ಅಮೆರಿಕನ್ ಮಹಿಳೆಗೆ ಅಂಜಲಿ ನಿಂಬಾಳ್ಕರ್ ಚಿಕಿತ್ಸೆ.
ಬೆಂಗಳೂರು, ಡಿಸೆಂಬರ್ 14: ಗೋವಾ–ನವದೇಹಲಿ ವಿಮಾನ ಪ್ರಯಾಣದ ವೇಳೆ ಮಧ್ಯಾಕಾಶದಲ್ಲಿ ತುರ್ತು ವೈದ್ಯಕೀಯ ಸಮಸ್ಯೆಗೆ ಒಳಗಾದ ಅಮೆರಿಕನ್ ಮಹಿಳೆಯ ಜೀವವನ್ನು ಉಳಿಸುವ ಮೂಲಕ ಕರ್ನಾಟಕದ ಮಾಜಿ ಶಾಸಕಿ ಹಾಗೂ ವೃತ್ತಿಯಲ್ಲಿ ವೈದ್ಯರಾಗಿರುವ ಅಂಜಲಿ ನಿಂಬಾಳ್ಕರ್ ಮಾನವೀಯತೆ ಮೆರೆದಿದ್ದಾರೆ.ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ್ದ ‘ವೋಟ್ ಚೋರಿ’ ಅಭಿಯಾನ ಕಾರ್ಯಕ್ರಮಕ್ಕೆ ಅವರು ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.
ವಿಮಾನದಲ್ಲಿ ಅಂಜಲಿ ನಿಂಬಾಳ್ಕರ್ ಅವರು ಸಹ ಪ್ರಯಾಣಿಕರಾಗಿದ್ದ ಅಮೆರಿಕನ್ ಮಹಿಳೆ ಏಕಾಏಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ನಿಂಬಾಳ್ಕರ್ ಅವರು ಕಾರ್ಡಿಯೋಪಲ್ಮನರಿ ರೆಸಸ್ಸಿಟೇಶನ್ (CPR) ಮಾಡಿ ಆಕೆಯನ್ನು ಉಳಿಸಿದ್ದಾರೆ. ವಿಮಾನ ಪ್ರಯಾಣದ ಸಂಪೂರ್ಣ ಅವಧಿಯಲ್ಲೂ ನಿಂಬಾಳ್ಕರ್ ಅವರು ರೋಗಿಯ ಪಕ್ಕದಲ್ಲೇ ಇದ್ದರು, ಆಕೆಯ ವೈದ್ಯಕೀಯ ಅಗತ್ಯಗಳಿಗೆ ನಿರಂತರ ಗಮನ ಹರಿಸಿ ಧೈರ್ಯ ತುಂಬಿದ್ದಾರೆ. ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆದ ತಕ್ಷಣ, ಅಸ್ವಸ್ಥ ವಿದೇಶಿ ಪ್ರಯಾಣವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಂಬಾಳ್ಕರ್ ಅವರ ಸಮಯೋಚಿತ ಕ್ರಮಕ್ಕೆ ಸಹಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಯಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ: ರಾಮನಗರದಲ್ಲಿ ಆನೆ ದಾಳಿಗೆ ರೈತ ಬಲಿ; ಮೈಸೂರಿನಲ್ಲಿ ಹುಲಿ ದಾಳಿಗೆ ಹಸುಗಳ ಸರಣಿ ಸಾವು
ಸಿಎಂರಿಂದಲೂ ಶ್ಲಾಘನೆ
ಗೋವಾ-ಹೊಸದಿಲ್ಲಿ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕ ಡಾ.ಅಂಜಲಿ ನಿಂಬಾಳ್ಕರ್ ಅವರು ಅಮೆರಿಕದ ಒಬ್ಬ ಮಹಿಳೆಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯತೆಗಳನ್ನು ಅರಿತು, ತಕ್ಷಣವೇ ಸಿಪಿಆರ್ ನೀಡಿ ಮಹಿಳೆಯ ಪ್ರಾಣ ಉಳಿಸಿದ ವಿಚಾರ ಕೇಳಿ ಹೆಮ್ಮೆಯೆನಿಸಿತು. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ… pic.twitter.com/mXicw43NOg
– ಸಿದ್ದರಾಮಯ್ಯ (@ಸಿದ್ದರಾಮಯ್ಯ) ಡಿಸೆಂಬರ್ 14, 2025
ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿಗಳು, ತುರ್ತು ವೈದ್ಯಕೀಯ ನೆರವಿನ ಅಗತ್ಯತೆ ಅರಿತು ಚಿಕಿತ್ಸೆ ನೀಡಿ, ಮಹಿಳೆಯ ಜೀವ ಉಳಿಸಿದ ವಿಚಾರ ಕೇಳಿ ಹೆಮ್ಮೆಯೆನಿಸಿತು. ವೈದ್ಯ ವೃತ್ತಿ ತೊರೆದು ಸಕ್ರಿಯ ರಾಜಕೀಯದಲ್ಲಿದ್ದರೂ ಸಕಾಲದಲ್ಲಿ ರೋಗಿಯೊಬ್ಬರ ನೆರವಿಗೆ ಧಾವಿಸಿದ ಅಂಜಲಿಯವರ ಮನೋಭಾವ, ಸಮಯ ಪುಸ್ತಕ ಅತ್ಯಂತ ಶ್ಲಾಘನೀಯ. ಅಧಿಕಾರವಿರಲಿ, ಇಲ್ಲದಿರಲಿ ಜನಸೇವೆ ಎಂದು ಬಂದಾಗ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕೈಲಾದ ಸಹಾಯಕ್ಕೆ ನಿಲ್ಲುವ ಅಂಜಲಿಯಂತವರು ಸಮಾಜಕ್ಕೆ ಮಾದರಿ ಎಂದು ಸಿಎಂ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.