ದೇವನಹಳ್ಳಿ, ನವೆಂಬರ್ 17: ಏರ್ಪೋಟ್ ಅಂದ ಮೇಲೆ ಅಲ್ಲಿ ಪ್ರಯಾಣಿಕರು (ಪ್ರಯಾಣಿಕರು) ಜಂಗುಳಿ ಜೊತೆಗೆ ಕೈಯಲ್ಲಿ ಲಗೇಜ್‌ಕೊಂಡು ಹೋಗುವುದು ಸಹಜ. ಆದರೆ ತಲ್ವಾರ್ನಂತಹ ಉದ್ದುದ್ದ ಲಾಂಗ್ ಹಿಡಿದುಕೊಂಡು ಓಡಿದಿದ್ದಾರೆ. ನಂಬುವುದಕ್ಕೆ ಕಷ್ಟವಾದರೂ ಇಂತಹದೊಂದು ಘಟನೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (ಕೆಂಪೇಗೌಡ ವಿಮಾನ ನಿಲ್ದಾಣ) ನಡೆದಿದ್ದು, ಒಂದು ಕ್ಷಣ ಪ್ರಯಾಣಿಕರ ಜೊತೆಗೆ ಸಿಬ್ಬಂದಿ ಸಹ ಬೆಚ್ಚಿ ಬಿದ್ದಿದ್ದಾರೆ.
ಮಧ್ಯರಾತ್ರಿ ಸಮಯ ಕೆಂಪೇಗೌಡ ಏರ್‌ಪೋಟ್‌ನಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ಬಂದ ಪ್ರಯಾಣಿಕರ ಕ್ಯಾಬ್‌ನಲ್ಲಿ ಕರೆದುಕೊಂಡು ಹೋಗಿ ಡ್ರಾಪ್ ಮಾಡುವ ಭರದಲ್ಲಿ ಕೆಲ ಚಾಲಕರಿದ್ದರೆ, ಇನ್ನು ಕೆಲವು ಸ್ವಂತ ವಾಹನಗಳಲ್ಲಿ ಮನೆ ಸೇರಿಕೊಳ್ಳುವ ತವಕದಲ್ಲಿದ್ದರು. ಆದರೆ ಇದೇ ವೇಳೆ ಪ್ರಯಾಣಿಕರನ್ನು ಮನೆಗೆ ಸೇರಿಸುವ ಕೆಲಸ ಮಾಡಲು ಬಂದ ಚಾಲಕನೊಬ್ಬ ಶಸ್ತ್ರಸಜ್ಜಿತ ಭದ್ರತಾ ಪಡೆ ಮುಂದೆಯೇ ಕೈಯಲ್ಲಿ ಲಾಂಗು ಹಿಡಿದು ಅಟ್ಟಹಾಸ ಮೆರೆಯುವ ಮೂಲಕ ಪ್ರಯಾಣಿಸುವಾಗ ಆತಂಕ ಮೂಡಿಸಿದ್ದಾನೆ.
ವಿಮಾನ ನಿಲ್ದಾಣದಲ್ಲಿ ಚಾಲಕರ ನಡುವೆ ಕಿರಿಕ್
ಅಂದಹಾಗೆ ಸಾರ್ವಜನಿಕ ಸ್ಥಳದಲ್ಲೇ ಕೈಯಲ್ಲಿ ಲಾಂಗ್ ಹಿಡಿದು ಸಹ ಚಾಲಕನನ್ನ ಅಟ್ಟಾಡಿಸಿ ಕೊನೆಗೆ ಏರ್ಪೋಟ್ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿರುವವನ ಹೆಸರು ಸುಹೇಲ್. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಥಾಣದಲ್ಲಿ ತಡರಾತ್ರಿ ಪ್ರಯಾಣಿಕರನ್ನ ಸೈಡ್ ಪಿಕ ಅಪ್ ಮಾಡುವುದಕ್ಕೆ ಬಂದಿದ್ದು, ಸುಹೇಲ್ ಮತ್ತು ಜಗದೀಶ್ ಎಂಬ ಚಾಲಕರು ಪ್ರಯಾಣಿಕರನ್ನು ತಮ್ಮ ಕ್ಯಾಬ್‌ನತ್ತ ಸೆಳೆಯಲು ಮುಂದಾಗಿದ್ದಾರೆ. ಜೊತೆಗೆ ಇಬ್ಬರು ಒಬ್ಬರ ಪ್ಯಾಸೆಂಜರ್ನ ಬ್ಯಾಗ್ ಹಿಡಿದುಕೊಂಡು ಕಿತ್ತಾಡಿದ್ದು, ಮಾತಿಗೆ ಮಾತು ಬೆಳೆದು ವಿಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿದ್ದಾರೆ.
