ಚಾಲಕನ ಸಣ್ಣ ನಿರ್ಲಕ್ಷ್ಯದಿಂದಾಗಿ ಬೆಂಗಳೂರಿನ ಪೀಣ್ಯ ಎರಡನೇ ಹಂತದ ಡಿಪೋದಲ್ಲಿ ನಿಯಂತ್ರಣ ಕೊಠಡಿಗೆ ನುಗ್ಗಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಘಟನೆ ಹೇಗೆ ನಡೆಯಿತು, ಘಟನೆಯ ಫೋಟೋ ಇಲ್ಲಿವೆ ನೋಡಿ

ಬೆಂಗಳೂರಿನಲ್ಲಿಂದು ಬೆಳ್ಳಂಬೆಳಗ್ಗೆಯೇ ಭೀಕರ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೀಣ್ಯ 2ನೇ ಹಂತದ ಬಿಎಂಟಿಸಿ ಡಿಪೋದಲ್ಲಿ ಎಂದಿನಂತೆ ಬಸ್ಗಳ ಓಡಾಟದ ಸಿದ್ಧತೆ ನಡೆಯುತ್ತಿತ್ತು. ಗಂಟೆ ಸರಿಯಾಗಿ ಮುಂಜಾನೆ 6:40. ಆದರೆ, ಅದೇ ಕ್ಷಣದಲ್ಲಿ ಅಲ್ಲಿ ಸಂಭವಿಸಿದ ಅನಾಹುತ ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸಿತು.

ನಿಂತಿದ್ದ ಬಸ್ಸೊಂದು ಇದ್ದಕ್ಕಿದ್ದಂತೆ ತನ್ನಿಂದ ತಾನೇ ಚಲಿಸಲು ಶುರು ಮಾಡಿ ವೇಗವಾಗಿ ಗೋಡೆಗೆ ಡಿಕ್ಕಿ ಹೊಡೆದಿದೆ. ದಢೀರ್ ನಡೆದ ಈ ಘಟನೆಯಿಂದ ಚಾಲಕರು ಒಂದು ಕ್ಷಣ ಏನಾಯ್ತು ಎಂದು ತಿಳಿಯದೇ ಬೆಚ್ಚಿಬಿದ್ದರು.

ಅಲ್ಲಿ ನಿಂತಿದ್ದ ಎಲೆಕ್ಟ್ರಿಕ್ ಬಸ್ (KA51-AK4169) ಇದ್ದಕ್ಕಿದ್ದಂತೆ ಚಲಿಸಲಾರಂಭಿಸಿ ಹಠಾತ್ತನೆ ವೇಗ ಪಡೆಯಿತು. ಚಾಲಕನ ಸೀಟಿನಲ್ಲಿ ಯಾರೂ ಇಲ್ಲದಿದ್ದರೂ ಬಸ್ ಮಾತ್ರ ನೇರವಾಗಿ ಬಿಎಂಟಿಸಿ ಕಟ್ಟಡದತ್ತ ನುಗ್ಗಿದೆ. ಅಲ್ಲಿ ಪಾರ್ಕ್ ಮಾಡಲಾಗಿದ್ದ ನಾಲ್ಕು ದ್ವಿಚಕ್ರ ವಾಹನಗಳಿಗೆ ಗುದ್ದಿ ಪುಡಿಪುಡಿ ಮಾಡಿತು. ಬಸ್ ನಿಯಂತ್ರಣ ತಪ್ಪಿ ನುಗ್ಗುತ್ತಿದ್ದ ವೇಗ ಕಂಡು ಅಲ್ಲಿದ್ದವರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಬೇಕಾಯಿತು.

ಬಸ್ ಕೇವಲ ಬೈಕ್ಗೆ ಗುದ್ದಿ ನಿಲ್ಲಲಿಲ್ಲ. ಅದು ನೇರವಾಗಿ ನುಗ್ಗಿದ್ದು ಸಂಚಾರ ನಿಯಂತ್ರಕರ (Traffic Controller) ಕೊಠಡಿಗೆ. ಕಟ್ಟಡದ ಗೋಡೆಗೆ ಬಸ್ ಜೋರಾಗಿ ಅಪ್ಪಳಿಸಿದ ಸದ್ದಿಗೆ ಇಡೀ ಕಟ್ಟಡ ನಡುಗಿಹೋಯಿತು. ಬಸ್ ಗುದ್ದಿದ ಒಂದು ಬದಿಯ ಕಟ್ಟಡ, ಕಿಟಕಿ ಗೋಡೆ ಬಿರುಕು ಬಿಟ್ಟಿದೆ. ಒಂದು ವೇಳೆ ಕೊಠಡಿಯೊಳಗೆ ಜನಜಂಗುಳಿ ಇದ್ದಿದ್ದರೆ ಅಥವಾ ಬಸ್ ಮುಂಭಾಗದಲ್ಲಿ ಯಾರಾದರೂ ಇದ್ದಿದ್ದರೆ ಇಂದು ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹಾಗಾದರೆ ಈ ಅನಾಹುತಕ್ಕೆ ಕಾರಣವೇನು? ಎಂದು ವಿಚಾರಿಸಿದಾಗ ಹೊರಬಿದ್ದ ಸತ್ಯ ಬೆಚ್ಚಿಬೀಳಿಸುವಂತಿದೆ. ಚಾಲಕ ಬಸ್ಸನ್ನು ನಿಲ್ಲಿಸಿ ಹೋಗುವಾಗ ಹ್ಯಾಂಡ್ ಬ್ರೇಕ್ ಹಾಕುವುದನ್ನೇ ಮರೆತಿದ್ದ! ಎಲೆಕ್ಟ್ರಿಕ್ ಬಸ್ನ ಈ ತಾಂತ್ರಿಕ ಸೂಕ್ಷ್ಮತೆಯನ್ನು ಅರಿಯದ ಚಾಲಕನ ನಿರ್ಲಕ್ಷ್ಯ ಇಂದು ಬಿಎಂಟಿಸಿಗೆ ಸಾವಿರಾರು ರೂಪಾಯಿ ನಷ್ಟ ಉಂಟುಮಾಡಿದೆ. ಸಣ್ಣದೊಂದು ಹ್ಯಾಂಡ್ ಬ್ರೇಕ್ ಹಾಕಿದ್ದರೆ ಇಷ್ಟೊಂದು ಅಪಘಾತ ಸಂಭವಿಸುತ್ತಿರಲಿಲ್ಲ ಎಂಬ ಮಾತುಗಳು ಈಗ ಡಿಪೋ ಆವರಣದಲ್ಲಿ ಕೇಳಿಬರುತ್ತಿವೆ.

Source link
Photos: ಚಾಲಕನ ನಿರ್ಲಕ್ಷ್ಯ, ತನ್ನಿಂತಾನೆ ಚಲಿಸಿ ಡಿಪೋದ ಕಟ್ಟಡಕ್ಕೆ ನುಗ್ಗಿದ BMTC ಬಸ್!