Relationship psychology: ಪ್ರತಿ ಬಾರಿ ಹೊಸ ಪರಿಚಯವಾದಾಗ ‘ಈಗಲಾದರೂ ಸರಿಯಾದ ವ್ಯಕ್ತಿ ಸಿಕ್ಕರು’ ಎಂದುಕೊಳ್ಳುತ್ತೇವೆ. ಆದರೆ ಕೊನೆಗೆ ಮತ್ತೆ ಅದೇ ಹಳೆ ನೋವು, ಜಗಳ, ಕಣ್ಣೀರು! ನಿಮ್ಮ ಪ್ರೀತಿಯ ವಿಷ್ಯದಲ್ಲೂ ಹೀಗೆ ನಡೆಯುತ್ತಿದ್ದರೆ, ಅದಕ್ಕೆ ನಿಮ್ಮ ಹಣೆಬರಹ ಕಾರಣವಲ್ಲ, ಬದಲಿಗೆ ಸೈಕಾಲಜಿ ಕಾರಣ.

ಪ್ರತಿ ಹೊಸ ಪರಿಚಯವೂ ಆರಂಭದಲ್ಲಿ ಅದ್ಭುತ ಎನಿಸುತ್ತದೆ. ಆದರೆ ಕೆಲವೇ ದಿನಗಳಲ್ಲಿ ಹಳೆಯ ಕಥೆಯೇ ಪುನರಾವರ್ತನೆಯಾಗುತ್ತದೆ. ಸಂಗಾತಿಯ ವರ್ತನೆಯಲ್ಲಿ ಬದಲಾವಣೆ, ಅರ್ಥಮಾಡಿಕೊಳ್ಳದ ಗುಣ ಮತ್ತು ಕೊನೆಗೆ ಮನಸ್ಸು ಒಡೆದು ಆ ಸಂಬಂಧ ಅಂತ್ಯವಾಗುವುದು. ನಿಮ್ಮ ಜೀವನದಲ್ಲಿ ಇದು ಪದೇ ಪದೇ ನಡೆಯುತ್ತಿದ್ದರೆ, ಅದಕ್ಕೆ ನಿಮ್ಮ ‘ದುರಾದೃಷ್ಟ’ ಕಾರಣವಲ್ಲ, ಬದಲಿಗೆ ನಿಮ್ಮ ಮನಸ್ಥಿತಿ ಮತ್ತು ಬಾಲ್ಯದ ಅನುಭವಗಳೇ ಕಾರಣ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ.

ಬಾಲ್ಯದಲ್ಲಿ ಮನೆಯಲ್ಲಿ ಕಂಡುಬಂದ ವಾತಾವರಣವೇ ನಮ್ಮ ಭವಿಷ್ಯದ ಸಂಬಂಧಗಳಿಗೆ ‘ಬ್ಲೂಪ್ರಿಂಟ್’ ಆಗಿರುತ್ತದೆ. ತಂದೆ-ತಾಯಿಯ ನಡುವಿನ ಪ್ರೀತಿ ಮತ್ತು ಗೌರವವನ್ನು ನೋಡಿ ಬೆಳೆದ ಮಕ್ಕಳು, ದೊಡ್ಡವರಾದ ಮೇಲೆ ತಮ್ಮ ಸಂಗಾತಿಯಲ್ಲೂ ಅದೇ ಗುಣಗಳನ್ನು ಹುಡುಕುತ್ತಾರೆ. ಆದರೆ, ಬಾಲ್ಯದಲ್ಲಿ ನಿರಂತರ ಜಗಳ ಅಥವಾ ಪ್ರೀತಿಯ ಕೊರತೆಯಿರುವ ವಾತಾವರಣದಲ್ಲಿ ಬೆಳೆದವರು, ತಿಳಿಯದೆಯೇ ಭವಿಷ್ಯದಲ್ಲಿ ಅಂತಹ ಸಂಕೀರ್ಣ ಸಂಬಂಧಗಳತ್ತ ಆಕರ್ಷಿತರಾಗುತ್ತಾರೆ.

