‘ಹೇಗಾದರೂ ಸರಿ ಹಣ ಮಾಡಬೇಕು’- ಈ ವಿಷಯ ಇಟ್ಟುಕೊಂಡು ಕನ್ನಡದಲ್ಲಿ ‘ಗುಲ್ಟು’, ‘ಮಾಯಾ ಬಜಾರ್ 2016’ ಸೇರಿದಂತೆ ಕೆಲವು ಸಿನಿಮಾಗಳು ಬಂದಿವೆ. ಈಗ ನಿರ್ದೇಶಕ ಶಶಾಂಕ್ ಅವರು ಇದೇ ರೀತಿಯ ಕಥಾ ಹಂದರ ಇಟ್ಟುಕೊಂಡು ‘ಬ್ರ್ಯಾಟ್’ ಸಿನಿಮಾ ಮಾಡಿದ್ದಾರೆ. ‘ಕೌಸಲ್ಯ ಸುಪ್ರಜಾ ರಾಮ’ ಬಳಿಕ ಡಾರ್ಲಿಂಗ್ ಕೃಷ್ಣ ಜೊತೆ ಮಾಡಿರೋ ಎರಡನೇ ಸಿನಿಮಾ. ಈ ಚಿತ್ರದ ವಿಮರ್ಶೆ ಇಲ್ಲಿದೆ.
ಸಿನಿಮಾದ ಒಂದೆಳೆ
ಕಾನ್ ಸ್ಟೇಬಲ್ ಮಹದೇವಯ್ಯ (ಅಚ್ಯುತ್ ಕುಮಾರ್) ನ್ಯಾಯವೇ ತಂದೆ ತಾಯಿ ಎಂದು ಬದುಕುತ್ತಿರುವ ವ್ಯಕ್ತಿ. ಆದರೆ, ಹುಟ್ಟುವ ಮಕ್ಕಳು ಹಾಗೆ ಇರಬೇಕು ಎಂದೆಂದೂ ಇಲ್ಲವಲ್ಲ. ಈತನ ಮಗ ಕ್ರಿಸ್ಟಿ (ಕೃಷ್ಣ) ಪಕ್ಕಾ ಬ್ರ್ಯಾಟ್. ಅಂದರೆ ಹಾಳಾಗಿ ಹೋಗಿದ್ದಾನೆ. ಸಣ್ಣಲ್ಲೇ ಜೂಜಾಡಿ ಹಣ ಮಾಡುವ ವಯಸ್ಸಿಗೆ ಬೀಳುತ್ತಾನೆ. ‘ನಾವು ದುಡಿಯೋ ಹಣದಲ್ಲಿ ನಮ್ಮ ಬೆವರಿನ ವಾಸನೆ ಇರಬೇಕು’ ಎಂದು ತಂದೆ ಹೇಳಿದ ಮಾತಿಗೆ ಕ್ರಿಸ್ಟಿ ತಾತ್ಕಾಲಿಕವಾಗಿ ಬದಲಾಗುತ್ತಾನೆ ಎನ್ನುವುದನ್ನು, ಕೆಟ್ಟ ಬುದ್ಧಿಯನ್ನು ಅದಮಿಟ್ಟುಕೊಳ್ಳುತ್ತಾನೆ ಎಂಬುದು ಹೆಚ್ಚು ಸೂಕ್ತ. ವಿದ್ಯೆ ಕೈ ಹತ್ತದ್ದಕ್ಕೆ ಬೇರೆ ದಾರಿ ಕಾಣದೆ ಫುಡ್ ಡೆಲಿವರಿ ಕೆಲಸ ಶುರು ಮಾಡುತ್ತಾನೆ. ಒಂದು ದಿನ ಬೆಂಜ್ ಕಾರಲ್ಲಿ ಹೋಗೋ ನಾಯಿ ಈತನ ಬದುಕಿದೆ ದೊಡ್ಡ ತಿರುವು. ಆ ಬಳಿಕ ಏನಾಗುತ್ತದೆ, ಅದೆಷ್ಟು ತಿರುವುಗಳು ಬರುತ್ತವೆ ಎಂದು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.
ಮೆಚ್ಚುಗೆ ಪಡೆಯೋ ಡಾರ್ಲಿಂಗ್ ಕೃಷ್ಣ
ಡಾರ್ಲಿಂಗ್ ಕೃಷ್ಣ ಅವರು ಇಡೀ ಚಿತ್ರದಲ್ಲಿ ಕ್ರಿಸ್ಟಿ ಆಗಿ ಗಮನ ಸೆಳೆಯುತ್ತಾರೆ. ಹಣದ ಆಸೆಗೆ ಬಿದ್ದ ವ್ಯಕ್ತಿ ಯಾವೆಲ್ಲ ಹಂತಕ್ಕೆ ಹೋಗಬಹುದು ಎಂದು ಕಣ್ಣಿಗೆ ಕಟ್ಟುವಂತೆ ನಟಿಸಿದ್ದಾರೆ. ಅವರು ಈ ಬಾರಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರು ಗಮನ ಸೆಳೆದಿದ್ದಾರೆ. ಆ್ಯಕ್ಷನ್ ಮತ್ತು ಲವ್ಗಿಂತ ಅವರು ಹೆಚ್ಚಾಗಿ ಬುದ್ಧಿವಂತಿಕೆಯಿಂದ ಹೆಚ್ಚು ಇಷ್ಟವಾಗುತ್ತಾರೆ. ನಟನೆಯಲ್ಲಿ ಅವರು ಹೆಚ್ಚು ಅಂಕ ಪಡೆಯುತ್ತಾರೆ.
