.

ಅಂತಿಮ ತಾಣ: ಚಿನ್ನದ ದೊಡ್ಡ ಚೀಲದೊಂದಿಗೆ ನೇಪಾಳದ ‘ಗಂಜ್’ ಎಂಬ ಪ್ರದೇಶಕ್ಕೆ ತಲುಪಿದ ಆರೋಪಿಗಳು ಅಲ್ಲಿಂದ ಎಲ್ಲಿಗೆ ಹೋದರು ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ.

ನೇಪಾಳದಲ್ಲಿ ಸ್ಥಳೀಯ ಪೊಲೀಸರ ಸಹಕಾರ ಪಡೆದರೂ, ಆರೋಪಿಗಳು ವಾಸಿಸುವ ಪ್ರದೇಶಗಳು ಅತ್ಯಂತ ದುರ್ಗಮವಾಗಿದ್ದವು. ಅಲ್ಲದೆ, ನೇಪಾಳಿ ಗ್ಯಾಂಗ್‌ಗಳು ಇಂತಹ ಕೃತ್ಯವೆಸಗಿ ತಮ್ಮ ಮೂಲ ಹಳ್ಳಿಗಳಿಗೆ ಸೇರಿದ ಮೇಲೆ ಅವರನ್ನು ಪತ್ತೆ ಹಚ್ಚುವುದು ಅಸಾಧ್ಯ ಎಂಬಂತಾಗಿದೆ. ಸದ್ಯಕ್ಕೆ 18 ಕೋಟಿ ಮೌಲ್ಯದ ಚಿನ್ನವನ್ನು ರಿಕವರಿ ಮಾಡುವ ಪೊಲೀಸರ ಕನಸು ಭಗ್ನಗೊಂಡಂತಿದ್ದು, ಬರಿಗೈಲಿ ವಾಪಸ್ಸಾದ ತಂಡ ಈಗ ಮುಂದಿನ ಕಾನೂನು ಹಾದಿಯ ಬಗ್ಗೆ ಚರ್ಚಿಸುತ್ತಿದೆ.

ರಾಜಧಾನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುವ ನೇಪಾಳಿ ಮೂಲದ ಕೆಲಸಗಾರರ ಪೂರ್ವಾಪರ ವಿಚಾರಿಸದೆ ಮನೆಯೊಳಗೆ ಬಿಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ 18 ಕೋಟಿ ರೂಪಾಯಿ ದರೋಡೆ ಪ್ರಕರಣ ಒಂದು ದೊಡ್ಡ ಪಾಠವಾಗಿದೆ.

Source link
ಬೆಂಗಳೂರು ಬಿಲ್ಡಲ್ ಮನೆಯಿಂದ ಕದ್ದ ₹18 ಕೋಟಿ ಚಿನ್ನ ಎಲ್ಲಣ್ಣ? ನೇಪಾಳಕ್ಕೋದ್ರೂ ಕಳ್ಳರು ಸಿಗ್ಲಿಲ್ಲ ಎಂದ ಪೊಲೀಸಣ್ಣ!