ಚಿಕ್ಕಬಳ್ಳಾಪುರ, ಜನವರಿ 19: ತಾಲೂಕಿನ ಎ. ಕೊತ್ತೂರು ಗ್ರಾಮ ದೇವತೆಯ ಮೆರವಣಿಗೆ ವೇಳೆ ದಲಿತರು ಮತ್ತು ಸವರ್ಣೀಯರ ನಡುವೆ ತೀವ್ರ ಘರ್ಷಣೆ ನಡೆದಿದೆ. ಗ್ರಾಮದ ಎಲ್ಲಾ ಜಾತಿ ಸಮುದಾಯದವರು ಒಟ್ಟಾಗಿ ಚಂದಾ ವಸೂಲಿ ಮಾಡಿ, ಗಂಗಮ್ಮ ದೇವರು ಜಾತ್ರೆ ಮತ್ತು ಮೆರವಣಿಗೆಯನ್ನು ನಡೆಸಿದರು. ಬೆಳಗ್ಗೆ ಹತ್ತು ಗಂಟೆಯಿಂದ ಗ್ರಾಮ ದೇವತೆಯ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಯು ಸಾಗುತ್ತಿದ್ದಾಗ, ಚಂದಾ ನೀಡಿದ್ದ ದಲಿತ ಯುವಕರು ಸಹ ತಾವು ದೇವರನ್ನು ಹೊರಬೇಕು, ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಉತ್ಸವ ಮೆರವಣಿಗೆಯನ್ನು ಹೊರುವುದಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಕೆಲವು ಸವರ್ಣೀಯರು ಅಡ್ಡಪಡಿಸಿ, ನೀವು ದೇವರು ಮುಟ್ಟಬಾರದು ಮತ್ತು ದೇವರ ಉತ್ಸವವನ್ನು ಹೊರಬಾರದು ಎಂದು ತಡೆಯೊಡ್ಡಿದ್ದಾರೆ. ಇದು ದಲಿತ ಸಮುದಾಯದ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ. ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದು, ಅದು ಘರ್ಷಣೆಯಾಗಿ ಮಾರ್ಪಟ್ಟಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ, ಎರಡೂ ಸಮುದಾಯದವರು ದೇವರ ವಿಗ್ರಹವನ್ನು ನಡು ರಸ್ತೆಯಲ್ಲೇ ಬಿಟ್ಟು ತೆರಳಿದ್ದಾರೆ. ಘಟನೆ ಮಾಹಿತಿ ತಿಳಿದ ತಕ್ಷಣ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.