2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ ನಿಮ್ಮ ರಾಶಿಗೆ 3ನೇ ಮನೆಯಲ್ಲಿ ಸಂಚಾರ ಮಾಡುತ್ತಾರೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ 6ನೇ ಮನೆ, ಅಂದರೆ ರಿಪು- ಶತ್ರು ಸ್ಥಾನದಲ್ಲಿರುತ್ತದೆ. ಆ ನಂತರ ಅಕ್ಟೋಬರ್ 31 ರಂದು ತಾರೀಕಿನವರೆಗೆ ಕಳತ್ರ ಸ್ಥಾನ, ಅಂದರೆ 7ನೇ ಮನೆಯಾದ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಮತ್ತು ಈ ಡಿಸೆಂಬರ್ ಎರಡೂ ತಿಂಗಳು, ಆಯುಷ್ಯ ಸ್ಥಾನ, ಅಂದರೆ 8ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇನ್ನು ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ 2ನೇ ಮನೆಯಲ್ಲಿ ಆಗುವಂಥ ಕುಂಭದಲ್ಲಿ ಹಾಗೂ ಕೇತು ಗ್ರಹವು 8ನೇ ಮನೆಯಲ್ಲಿ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು ಜನ್ಮ ಸಾರ್ಥಕವಾದ 1ನೇ ಮನೆಯಲ್ಲಿ ನಿಮ್ಮ ಜನ್ಮ ರಾಶಿ ಹಾಗೂ ಕೇತು ಗ್ರಹ ನಿಮ್ಮ ರಾಶಿಗೆ 7ನೇ ಮನೆಯಲ್ಲಿ ಕರ್ಕಾಟಕ ರಾಶಿಗೂ ಪ್ರವೇಶಿಸುತ್ತದೆ.
ಉತ್ತರಾಷಾಢ ನಕ್ಷತ್ರದ ಎರಡು, ಮೂರು, ನಾಲ್ಕನೇ ಪಾದ, ಶ್ರವಣ ನಕ್ಷತ್ರದ ನಾಲ್ಕೂ ಪಾದ, ಧನಿಷ್ಠ ನಕ್ಷತ್ರದ ಒಂದು, ಎರಡನೇ ಪಾದ ಸೇರಿ ಮಕರ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಶನಿ.
ಮಕರ ರಾಶಿಯವರಿಗೆ 2026ರ ವರ್ಷ ಭವಿಷ್ಯ ಹೀಗಿದೆ:
ಶನಿ ಗೋಚಾರ:
ಇಡೀ ವರ್ಷ ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ಶನೈಶ್ಚರನ ಸಂಚಾರ ಇರುತ್ತದೆ. ಉದ್ಯೋಗ- ವೃತ್ತಿ- ವ್ಯಾಪಾರದಲ್ಲಿ ಅಂದುಕೊಂಡಂಥ ಸಾಧನೆ ಆಗುತ್ತದೆ. ಸೋದರ- ಸೋದರಿಯ ಜೊತೆಗೆ ಏನಾದರೂ ಅಭಿಪ್ರಾಯ ಭೇದ- ಮನಸ್ತಾಪ ಇದ್ದಲ್ಲಿ ದೂರದ ಸಂಗತಿ. ಆರೋಗ್ಯ ಸಮಸ್ಯೆಗಳು ಸುಧಾರಣೆ ಕಾಣುತ್ತವೆ. ನಿಮ್ಮ ನಿಧಾನಗತಿ ಧೋರಣೆಯಿಂದ ಇಷ್ಟು ಸಮಯ ಆಕ್ಷೇಪದ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಇದ್ದವರಿಗೆ ಆ ಸ್ವಭಾವಕ್ಕೆ ಮೆಚ್ಚುಗೆಯ ಮಾತುಗಳು ಕೇಳಿಬರಲಿವೆ. ಹಣಕಾಸಿನ ಹರಿವು ಸರಾಗವಾಗಿ ಆಗಲಿದೆ. ಒಂದು ವೇಳೆ ದಂಪತಿ- ಪ್ರೇಮಿಗಳ ಮಧ್ಯೆ ಹಣಕಾಸಿನ ವಿಷಯಕ್ಕೆ ಜಗಳ- ಮನಸ್ತಾಪ ಇದ್ದಲ್ಲಿ ಅದನ್ನು ದೂರ ಮಾಡಿಕೊಳ್ಳಲು