ತುಮಕೂರು ಮಹಾತ್ಮಾ ಗಾಂಧಿ ಇಂಡೋರ್ ಸ್ಟೇಡಿಯಂಗೆ ಪರಮೇಶ್ವರ್ ಹೆಸರು!
ತುಮಕೂರು, ಜನವರಿ 13: ತುಮಕೂರಿನ (ತುಮಕೂರು) ಜಿಲ್ಲಾಮಟ್ಟದ ಏಕೈಕ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ (ಜಿ ಪರಮೇಶ್ವರ) ಹೆಸರು ಇಟ್ಟಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅವರ ಹೆಸರು ಇಟ್ಟಿದ್ದಷ್ಟೇ ಆದರೆ ವಿವಾದವಾಗಬಹುದೇನೋ. ಮಹಾತ್ಮಾ ಗಾಂಧೀಜಿ (ಮಹಾತ್ಮ ಗಾಂಧಿ) ಬದಲಿಗೆ ಪರಮೇಶ್ವರ್ ಹೆಸರು ಇಟ್ಟಿರುವುದು ಪ್ರತಿಪಕ್ಷ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಡಿ 60 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಹೊರಾಂಗಣ ಕ್ರೀಡಾಂಗಣದ ಮುಂಬಾಗದಲ್ಲೇ ಒಳಾಂಗಣ ಸ್ಟೇಡಿಯಂ ಇದೆ. ಇದಕ್ಕೆ ಪ್ರತ್ಯೇಕ ನಾಮಫಲಕ ಇಲ್ಲದ್ದಿದ್ರೂ ಮಹಾತ್ಮಾ ಗಾಂಧಿ ಇಂಡೋರ್ ಸ್ಟೇಡಿಯಂ ಅಂತಲೇ ಕರೆಯಬಹುದು. ಆದರೆ, 3 ದಿನದ ಹಿಂದೆ ದಿಢೀರ್ ಆಗಿ ಗೃಹಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಹೆಸರನ್ನು ನಾಮಕರಣ ಮಾಡಲಾಗಿದೆ. ಡಾ. ಜಿ. ಪರಮೇಶ್ವರ್ ಒಳಾಂಗಣ ಕ್ರೀಡಾ ಸಂಕೀರ್ಣ ಎಂಬ ನಾಮಫಲಕವನ್ನು ಅಳವಡಿಸಲಾಗಿದೆ. ಇದು ಬಿಜೆಪಿಗರ ಆಕ್ರೋಶ ಭುಗಿಲೇಳುವಂತೆ ಮಾಡಿದೆ.
ಇದರ ವಿರುದ್ಧ ಸೋಮವಾರ ಸಂಜೆ ಬಿಜೆಪಿಯ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮೂಲಕ ಕ್ರೀಡಾಂಗಣದ ಬಳಿ ಲಗ್ಗೆ ಹಾಕಿದರು. ದ್ವಾರದ ಬಳಿಯೇ ಕುಳಿತು ಪ್ರತಿಭಟನೆ ನಡೆಸಿದರು. ಇನ್ನು ಪರಮೇಶ್ವರ್ ಹೆಸರಿನ ನಾಮಫಲಕ ತೆರೆವಿಗೆ ಮುಂಚಿತವಾಗಿಯೇ ಜಟಾಪಟಿಯೇ. ಪೊಲೀಸರು ಬ್ಯಾರಿಕೇಡ್ ತಳ್ಳಿ ಒಳನುಗ್ಗಲು ಯತ್ನಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಬಿಜೆಪಿ ಮುಖ್ಯಸ್ಥರು ಸೇರಿ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.
ಬಿಜೆಪಿ ಶಾಸಕ ಸುರೇಶ್ ಗೌಡ ಮಾತನಾಡಿ, ಇದು ಪರಮೇಶ್ವರ್ ಅವರ ಹಿಂಬಾಲಕರು ಮೆಚ್ಚುವಂತೆ ಮಾಡಿರುವುದು. ಪರಮೇಶ್ವರ್ ಅವರೇ ಈ ತಪ್ಪು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಸ್ಥಳೀಯ ಸಂಸ್ಥೆ ಅಥವಾ ಸಂಬಂಧ ಪಟ್ಟ ಇಲಾಖೆಯಿಂದ ಠರಾವು ಪಡೆಯದೇ ಈ ರೀತಿ ಹೆಸರಿಸಿದ್ದು ಸರಿಯಲ್ಲ.
ಇದನ್ನೂ ಓದಿ: ಮನರೇಗಾ ಯೋಜನೆ ಹೆಸರು ಬದಲಾವಣೆ: ಕೇಂದ್ರದ ಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ
ಇದೇ ತಿಂಗಳ 16 ರಿಂದ ಇದೇ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಒಲಂಪಿಕ್ ಕ್ರೀಡಾಕೂಟ ನಡೆಯುತ್ತಿದೆ. ಇದೇ ಸಂದರ್ಭ ಸರ್ಕಾರದ ಆದೇಶ ಇಲ್ಲದಿದ್ದರೂ ಅಧಿಕಾರಿಗಳು ತರಾತುರಿಯಲ್ಲಿ ಮಹಾತ್ಮಾ ಗಾಂಧೀಜಿ ಹೆಸರನ್ನು ಬದಲಿಸಿ ಡಾ.ಜಿ.ಪರಮೇಶ್ವರ್ ಹೆಸರಿನ ನಾಮಫಲಕ ಹಾಕಿ ವಿವಾದ ಸೃಷ್ಟಿಸಿದ್ದಾರೆ. ಪರಮೇಶ್ವರ್ ಅವರೇ ಮಧ್ಯಪ್ರವೇಶಿಸಿ ಈ ವಿವಾದಕ್ಕೆ ತೆರೆ ಎಳೆಯಬೇಕಿದೆ.
ಪರಮೇಶ್ವರ್ ಹೇಳಿದ್ದೇನು?
ತುಮಕೂರಿನಲ್ಲಿ ಗಾಂಧೀಜಿ ಮೈದಾನದ ಹೆಸರು ಬದಲಾವಣೆ ಸಂಬಂಧ ಪರಮೇಶ್ವರ್ ಆರೋಪ ಮಾಡಿದ್ದು, ಗಾಂಧಿ ಹೆಸರು ಬದಲಾವಣೆ ಆಗುತ್ತಾ? ಮಹಾತ್ಮ ಗಾಂಧೀಜಿ ಸ್ಟೇಡಿಯಂಗೆ ಇರುವ ಹೆಸರು ತೆಗೆಯುತ್ತಾರೆ ಎಂದರೆ ಅದು ಹುಚ್ಚರು ಹೇಳುವ ಮಾತು. ಅಲ್ಲಿ ಶೆಡ್ ಇದೆ, ಅದರ ಒಳಾಂಗಣ ಶೈಲಿ ಇದೆ. ಅದಕ್ಕೆ ಡಾ.ಪರಮೇಶ್ವರ್ ಅವರ ಹೆಸರು ಇಡುವಂತೆ ಪತ್ರ ಬರೆದಿದ್ದರು. ಆ ವಿಚಾರಕ್ಕೆ ಅವರು ರಾಜಕೀಯ ಮಾಡೋಕೆ ಹೊರಟರೆ ಹೇಗೆ? ಕ್ರೀಡಾಂಗಣಕ್ಕೆ ಮಹಾತ್ಮ ಗಾಂಧೀಜಿ ಹೆಸರು ತೆಗೆಯಲು ಆಗುತ್ತಾ ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 11:34 am, ಮಂಗಳವಾರ, 13 ಜನವರಿ 26