ಇದನ್ನೂ ಓದಿ: ದೆಹಲಿ ಸ್ಫೋಟ ಪ್ರಕರಣ: ಪ್ರಯಾಣಿಕರಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ಸೂಚನೆ
ಇನ್ನು ಇಬ್ಬರು ಹೊಡೆದಾಡಿಕೊಳ್ಳುವುದಕ್ಕಾಗಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆ ಸಿಬ್ಬಂದಿ ಇಬ್ಬರ ಜಗಳ ಬಿಡಿಸಿ ಕಳುಹಿಸಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಸುಹೇಲ್ ಮತ್ತೆ ತಡರಾತ್ರಿ ಏರ್‌ಪೋಟ್‌ಗೆ ಬಂದು ಲಾಂಗ್‌ನಂತಹ ಉದ್ದದ ಚಾಕು ಕೈಯಲ್ಲಿ ಹಿಡಿದುಕೊಂಡು ಜಗದೀಶ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಸುಹೇಲ್ ಕೈ ನಲ್ಲಿ ಚಾಕು ಕಂಡ ಜಗದೀಶ್ ತಪ್ಪಿಸಿಕೊಳ್ಳಲು ಪಾರ್ಕಿಂಗ್ ಏರಿಯಾ ಕಡೆ ಓಡಿದ್ದು, ಟರ್ಮಿನಲ್ ನಲ್ಲಿ ಜನರ ನಡುವೆಯೇ ಅಟ್ಟಾಡಿಸಿ ಹಲ್ಲೆ ಮಾಡಲು ಮುಂದಾಗಿರುವ ಪ್ರಯಾಣಿಕರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.
ಹಲ್ಲೆಗೆ ಯತ್ನ: ಕಿರುಚಾಡಿದ ಪ್ರಯಾಣಿಕರು
ರಾತ್ರಿ ವಿಮಾನಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಸಹ ಹೆಚ್ಚಾಗಿದ್ದಾರೆ, ಲಾಂಗ್ ಹಿಡಿದು ಹಲ್ಲೆ ಮಾಡಲು ಮುಂದಾಗಿದ್ದನ್ನ ಕಂಡ ಪ್ರಯಾಣಿಕರು ಕಿರುಚಾಡಿದ್ದಾರೆ. ಪ್ರಯಾಣಿಕರ ಕಿರುಚಾಟ ಕೇಳ್ತಿದ್ದಂತೆ ಎಚ್ಚೆತ್ತ ಏರ್ಪೋಟ್ ಭದ್ರತಾ ಪಡೆ ಸಿಬ್ಬಂದಿ, ಲಾಂಗ್ ಹಿಡಿದು ಅಟ್ಟಾಡಿಸುತ್ತಿದ್ದ ಸುಹೇಲ್ ನನ್ನ ವಶಕ್ಕೆ ಪಡೆದು ಲಾಂಗ್ ಕಿತ್ತುಕೊಂಡಿದ್ದಾರೆ.
ಇತ್ತೀಚೆಗೆ ಏರ್‌ಪೋಟ್‌ನಲ್ಲಿ ಸೈಡ್ ಪಿಕ್ ಅಪ್ ಚಾಲಕರು ಹಾವಳಿ ಹೆಚ್ಚಾಗಿದ್ದು, ಹಲವು ಭಾರಿ ಗಲಾಟೆಗಳನ್ನು ಮಾಡಿಕೊಂಡಿದ್ದು, ಅವರನ್ನ ಭದ್ರತಾ ಪಡೆ ಸಿಬ್ಬಂದಿ ಸ್ಥಳದ ಪೊಲೀಸರ ವಶಕ್ಕೆ ನೀಡಿದ್ದರು. ಆದರೆ ಸ್ಥಳಿಯ ಏರ್ಪೋಟ್ ಪೊಲೀಸರ ನಿರ್ಲಕ್ಷ್ಯದಿಂದ ಮತ್ತೆ ಸೈಡ್ ಪಿಕ್ ಅಪ್ ಚಾಲಕರು ಏರ್ಪೋಟ್ಗೆ ಲಾಂಗ್ ತಂದು ಅಟ್ಟಹಾಸ ಮೆರೆಯುತ್ತಿದ್ದಾರೆ. ಚಾಲಕರ ಈ ವರ್ತನೆ ಕಂಡು ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‌ನೊಳಗೆ ನುಗ್ಗಲು ಯತ್ನಿಸಿದ ವ್ಯಕ್ತಿ: ಪೊಲೀಸರಿಂದ ತೀವ್ರ ವಿಚಾರಣೆ
ಒಟ್ಟಾರೆ ಅತ್ಯಾಧುನಿಕ ಸೌಲಭ್ಯ ತಂತ್ರಜ್ಞಾನದಿಂದ ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇತ್ತೀಚೆಗೆ ಗಲಾಟೆ, ಗದ್ದಲ, ಕೊಲೆಯಂತಹ ಪ್ರಕರಣಗಳಿಂದಾಗಿ ಸುದ್ದಿಯಾಗುತ್ತಿರುವುದು ನಿಜಕ್ಕೂ ದುರಂತ. ಇನ್ನಾದರೂ ಏರ್ಪೋಟ್ ಪೊಲೀಸ್ ಮತ್ತು ಭದ್ರತಾ ಪಡೆ ಎಚ್ಚೆತ್ತು ಇಂತಹ ಘಟನೆಗಳು ಮತ್ತೊಮ್ಮೆ ನಡೆಯದಂತೆ ಎಚ್ಚರವಹಿಸುವ ಕೆಲಸ ಮಾಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.