ಬೆಂಗಳೂರು, (ಫೆಬ್ರವರಿ 03): ಬೆಂಗಳೂರಿನ ಐತಿಹಾಸಿಕ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ (ಬೆಂಗಳೂರು ಧರ್ಮರಾಯ ಸ್ವಾಮಿ ದೇವಸ್ಥಾನ) ಕಾಣಿಕೆ ರೂಪದಲ್ಲಿ ಬಂದಿದ್ದ ಚಿನ್ನದ ನಕ್ಲೇಸ್ ಕಳ್ಳತನ ಆರೋಪಕ್ಕೆ ಇಓ ಅವರನ್ನ ಸಸ್ಪೆಂಡ್ ಮಾಡಲಾಗಿದೆ. ಹುಂಡಿ ಎಣಿಕೆ ಮಾಡುವಾಗ ಸಿಕ್ಕಿದ್ದ ದ್ರೌಪದಿ ದೇವಿಯ 120 ಗ್ರಾಂ ತೂಕದ ಚಿನ್ನದ ಸರವನ್ನು ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ (EO) ನಾಗರಾಜ್ ಅವರು ಕದ್ದು ಜೇಬಿಗೆ ಹಾಕಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಸತೀಶ್ ಗಂಭೀರ ಆರೋಪ ಮಾಡಿದರು. ಇದರ ಬೆನ್ನಲ್ಲೇ ಮುಜರಾಯಿ ಇಲಾಖೆಯು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ. ನಾಗರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆದರೆ, ಇದೀಗ ಈ ಪ್ರಕರಣಕ್ಕೆ ಅಮಾನತುಗೊಂಡ ನಾಗರಾಜು ಅವರು ಬಿಗ್ ಟ್ವಿಸ್ಟ್ ನೀಡಿದ್ದಾರೆ.
ಈ ಬಗ್ಗೆ TV9 ಜೊತೆ ಮಾತನಾಡಿದ ಧರ್ಮರಾಯಸ್ವಾಮಿ ದೇವಸ್ಥಾನದ IO ನಾಗರಾಜ್, ನಾವು ಹುಂಡಿ ಎಣಿಕೆ ಮಾಡಿದಾಗ 68 ಗ್ರಾಂ ತೂಕ ಇತ್ತು. ಸಮೀಪದ ವ್ಯಾಪಾರಿಯಿಂದ ತೂಕ ಮಾಡಿ ಪರೀಕ್ಷೆ ಮಾಡಿಸಲಾಯಿತು. ಇದು ಬಿ ದರ್ಜೆಯ ದೇವಾಲಯ ಲಾಕರ್ ವ್ಯವಸ್ಥೆ, ಭದ್ರತೆ ಇಲ್ಲ. ಯಾವುದೇ ಅಧಿಕೃತವಾಗಿ ಕಚೇರಿಗೆ ಹೋಗಿದ್ದೆ. ಮರುದಿನ ಭಾನುವಾರದಿಂದ ಸೋಮವಾರ ವಾಪಸ್ ಬಂದಿದ್ದೇನೆ. ವಾಪಸ್ ತಂದಾಗಲೂ ಆ ಚಿನ್ನ 68 ಗ್ರಾಂ ತೂಕವಿತ್ತು. ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಿದ್ದೇವೆ. ನಾನು ತಪ್ಪು ಮಾಡಿಲ್ಲ, ನನ್ನ ಬಳಿ ದಾಖಲೆ ಇದೆ. ಮೇಲಧಿಕಾರಿಗಳಿಗೆ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.