ಸಾಧ್ಯ. ಮಾತು ಪ್ರಧಾನವಾದ ವೃತ್ತಿ- ಉದ್ಯೋಗ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚು ಆಗಲಿದೆ. ಸೈಟು- ಮನೆ-ಫ್ಲ್ಯಾಟ್ ಖರೀದಿ ಮಾಡಬೇಕು ಎಂದುಕೊಳ್ಳುತ್ತಾ ಇರುವವರಿಗೆ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಈ ಅವಧಿಯಲ್ಲಿ ನಿಮಗಿರುವ ಸಾಲಗಳನ್ನು ತೀರಿಸಿಕೊಳ್ಳಲು ಸಾಧ್ಯವಾಗುತ್ತದೆ, ಉಳಿತಾಯ- ಹೂಡಿಕೆ ಸಹ ಮಾಡಲಾಗಿರುತ್ತದೆ. ವ್ಯಾಪಾರದಲ್ಲಿ ಆದಾಯ ಮೂಲಗಳು ಮತ್ತು ಲಾಭ ಜಾಸ್ತಿ ಆಗಲಿದೆ. ನಿಮ್ಮ ನಿರ್ಧಾರಗಳನ್ನು ನಂಬುವುದು ಬಹಳ ಮುಖ್ಯ. ಯಾವುದೇ ಲಾಭದಾಯಕ ಕೆಲಸ- ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅನುಮಾನ- ಹಿಂಜರಿಕೆ ಇಟ್ಟುಕೊಳ್ಳಬೇಡಿ. ಹೊಸದಾಗಿ ವ್ಯಾಪಾರ- ವ್ಯವಹಾರ ಆರಂಭಿಸಬೇಕು ಎಂದುಕೊಳ್ಳುವವರು ಈ ಅವಧಿಯಲ್ಲಿ ಶುರು ಮಾಡಬಹುದು. ಕಬ್ಬಿಣ, ಇಟ್ಟಿಗೆ, ಸಿಮೆಂಟ್ ಮಾರಾಟ ಮತ್ತು ಸಬ್ ಕಾಂಟ್ರಾಕ್ಟ್ ಬಳಸು, ಅದರ ಮೂಲಕ ಆದಾಯ ಮಾಡಿಕೊಳ್ಳುವವರಿಗೆ ಹಣಕಾಸಿನ ಹರಿವು ಉತ್ತಮವಾಗಿದೆ.
ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ
ಗುರು ಗ್ರಹ ಗೋಚಾರ:
ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಆರನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಎಂಥದ್ದೇ ಅಭಿಪ್ರಾಯ ಭೇದ ಅಂತ ಇದ್ದರೂ ಜಗಳ- ಕಲಹದ ಮಟ್ಟಕ್ಕೆ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳೊಂದಿಗೆ ವೈರತ್ವ ಏರ್ಪಡಬಹುದು. ದೇಹದ ತೂಕ ಹೆಚ್ಚಾಗದಂತೆ, ಕೊಲೆಸ್ಟ್ರಾಲ್ ಜಾಸ್ತಿ ಆಗದಂತೆ ನೋಡಿಕೊಳ್ಳುವುದು. ನಿಮ್ಮ ರಾಶಿಗೆ ವ್ಯಯ ಸ್ಥಾನದ ಅಧಿಪತಿಯೀ ಆದಂಥ ಗುರು ಗ್ರಹ ಆರನೇ ಮನೆಯಲ್ಲಿ ಸಂಚರಿಸುವುದರಿಂದ ವೈದ್ಯಕೀಯ ವೆಚ್ಚದ ಪ್ರಮಾಣ ಹೆಚ್ಚಾಗಲಿದೆ. ಕೋರ್ಟ್-ಕಚೇರಿ ವ್ಯಾಜ್ಯ, ಪೊಲೀಸ್ ಠಾಣೆಗೆ ಅಲೆದಾಟ ಇಂಥವುಗಳಿಂದ ಕೂಡಿದ ಖರ್ಚಿನ ಪ್ರಮಾಣ. ಹೊಸದಾಗಿ ಯಾವುದೇ ಪ್ರಾಜೆಕ್ಟ್ ಶುರು ಮಾಡುವ ಮುನ್ನ ಸಾಧಕ- ಬಾಧಕಗಳ ಬಗ್ಗೆ ಅಳೆದು ತೂಗಿ ನೋಡುವುದು ಬಹಳ ಮುಖ್ಯ. ಅರ್ಧದಷ್ಟು ಅರ್ಧದಷ್ಟು ಕೆಲಸ ಮುಗಿದ ಮೇಲೆ, ಹೊರಗೆ ಬಂದುಬಿಡಬೇಕು ಎನಿಸುವುದಕ್ಕೆ ಶುರುವಾಗುತ್ತದೆ. ಗ್ಯಾಜೆಟ್- ಮೊಬೈಲ್ ಫೋನ್- ಲ್ಯಾಪ್ ಟಾಪ್ ಇಂಥವುಗಳ ಖರೀದಿಯನ್ನು ತೀರಾ ಅಗತ್ಯ ಎನಿಸಿದರೆ ಮಾತ್ರ ಮಾಡಿ. ಜೂನ್ ಒಂದರಿಂದ ಅಕ್ಟೋಬರ್ ಮೂವತ್ತೊಂದನೇ ತಾರೀಕು ಏಳನೇ ಗುರುಗಳು ಮನೆಯಲ್ಲಿ ಸಂಚರಿಸುತ್ತಾರೆ. ಹಲವು ರೀತಿಯಲ್ಲಿ ಅನುಕೂಲಕರ ಹಾಗೂ ಶುಭ ಕಾರ್ಯಗಳು ನಡೆಯುತ್ತವೆ. ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಭಾವನೆ ದೊರೆಯುವುದು, ವಿದೇಶ ಪ್ರಯಾಣ ಅನುಕೂಲಕರ- ಲಾಭದಾಯಕ ಆಗಲಿದೆ. ಸಂತಾನಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಇದೆ. ಉದ್ಯೋಗ- ವೃತ್ತಿ, ವ್ಯಾಪಾರ- ವ್ಯವಹಾರ ಎಲ್ಲದರಲ್ಲೂ ಒಳಿತನ್ನು ಕಾಣುತ್ತೀರಿ. ನವೆಂಬರ್-ಡಿಸಂಬರ್ ನಲ್ಲಿ ಉದ್ಯೋಗ ಬಿಡಬಹುದು ಅಥವಾ ಕೆಲಸದಿಂದ ತೆಗೆಯಬಹುದು. ಆರೋಗ್ಯ ಸಮಸ್ಯೆ ಆಗುತ್ತದೆ. ನೆರೆಹೊರೆಯವರ ಜೊತೆಗೆ ಜಗಳ, ಪೊಲೀಸ್ ಠಾಣೆಗೆ ಅಲೆದಾಟ ಈ ರೀತಿ ಫಲಗಳಿವೆ.
ರಾಹು-ಕೇತು ಗೋಚಾರ:
ಎರಡನೇ ಮನೆಯಲ್ಲಿ ರಾಹು ಸಂಚಾರದ ಅವಧಿಯ ಆದಾಯದ ವಿಚಾರಕ್ಕೆ ಭಾರೀ ಏರಿಳಿತ. ಅನಗತ್ಯವಾಗಿ ಸಾಲ ಮಾಡುವಂತೆ ಆಗುತ್ತದೆ. ಕಣ್ಣಿಗೆ ಸಂಬಂಧಿಸಿದ ಕೆಲವು ತೊಂದರೆ ಕಾಣಿಸಿಕೊಳ್ಳಬಹುದು. ದಂಪತಿ ಮಧ್ಯೆ ಯಾರು ಸರಿ- ಯಾರ ನಿರ್ಧಾರ ಉತ್ತಮ ಎಂಬ ಕಾರಣಕ್ಕೆ ಜಗಳ- ಕಲಹ ಆಗುತ್ತದೆ. ಈ ಅವಧಿಯಲ್ಲಿ ಸಾಲ ತೆಗೆದುಕೊಳ್ಳುತ್ತದೆ, ಚಿನ್ನ- ಬೆಳ್ಳಿ, ಬಂಡವಾಳ ಹೂಡಿಕೆ ಮಾಡುವುದಕ್ಕೆ ಹೋಗಬೇಡಿ. ಎಂಟನೇ ಮನೆಯಲ್ಲಿ ಕೇತು ಗ್ರಹ ಸಂಚಾರದಲ್ಲಿ ಚರ್ಮ ವ್ಯಾಧಿಗಳು ಕಾಣಿಸಿಕೊಳ್ಳಬಹುದು. ಒಂದು ವೇಳೆ ಇದ್ದರೆ ಎಂದಾದಲ್ಲಿ ಉಲ್ಬಣಗೊಳ್ಳಬಹುದು. ಸೋರಿಯಾಸಿಸ್ ನಂಥ ಆರೋಗ್ಯ ಸಮಸ್ಯೆ ಇರುವವರು ಬಹಳ ಜಾಗ್ರತೆ ವಹಿಸಬೇಕು. ನವೆಂಬರ್-ಡಿಸೆಂಬರ್ ತಿಂಗಳಲ್ಲಿ ತೀವ್ರತರವಾದ ಮಾನಸಿಕ ಖಿನ್ನತೆ ಕಾಡಲಿದೆ. ಸುಸ್ತು, ದೇಹದಲ್ಲಿ ಕೊರತೆ, ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಆಪರೇಷನ್ ಮಾಡಿಸುವಂತೆ ಆಗಲಿದೆ. ಸಾರ್ವಜನಿಕ ಜೀವನದಲ್ಲಿ ಇರುವವರು ತಮ್ಮ ಹೇಳಿಕೆಗಳಿಂದ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವಂತೆ ಆಗಲಿದೆ.
ಪರಿಹಾರ: ಗುರು ಗ್ರಹದ ಆರಾಧನೆ, ದುರ್ಗಾ ದೇವಿ ಮತ್ತು ಗಣಪತಿ ಪೂಜೆ- ಪುನಸ್ಕಾರ ಮಾಡಿಕೊಳ್ಳಿ.
ಲೇಖನ- ಸ್ವಾತಿ ಎನ್.ಕೆ.