ಇಂದು ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ (ಸಾಂದರ್ಭಿಕ ಚಿತ್ರ)
ಪಟ್ನಾ, ನವೆಂಬರ್ 14: 38 ಜಿಲ್ಲೆಗಳು, 243 ಕ್ಷೇತ್ರಗಳು, 2,600ಕ್ಕೂ ಹೆಚ್ಚು ಅಭ್ಯರ್ಥಿಗಳು. ಬಿಹಾರ ವಿಧಾನಸಭೆ ಚುನಾವಣೆ (ಬಿಹಾರ ವಿಧಾನಸಭೆ ಚುನಾವಣೆ) ಮತ ಎಣಿಕೆ ಇಂದು ನಡೆಯುತ್ತಿದ್ದು, ದೇಶದ ದಿಕ್ಸೂಚಿ ಎಂದೆಂದೂ ಬಿಹಾರ ಗೆಲುವಿನ ಹಾರ ಯಾರಿಗೆ ಎಂಬ ಕುತೂಹಲ ರಾಷ್ಟ್ರ ರಾಜಕಾರಣದಲ್ಲಿ ಸೃಷ್ಟಿಯಾಗಿದೆ. ಮತ್ತೆ ನಿತೀಶ್ ಆಡಳಿತ ಮುಂದುವರೆಯುತ್ತಾ? ಇಲ್ಲ ಮತದಾರ ಈ ಬಾರಿ ಬದಲಾವಣೆಯನ್ನು ಬಯಲು ಮಾಡಿದೆನಾ ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ.
ಬಿಹಾರದ 243 ಕ್ಷೇತ್ರಗಳಲ್ಲಿ ಎರಡು ಹಂತದಲ್ಲಿ ಮತದಾನ ನಡೆದಿದೆ. ಈ ಬಾರಿಯಂತೂ ಬಿಹಾರದ ಜನ ದಾಖಲೆಯ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಇದರಲ್ಲಿ ಮಹಿಳಾ ಮತದಾರರದ್ದು ಮೇಲುಗೈ. ಹೀಗಾಗಿ ಫಲಿತಾಂಶ ಕುತೂಹಲ ಕೆರಳುವಂತೆ ಮಾಡಿದೆ. ಎಂಡಿಎ ಗೆದ್ದು ನಿತೀಶ್ ಮತ್ತೆ ಅಧಿಕಾರದ ಗದ್ದುಗೆ ಏರುವ ತವಕದಲ್ಲಿದ್ದರೆ, ಮಹಾಘಟಬಂಧನದ ಯುವ ನಾಯಕ ತೇಜಸ್ವಿ ಯಾದವ್, ಗೆಲುವಿನ ಭಾಗ್ಯಕ್ಕೆ ಎದುರು ನೋಡುತ್ತಿದ್ದಾರೆ.
ಎನ್ಡಿಎಗೆ ಗೆಲುವು ಎಂದಿರುವ ಎಕ್ಸಿಟ್ಪೋಲ್ಗಳು
ಮತದಾನೋತ್ತರ ಸಮೀಕ್ಷೆಗಳು ಎನ್ಡಿಎ ಸರ್ಕಾರ ರಚನೆ ಆಗುವ ಬಗ್ಗೆ ಭವಿಷ್ಯ ನುಡಿದಿವೆ. ಹೀಗಾಗಿಯೇ ಜೆಡಿಯು ಸೇರಿ ಬಿಜೆಪಿ ಮಿತ್ರಪಕ್ಷಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಜೆಡಿಯು, ಆರ್ಜೆಡಿ ಮಧ್ಯೆ ಪೋಸ್ಟರ್ ಸಮರ
ಏತನ್ಮಧ್ಯೆ, ಪಾಟ್ನಾದ ಜೆಡಿಯು ಕಚೇರಿಯ ಹೊರಗೆ ‘ಟೈಗರ್ ಅಭಿ ಜಿಂದಾ ಹೇ’, ಅಂದರೆ ಹುಲಿ ಇನ್ನೂ ಜೀವಂತವಾಗಿರುವ ಪೋಸ್ಟರ್ಗಳು ರಾರಾಜಿಸುತ್ತಿವೆ. ಭರ್ಜರಿ ಗೆಲುವಿನ ವಿಶ್ವಾಸದಲ್ಲಿರುವ ಜೆಡಿಎಸ್ ಕಾರ್ಯಕರ್ತರು, ಸಂಭ್ರಮಾಚರಣೆಯ ಸಿದ್ಧತೆಯಲ್ಲಿದ್ದಾರೆ. ಇದಕ್ಕೆ ಆರ್ಜೆಡಿಯ ಬೆಂಬಲಿತ ಸಮಾಜವಾದಿ ಪಕ್ಷ ಕೌಂಟರ್ ಕೊಟ್ಟಿದೆ. ‘ಅಲ್ವಿದಾ ಚಾಚಾ’ ಅಂದರೆ ಬಾಯ್ ಬಾಯ್ ಚಿಕ್ಕಪ್ಪ ಎನ್ನುವ ಮೂಲಕ ನಿತೀಶ್ ಕುಮಾರ್ ಕಾಲೆಳೆದಿದ್ದಾರೆ.
ಇನ್ನು ಜೆಡಿಯುನ ಬಾಹುಬಲಿ ಎಂದು ಕರೆಸಿಕೊಳ್ಳುವವರು ಅನಂತ್ ಕುಮಾರ್ ಸಿಂಗ್. ಇಚರು 20ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಆದರೂ ಜೈಲಿನಿಂದ್ಲೇ ಪಟ್ನಾದ ಮೊಕಾಮಾ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದಾರೆ. ಇವರ ಬೆಂಬಲಿಗರಂತೂ ಸಂಭ್ರಮಾಚರಣೆಗೆ ತಯಾರಿ.
ಇದನ್ನೂ ಓದಿ: ಬಿಹಾರದಲ್ಲೂ ನೇಪಾಳದಂತಹ ಹಿಂಸಾಚಾರ ನಡೆಯುತ್ತಿದೆ; ಆರ್ಜೆಡಿ ಎಂಎಲ್ಸಿ ಸುನಿಲ್ ಸಿಂಗ್ ವಿವಾದ
ಮತ್ತೊಂದೆಡೆ, ಮತದಾನೋತ್ತರ ಸಮೀಕ್ಷೆ ಸುಳ್ಳಾಗುತ್ತದೆ, ನಾವೇ ಗೆಲ್ಲುತ್ತೇವೆ ಎಂದು ಮಹಾಘಟಬಂಧನ ನಾಯಕರು ಹೇಳುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಗೆ ನವೆಂಬರ್ 6 ಮತ್ತು ನವೆಂಬರ್ 11, ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