ಅವಲಕ್ಕಿ ಮಾಡೋಕೆ ಸುಲಭ ಅನ್ನಿಸಿದ್ರೂ ಮಾಡಲು ನಿಂತಾಗ್ಲೇ ಕಷ್ಟ ಗೊತ್ತಾಗೋದು. ಸಣ್ಣಪುಟ್ಟ ತಪ್ಪು ಅವಲಕ್ಕಿ ರುಚಿ ಜೊತೆ ಆಕಾರ ಬದಲಿಸುತ್ತೆ. ನೋಡೋಕೆ ಸುಂದರವಾಗಿ ತಿನ್ನೋಕೆ ರುಚಿಯಾಗಿರುವ ಅವಲಕ್ಕಿ ಹೀಗೆ ತಯಾರಿಸಿ.

ಬೆಳಿಗ್ಗೆ ಅಮ್ಮ ತಿಂಡಿಗೆ ಅವಲಕ್ಕಿ ಅಂದ ತಕ್ಷಣ ಮುಖ ಬಾಡುತ್ತೆ. ಅಯ್ಯೋ ಅವಲಕ್ಕೀನಾ ಅಂತ ಬೇಸರಪಟ್ಕೊಳ್ತೇವೆ. ಆದ್ರೆ ಅಮ್ಮ ಮಾಡಿದ ಅವಲಕ್ಕಿ ರುಚಿಯಲ್ಲಿ ಎತ್ತಿದ ಕೈ. ತಿನ್ನೋಕೆ ಶುರು ಮಾಡಿದ್ರೆ ನಿಲ್ಸೋದು ಕಷ್ಟ. ಅದೇ ನೀವು ಈ ಅವಲಕ್ಕಿ ಮಾಡೋಕೆ ಹೋಗಿ, ಒಮ್ಮೆಯೂ ಸರಿ ಬರೋದಿಲ್ಲ. ಒಮ್ಮೆ ಗಂಜಿಯಂತಾದ್ರೆ ಇನ್ನೊಮ್ಮೆ ಕಲ್ಲುಗಟ್ಟಿಯಾಗುತ್ತೆ. ಅವಲಕ್ಕಿ ಮಾಡೋದು ಸುಲಭ ಅನ್ನಿಸಿದ್ರೂ ಇದೊಂದು ಕಲೆ. ಇದಕ್ಕೂ ಒಂದಿಷ್ಟು ಟ್ರಿಕ್ಸ್ ಫಾಲೋ ಮಾಡ್ಬೇಕು.

ಒಗ್ಗರಣೆ ಅವಲಕ್ಕಿ ಮಾಡ್ತೀರಿ ಅಂದ್ರೆ ಮೊದಲು ನೀವು ಅವಲಕ್ಕಿ ಆಯ್ಕೆಯನ್ನು ಸರಿಯಾಗಿ ಮಾಡ್ಬೇಕು. ನೀವು ಯಾವ ಅವಲಕ್ಕಿ ಆಯ್ಕೆ ಮಾಡ್ಕೊಂಡಿದ್ದೀರಿ ಎಂಬುದ್ರ ಮೇಲೆ ರೆಸಿಪಿ ರೆಡಿ ಆಗ್ಬೇಕು. ತೆಳು ಅವಲಕ್ಕಿ ತಯಾರಿಸೋ ವಿಧಾನವೇ ಬೇರೆ. ಮಧ್ಯಮ ಅವಲಕ್ಕಿ ತಯಾರಿಸುವ ವಿಧಾನವೇ ಬೇರೆ. ಹಾಗೆಯೇ ಗಟ್ಟಿ ಅವಲಕ್ಕಿ ತಯಾರಿಸುವಾಗ್ಲೂ ಕೆಲವೊಂದು ಎಚ್ಚರಿಕೆ ವಹಿಸ್ಬೇಕು. ನೀವು ದಪ್ಪದ ಅವಲಕ್ಕಿ ಆಯ್ಕೆ ಮಾಡ್ಕೊಂಡ್ರೆ ನೀರಿನಲ್ಲಿ ತೊಳೆದು ಒಗ್ಗರಣೆ ಹಾಕಿದಾಗ ಗಂಜಿಯಾಗೋದಿಲ್ಲ.

ಅನೇಕರು ಅವಲಕ್ಕಿ ಒಗ್ಗರಣೆ ಆಗೋವರೆಗೂ ಅವಲಕ್ಕಿಯನ್ನು ನೀರಿನಲ್ಲಿ ನೆನೆ ಹಾಕ್ತಾರೆ. ಇದು ಅವಲಕ್ಕಿಯನ್ನು ಮೃದು ಮಾಡುತ್ತದೆ. ಅವಲಕ್ಕಿ ಕರಗಿ, ಬಾಣೆಲೆಗೆ ಅಂಟಿಕೊಳ್ಳುತ್ತದೆ. ಹಾಗಾಗಿ ನೀವು ಅವಲಕ್ಕಿ ತಯಾರಿಸುವ ಮೊದಲು ನೆನೆಹಾಕಬೇಡಿ. ಒಗ್ಗರೆ ಸಿದ್ಧವಾಗ್ತಿದ್ದಂತೆ ಅವಲಕ್ಕಿಯನ್ನು ತೊಳೆಯಿರಿ. ಮೊದಲು ಒಂದು ಪಾತ್ರೆಗೆ ಅವಲಕ್ಕಿ ಹಾಕಿ, ಅದಕ್ಕೆ ನೀರನ್ನು ಹಾಕಿ ನಿಧಾನವಾಗಿ ಕೈಗಳಿಂದ ಕ್ಲೀನ್ ಮಾಡಿ. ತುಂಬಾ ಬಲ ಪ್ರಯೋಗ ಬೇಡ. ನಂತ್ರ ಅವಲಕ್ಕಿಯಲ್ಲಿರುವ ನೀರನ್ನು ಸಂಪೂರ್ಣ ಕ್ಲೀನ್ ಮಾಡಿ. ನೀರಿದ್ದಲ್ಲಿ ಅವಲಕ್ಕಿ ಮೃದುವಾಗುತ್ತದೆ.

ಅವಲಕ್ಕಿಗೆ ಉಪ್ಪು ಹಾಕೋದು ಕೂಡ ಒಂದು ಟೆಕ್ನಿಕ್. ನೀವು ಯಾವಾಗ ಉಪ್ಪು ಹಾಕ್ತೀರಿ ಅನ್ನೋದು ಮುಖ್ಯ. ಅವಲಕ್ಕಿಗೆ ಸರಿಯಾಗಿ ಉಪ್ಪನ್ನು ನೀವು ಹಾಕಿದ್ರೂ ಎಲ್ಲ ಅವಲಕ್ಕಿ ಅದನ್ನು ಹಿಡಿದುಕೊಳ್ಳೋದಿಲ್ಲ. ಇಲ್ಲ ಅತೀ ಉಪ್ಪಾಗುತ್ತದೆ. ಇದನ್ನು ತಪ್ಪಿಸಿ, ಎಲ್ಲ ಅವಲಕ್ಕಿಗೆ ಉಪ್ಪು ಹಿಡಿಯಬೇಕೆಂದ್ರೆ ಅವಲಕ್ಕಿ ತೊಳೆದ ನಂತ್ರ ಅದ್ರ ಮೇಲೆ ಉಪ್ಪನ್ನು ಸಿಂಪಡಿಸಿ. ಆಗ ಉಪ್ಪು ಬೇಗ ಕರಗಿ ಎಲ್ಲ ಅವಲಕ್ಕಿಗೆ ಸೇರುತ್ತದೆ. ಇದ್ರಿಂದ ಅವಲಕ್ಕಿ ರುಚಿ ಹೆಚ್ಚಾಗುತ್ತದೆ.

ನೀವು ಅವಲಕ್ಕಿಗೆ ಈರುಳ್ಳಿ, ಸಾಸಿವೆ, ಎಣ್ಣೆ, ತರಕಾರಿ, ಉಪ್ಪು, ನಿಂಬೆ ರಸ ಏನೇ ಹಾಕಿದ್ರೂ ಅವಲಕ್ಕಿ ಸೆಪ್ಪೆ ಅನ್ನಿಸ್ಬಹುದು. ಹಾಗಾಗಿ ಅವಲಕ್ಕಿ ತಯಾರಿಸುವಾಗ ಸಕ್ಕರೆ ಹಾಕೋದನ್ನು ಮರೆಯಬೇಡಿ. ಉಪ್ಪಿನ ಜೊತೆ ಅರ್ಧ ಟೀ ಚಮಚ ಸಕ್ಕರೆಯನ್ನು ಹಾಕಿ. ಇದು ಪೋಹಾ ರುಚಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಇದು ಬಾಣಲೆಗೆ ಅವಲಕ್ಕಿ ಅಂಟಿಕೊಳ್ಳುವುದನ್ನು ತಪ್ಪಿಸುತ್ತದೆ.

Source link
ನೋಡೋಕೆ ಸುಲಭ ಅನ್ನಿಸಿದ್ರೂ ಮಾಡೋದು ಕಷ್ಟ, ಈ ಟ್ರಿಕ್ಸ್ ಬಳಸಿದ್ರೆ ಎಂದೂ ಅವಲಕ್ಕಿ ಗಂಜಿ ಆಗಲ್ಲ