ಅಚ್ಯುತ್ ಕುಮಾರ್ ಮಗ ಹಾಳಾಗುವುದನ್ನು ನೋಡಿ ಒದ್ದಾಡುವ ಹಾಗೂ ಮಗನಿಗಿಂತ ಸಮಾಜದ ಸ್ವಾಸ್ಥ್ಯ, ನ್ಯಾಯ ಮುಖ್ಯ ಎಂದು ಪ್ರತಿಪಾದಿಸುವ ಪೊಲೀಸ್ ಕಾನ್ ಸ್ಟೇಬಲ್ ಆಗಿ ಇಷ್ಟವಾಗುತ್ತಾರೆ. ಅವರು ಮಹದೇವಯ್ಯ ಪಾತ್ರದಲ್ಲಿ ನಿಜವಾಗಲೂ ಜೀವಿಸಿದ್ದಾರೆ. ಹೊಸ ಪ್ರತಿಭೆ ನಾಯಕಿ ಮನಿಶಾ ಅವರು ಭರವಸೆ ಮೂಡಿಸುತ್ತಾರೆ. ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು, ಮಾನಸಿ ಸುಧೀರ್ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಬೆಟ್ಟಿಂಗ್ ಬಗ್ಗೆ ವಿವರವಾಗಿ ಹೇಳಿದ ಶಶಾಂಕ್
ನಿರ್ದೇಶಕ ಶಶಾಂಕ್ ಅವರು ಕ್ರಿಕೆಟ್ ಬೆಟ್ಟಿಂಗ್ ನ ಆಳ-ಅಗಲವನ್ನು ಅರಿತು ಕಥೆ ಬರೆದಿರೋದು ಸ್ಪಷ್ಟವಾಗಿದೆ. ಅದಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಬೆಟ್ಟಿಂಗ್ ನಿಂದ ಆರಂಭ ಆಗುವ ಕಥೆ ಕೊನೆಗೆ ಫಿಕ್ಸಿಂಗ್ ವರೆಗೆ ಸಾಗುತ್ತದೆ. ಬೆಟ್ಟಿಂಗ್ ಹೇಗೆ ನಡೆಯುತ್ತಿದೆ ಎಂಬುದನ್ನು ವಿವರವಾಗಿ ತೋರಿಸುವ ಪ್ರಯತ್ನ ನಡೆದಿದೆ. ಇದು ಕನ್ನಡದಲ್ಲಿ ಹೊಸ ಪ್ರಯತ್ನ. ಮೈಮರೆತು ದುಡ್ಡು ಹಾಕಿದರೆ ಯಾವ ಗತಿ ಬರುತ್ತದೆ ಎಂದು ತೋರಿಸಿದ್ದಾರೆ. ಹಾಸ್ಯ, ಮನರಂಜನೆ ಜೊತೆಗೆ ಒಂದೊಳ್ಳೆಯ ಸಂದೇಶ ಕೊಡೋ ಪ್ರಯತ್ನ ಶಶಾಂಕ್ ಅವರಿಂದ ಆಗಿದೆ. ತಿರುವುಗಳೇ ಈ ಚಿತ್ರದ ಬಲ ಎಂದರೂ ತಪ್ಪಾಗಲಿಕ್ಕಿಲ್ಲ. ಕೆಲವು ತಿರುವುಗಳನ್ನು ಸುಲಭವಾಗಿ ವೀಕ್ಷಿಸಿದರೆ, ಕೆಲವು ತಿರುವುಗಳು ದಸಕ್ಕನೆ ಬಂದು ನಿಲ್ಲುತ್ತವೆ. ಕ್ಲೈಮ್ಯಾಕ್ಸ್ ಒಳ್ಳೆಯ ಮನರಂಜನೆ ಕೊಟ್ಟಿದ್ದಾರೆ ಶಶಾಂಕ್. ಮೊದಲಾರ್ಧ ಸಿನಿಮಾ ನೋಡಿಕೊಂಡು ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಇನ್ನೂ ಏನೋ ಬೇಕು ಎಂದು ಅನಿಸುತ್ತದೆ.
ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ‘ನಾನೇ ನೀನಂತೆ..’, ‘ಗಂಗಿ.. ಗಂಗಿ..’ ಹಾಡುಗಳು ಮನಸ್ಸಿನಲ್ಲಿ ಉಳಿಯುತ್ತವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ರಂದು ಪ್ರಕಟಿಸಲಾಗಿದೆ – 9:22 am, ಶುಕ್ರ, 31 ಅಕ್ಟೋಬರ್ 25