ನಮ್ಮ ಮನಸ್ಸು ಯಾವಾಗಲೂ ತನಗೆ ‘ಪರಿಚಯವಿರುವ’ ಭಾವನೆಗಳನ್ನೇ ಹುಡುಕುತ್ತಿರುತ್ತದೆ. ಒಂದು ವೇಳೆ ನೀವು ಬಾಲ್ಯದಲ್ಲಿ ಮನೆಯಲ್ಲಿ ಸದಾ ಜಗಳ, ಕೂಗಾಟ ಅಥವಾ ಪ್ರೀತಿಯ ಕೊರತೆಯನ್ನು ನೋಡಿ ಬೆಳೆದಿದ್ದರೆ, ನಿಮ್ಮ ಮೆದುಳಿಗೆ ಅಂತಹ ‘ಅಶಾಂತಿಯ’ ವಾತಾವರಣವೇ ಸಹಜ ಅನಿಸಿಬಿಡುತ್ತದೆ. ಹಾಗಾಗಿಯೇ ದೊಡ್ಡವರಾದ ಮೇಲೆ ಯಾರಾದರೂ ನಿಮ್ಮನ್ನು ತುಂಬಾ ಪ್ರೀತಿಯಿಂದ, ಗೌರವದಿಂದ ನಡೆಸಿಕೊಂಡರೆ ಅದು ನಿಮಗೆ ‘ಬೋರಿಂಗ್’ ಅಥವಾ ವಿಚಿತ್ರ ಎನಿಸಬಹುದು. ತಿಳಿಯದೆಯೇ ನಿಮ್ಮ ಮನಸ್ಸು ಮತ್ತೆ ಅದೇ ಹಳೆಯ ನೋವನ್ನು ನೀಡುವಂತಹ ಕೋಪಿಷ್ಠ ಅಥವಾ ಭಾವನೆಗಳಿಲ್ಲದ ವ್ಯಕ್ತಿಗಳತ್ತಲೇ ನಿಮ್ಮನ್ನು ಸೆಳೆಯುತ್ತದೆ.

ಅನೇಕ ಬಾರಿ ನಮ್ಮ ಮೇಲಿರುವ ಅತಿಯಾದ ಕೀಳರಿಮೆ, ಅಂದರೆ ‘ನಾನು ನಿಜವಾದ ಪ್ರೀತಿ ಮತ್ತು ಗೌರವಕ್ಕೆ ಅರ್ಹನಲ್ಲ’ ಎಂಬ ತಪ್ಪು ಭಾವನೆ ನಮ್ಮನ್ನು ಕಾಡುತ್ತದೆ. ಇದರಿಂದಾಗಿ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳದ ವ್ಯಕ್ತಿಗಳನ್ನೂ ನಾವು ಅನಿವಾರ್ಯವಾಗಿ ಸಹಿಸಿಕೊಳ್ಳುತ್ತೇವೆ. ಇದು ಒಂದು ವಿಷವರ್ತುಲದಂತೆ; ಮೊದಲೇ ಕಡಿಮೆ ಇರುವ ಆತ್ಮವಿಶ್ವಾಸ ಕೆಟ್ಟ ಸಂಬಂಧಕ್ಕೆ ನಾಂದಿ ಹಾಡುತ್ತದೆ, ಆ ಸಂಬಂಧದಿಂದ ನಮ್ಮ ಮೇಲಿರುವ ನಂಬಿಕೆ ಇನ್ನೂ ಕುಗ್ಗಿ ಮತ್ತೆ ತಪ್ಪು ವ್ಯಕ್ತಿಗಳನ್ನೇ ಆಕರ್ಷಿಸುವಂತೆ ಮಾಡುತ್ತದೆ

ಈ ವಿಷವರ್ತುಲದಿಂದ ಹೊರಬರಲು ಮೊದಲು ನಿಮ್ಮ ಹಳೆಯ ಸಂಬಂಧಗಳನ್ನು ವಿಶ್ಲೇಷಿಸಿ. ನೀವು ಎಂತಹವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ ಮತ್ತು ಯಾವ ತಪ್ಪುಗಳು ಪುನರಾವರ್ತನೆಯಾಗುತ್ತಿವೆ ಎಂಬುದನ್ನು ಗುರುತಿಸಿ. ಅಗತ್ಯವಿದ್ದರೆ ಆಪ್ತರು ಅಥವಾ ಮನೋವಿಜ್ಞಾನಿಗಳ ಸಹಾಯ ಪಡೆಯಿರಿ. ನೆನಪಿಡಿ, ನೀವು ಮೊದಲು ನಿಮ್ಮನ್ನು ಪ್ರೀತಿಸಲು ಮತ್ತು ಗೌರವಿಸಲು ಕಲಿತಾಗ ಮಾತ್ರ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಲು ಸಾಧ್ಯ.

Source link
ಕೆಲವರು ಯಾವಾಗಲೂ ಕೆಟ್ಟ ವ್ಯಕ್ತಿಗಳತ್ತಲೇ ಆಕರ್ಷಿತರಾಗುವುದು ಏಕೆ ಎಂದು ನಿಮಗೆ ತಿಳಿದಿದೆಯೇ?