ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಎಚ್ಚರಿಕೆ
ಬೆಂಗಳೂರು, ಡಿಸೆಂಬರ್ 15: ಪೊಲೀಸರಿಂದಲೇ ಸಂಚಾರ ನಿಯಮಪ್ರಕರಣಗಳ ಉಲ್ಲಂಘನೆ ಪ್ರಕರಣಗಳ ಹಿನ್ನಲೆ ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಅವರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಅವರು ಸಂಚಾರ ನಿಯಮಗಳ ಪಾಲನೆಗೆ ನ್ಯಾಯಾಲಯ ಪ್ರಾಮುಖ್ಯತೆ ನೀಡಿದ್ದಾರೆ. ಪೊಲೀಸರೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ನೈತಿಕತೆ ಇರುವುದಿಲ್ಲ ಸಾರ್ವಜನಿಕರಿಂದ ಟೀಕೆಗಳಿಗೆ ಒಳಗಾಗುತ್ತದೆ. ಹೀಗಾಗಿ ಸಂಚಾರ ಪೊಲೀಸರಿಂದ ನಿಯಮ ಉಲ್ಲಂಘನೆ ಕಂಡು ಬಂದಿದ್ದು, ಐಎಂವಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗಿದೆ.
ಸುತ್ತೋಲೆಯಲ್ಲಿ ಏನಿದೆ?
ಇತ್ತೀಚಿನ ದಿನಗಳಲ್ಲಿ, ಕಾನೂನನ್ನು ಜಾರಿಗೆ ತರುವ ಆರಕ್ಷಕರೇ ಸಂಚಾರ ನಿಯಮಗಳು ಪಾಲಿಸದೇ ವಾಹನ ಚಾಲನೆ ಮಾಡುತ್ತಿರುವ ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ ಪ್ರಮುಖವಾಗಿ ಸೀಟ್‌ಬೆಲ್ಟ್ ಧರಿಸದೇ ಇರುವುದು ಹಾಗೂ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗಿದೆ. ಸಂಚಾರ ನಿಯಮಗಳನ್ನು ಪಾಲಿಸುವುದು ಕೇವಲ ನಾಗರಿಕರಿಗೆ ಅನ್ವಯಿಸುವುದಿಲ್ಲ. ಕಾನೂನಿನ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಕೂಡ ಸಂಚಾರ ನಿಯಮಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ.
ಇದನ್ನೂ ಓದಿ: ನಿಮಗೆ ತಿಳಿದಿರಬೇಕಾದ ಐದು ಸಂಚಾರ ನಿಯಮಗಳು ಇಲ್ಲಿವೆ
ಕಾನೂನು ಜಾರಿಗೊಳಿಸುವ ಪೊಲೀಸರೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ, ಸಂಚಾರ ನಿಯಮ ಪಾಲಿಸಿ ಎಂದು ಸಾರ್ವಜನಿಕರಿಗೆ ಹೇಳುವ ಯಾವುದೇ ಹಕ್ಕು ಇಲ್ಲದಂತಾಗುತ್ತದೆ. ಜೊತೆಗೆ, ಸಾರ್ವಜನಿಕರಿಂದ ಟೀಕೆಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ.ಸಂಚಾರ ಪೊಲೀಸರಾದ ನಾವುಗಳು ಸಂಚಾರ ನಿಯಮ ಪಾಲನೆಯಲ್ಲಿ ಶಿಸ್ತನ್ನು ಪಾಲಿಸಿದರೆ ಮಾತ್ರ ನಮ್ಮ ಅನುಸರಿಸುವ ಸಾರ್ವಜನಿಕರಿಗೆ ಸಂಚಾರ ನಿಯಮಾವಳಿಗಳನ್ನು ಪಾಲಿಸುವ ಬಗ್ಗೆ ಶಿಸ್ತು ಮೂಡುವುದಲ್ಲದೇ, ಅವರಿಂದ ಸಂಚಾರ ನಿಯಮಗಳಿಗೆ ಗೌರವವನ್ನು ನಿರೀಕ್ಷಿಸಬಹುದು.
ಬೆಂಗಳೂರು ನಗರ ಸಂಚಾರಕ್ಕೆ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ವಾಹನವನ್ನು ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್/ಸೀಟ್ ಬೆಲ್ಟ್ ಧರಿಸುವುದರ ಜೊತೆಗೆ ಎಲ್ಲಾ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಚಾರಿ ಪೊಲೀಸರ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಇಂತಹ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಐಎಂವಿ ಕಾಯ್ದೆ ರೀತ್ಯಾ ಕ್ರಮಕೈಗೊಳ್ಳಲಾಗುವುದೆಂಬ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.