ತುಮಕೂರು, (ಅಕ್ಟೋಬರ್ 21): ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವುದೇ ಗೃಹ ಇಲಾಖೆ. ಆದರೆ, ಇದೇ ಗೃಹ ಇಲಾಖೆ ಸಚಿವರು ಬೆಟ್ಟಿಂಗ್ (ಬೆಟ್ಟಿಂಗ್) ಭಾರೀ ಚರ್ಚೆಗೆ ಗ್ರಾಸ ಕಟ್ಟಿ. ಹೌದು… ತುಮಕೂರಿನಲ್ಲಿ ಭಾನುವಾರ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ (ಗೃಹ ಸಚಿವ ಜಿ ಪರಮೇಶ್ವರ್)ಬೆಟ್ಟಿಂಗ್ ಕಟ್ಟಿ 500 ರೂಪಾಯಿ ಕಳೆದುಕೊಂಡಿದ್ದಾರೆ. ತಮಾಷೆಗಾಗಿ ಕಟ್ಟಿದ್ದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಆಗುತ್ತಿವೆ, ಒಂದು ಸ್ಥಾನದಲ್ಲಿದ್ದವರು ಈ ರೀತಿ ಮಾಡುವುದು ಸರಿಯೇ ಎಂದು ನೆಟ್ಟಿಗರು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ಟೀಕಿಸುತ್ತಿದ್ದಾರೆ.
ತುಮಕೂರಿನಲ್ಲಿ ಭಾನುವಾರ ನಡೆದ ಪದವಿ ಪೂರ್ವ ಕಾಲೇಜು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರೊಂದಿಗೆ 500 ರೂಪಾಯಿ ಬಾಜಿ ಕಟ್ಟಿದ್ದರು. ಅಂತಿಮ ಪ್ರದರ್ಶನ ದಕ್ಷಿಣ ಕನ್ನಡ ತಂಡವು 36-26 ಅಂಕಗಳಿಂದ ವಿಜಯಪುರ ತಂಡವನ್ನು ಸೋಲಿಸಿತು. ಬಾಜಿ ಹಣವನ್ನು ಕಳೆದುಕೊಂಡ ಸಚಿವ ಪರಮೇಶ್ವರ್, ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಈ ವಿಷಯವನ್ನು ಬಹಿರಂಗಪಡಿಸಿದರು.
ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿದ ನಂತರ ಪರಮೇಶ್ವರ್ ಅವರು ಮಾತನಾಡಿ, ನಾನು 500 ಕಳೆದುಕೊಂಡು ಬಿಟ್ಟೆ. ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಜತೆ ಬೆಟ್ಟಿಂಗ್ ಕಟ್ಟಿದ್ದೆ. ಆದರೆ ಸೋತೆ ಎಂದು ತಾವೇ ಹೇಳಿಕೊಂಡಿದ್ದು, ಈ ಸಂಬಂಧ ಇದೀಗ ಭಾರೀ ಟೀಕೆಗೆ ಗುರಿಯಾಗಿದೆ.
ಗೃಹ ಸಚಿವರಾಗಿದ್ದವರು ಬಹಿರಂಗವಾಗಿಯೇ ಬೆಟ್ಟಿಂಗ್ ಆಡಿರುವ ಬಗ್ಗೆ ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ. ಕೆಲವರು ತಮಾಷೆಗಾಗಿ ಬೆಟ್ಟಿಂಗ್ ಕಟ್ಟಿದ್ದಾರೆ ಬಿಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಇದಕ್ಕೆ ವಿರುದ್ಧವಾಗಿ ತಮಾಷೆಗಾಗಿ ಕಟ್ಟಿರಬಹುದು. ಆದರೆ, ಅವರು ಯಾವ ಸ್ಥಾನದಲ್ಲಿದ್ದಾರೆ ಎನ್ನುವುದನ್ನು ಅರಿತುಕೊಳ್ಳಬೇಕಿತ್ತು.
ಗೃಹ ಸಚಿವರಾಗಿ ಇಂತಹ ಅಪರಾಧ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವವರೇ ಬೆಟ್ಟಿಂಗ್ ಕಟ್ಟಿರುವ ಬಗ್ಗೆ ಹೇಳಿಕೊಳ್ಳುವ ಮೂಲಕ ಸಮಾಜಕ್ಕೆ ಇವರು ಯಾವ ಸಂದೇಶ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಪರಮೇಶ್ವರ್ ಅವರು ಬೆಟ್ಟಿಂಗ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಜೊತೆಗೆ ನೆಟ್ಟಿಗರ ಟೀಕೆಗಳಿಗೆ ಗುರಿಯಾಗಿದ್ದಾರೆ.