Dandeli news: ದಾಂಡೇಲಿಯಲ್ಲಿ 4 ವರ್ಷದ ಮಗು ನಾಪತ್ತೆಯಾಗಿದೆ ಎಂದು ಪೋಷಕರು ಮತ್ತು ಪೊಲೀಸರು ಸುಮಾರು 5 ಗಂಟೆಗಳ ಕಾಲ ಹುಡುಕಾಡಿದ್ದಾರೆ. ಇಡೀ ಊರೇ ಆತಂಕದಲ್ಲಿದ್ದಾಗ, ಬಾಲಕ ತನ್ನದೇ ಮನೆಯ ಮೆಟ್ಟಿಲಿನ ಹಿಂಭಾಗದಲ್ಲಿ ನಿದ್ದೆ ಮಾಡುತ್ತಿರುವುದು ಕಂಡುಬಂದಿದ್ದು, ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

ದಾಂಡೇಲಿ: ಮನೆಯಲ್ಲೇ ಮಗು ನಿದ್ದೆ ಮಾಡಿದ್ದನ್ನು ಗಮನಿಸದೇ ಕುಟುಂಬದವರು ಮಗು ನಾಪತ್ತೆಯಾಗಿದೆ ಎಂದು ಆತಂಕದಿಂದ ಸುಮಾರು 5 ಗಂಟೆಗಳ ಕಾಲ ಹುಡುಕಾಡಿ ಪೇಚಿಗೆ ಸಿಲುಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ಸಾಮಾನ್ಯವಾಗಿ ಪುಟ್ಟ ಮಕ್ಕಳು ಕೆಲವೊಮ್ಮೆ ಆಟವಾಡುತ್ತಾ ಅಲ್ಲಲ್ಲೇ ನಿದ್ದೆಗೆ ಜಾರಿ ಬಿಡುತ್ತಾರೆ. ಕರೆದರೂ ಕೇಳಿಸುವುದಿಲ್ಲ, ನೋಡುವುದಕ್ಕೆ ಕಾಣುವುದಿಲ್ಲ, ಮನೆಯ ಮೂಲೆಯಲ್ಲೋ ಮಂಚದ ಕೆಳಗೋ ಆಟವಾಡುತ್ತಾ ಅಲ್ಲೇ ನಿದ್ದೆ ಮಾಡಿದ್ರೆ ಇತ್ತ ಅವರಿಗಾಗಿ ಪೋಷಕರು ಊರು ಕೇರಿ ಹುಡುಕುತ್ತಾರೆ.

ಹಾಗೆಯೇ ಇಲ್ಲಿ 4 ವರ್ಷದ ಮಗು ಅಜಾನ್ ಮಹ್ಮದ್ ಯಾಸಿನ್ ಹೆಬ್ಬಳಿ ಎಂಬ ಬಾಲಕ ತನ್ನದೇ ಮನೆಯ ಮೊದಲ ