ಚಿಕ್ಕಬಳ್ಳಾಪುರದಲ್ಲಿ ಹಳೆಯ ದ್ವೇಷಕ್ಕೆ ಇಡೀ ಕುಟುಂಬಕ್ಕೆ ವಿಷ , 8 ಮಂದಿ ಅಸ್ವಸ್ಥ
ಚಿಕ್ಕಬಳ್ಳಾಪುರ, ನವೆಂಬರ್ 15: ಚಿಕ್ಕಬಳ್ಳಾಪುರ (ಚಿಕ್ಕಬಳ್ಳಾಪುರ) ಜಿಲ್ಲೆಯ ಬಾಗೇಪಲ್ಲಿ(ಭಾಗ್ಯನಗರ) ತಾಲೂಕಿನ ದೇವಿರೆಡ್ಡಿಪಲ್ಲಿಯಲ್ಲಿ ಒಂದೇ ಕುಟುಂಬದ 8 ಜನ ವಿಷ ಸೇವಿಸಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಹಳೆಯ ದ್ವೇಷದಿಂದ ಈ ಕೃತ್ಯ ನಡೆದಿದೆ ಎಂದು ಕೇಳಿಬಂದಿದ್ದು, ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂಬಾರಿಗೆ ವಿಷ ಬೆರೆಸಿದ್ದ ಪಾಪಿ
ದೇವಿರೆಡ್ಡಿಪಲ್ಲಿಯ ಮದ್ದರೆಡ್ಡಿ ಮತ್ತು ಪಾಪಿರೆಡ್ಡಿ ಎಂಬುವವರು ಅಕ್ಕಪಕ್ಕದ ಮನೆಯವರಾಗಿದ್ದರೆ, ಎರಡು ವರ್ಷಗಳ ಹಿಂದೆ ಇಬ್ಬರ ಮನೆಗಳ ನಡುವಿನ ಮೂರಡಿ ಜಾಗದ ಸಲುವಾಗಿ ಜಗಳವಾಗಿತ್ತು. ಇದೇ ದ್ವೇಷದ ಚೌಡರೆಡ್ಡಿ ಎಂಬಾತನಿಗೆ ಸುಪಾರಿ ಕೊಟ್ಟ ಪಾಪಿರೆಡ್ಡಿ ಕುಟುಂಬದವರ ಆಹಾರದಲ್ಲಿ ವಿಷ ಬೆರೆಸುವಂತೆ ಹೇಳಿದ್ದ. ಅದೇ ಮದ್ದರೆಡ್ಡಿಯ ಅಡುಗೆ ಮನೆಗೆ ನೀರು ಕುಡಿಯುವ ನೆಪದಲ್ಲಿ ತೆರಳಿದ್ದ ಚೌಡರೆಡ್ಡಿ, ಸಾಂಬಾರಿಗೆ ವಿಷದ ಪೌಡರ್ ಬರೆಸಿದ್ದ.
ವಿಷ ಸೇವಿಸಿದ ಮೂವರ ಸ್ಥಿತಿ ಚಿಂತಾಜನಕ
ಇದನ್ನರಿಯದ ಕುಟುಂಬಸ್ಥರು ಎಂದಿನಂತೆ ಊಟ ಮಾಡಿದ್ದು, ಮನೆ ಯಜಮಾನಿ ಮದ್ದಕ್ಕ ಹಾಗೂ ಇವರಿಬ್ಬರು ಮಕ್ಕಳಾದ ಮದ್ದರೆಡ್ಡಿ ಹಾಗೂ ಮಂಜುನಾಥ್ ಸೇರಿದಂತೆ ಮದ್ದರೆಡ್ಡಿ ಪತ್ನಿ ಭಾಗ್ಯಮ್ಮ, ಮಗಳು ಮಣಿ, ಮಂಜುನಾಥ್ ಪತ್ನಿ ಈಶ್ವರಮ್ಮ, ಮಂಜುನಾಥ್ ಮಗ ಸುಬ್ರಮಣಿ, ಹಾಗೂ ಸಂಬಂಧಿ ಬಾಲಕಿ ಭಾನುಶ್ರೀ ಈ ಎಂಟೂ ಜನ ಅಸ್ವಸ್ಥರಾಗಿದ್ದಾರೆ.
ಈ 8 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ, ಸದ್ಯಕ್ಕೆ ಮಂಜುನಾಥ್ ಹಾಗೂ ಮದ್ದರೆಡ್ಡಿ ಸೇರಿದಂತೆ ಸುಬ್ರಮಣಿ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿರಿಸಲಾಗಿದೆ. ಉಳಿದ 5 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರೂ ದೇಹದೊಳಗೆ ವಿಷ ಸೇರದಿದ್ದರೆ ಯಾವಾಗ ಏನಾಗುತ್ತದೆಂದು ಹೇಳಲಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಹಿನ್ನೆಲೆ ಎಸ್ಪಿ ಕುಶಾಲ್ಸೆ ಸೇರಿದಂತೆ ಬಾಗೇಪಲ್ಲಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಪ್ರಮುಖ ಆರೋಪಿಗಳಾದ ಪಾಪಿರೆಡ್ಡಿ ಹಾಗೂ ಚೌಡರೆಡ್ಡಿ ಅವರನ್ನು ಬಂಧಿಸಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.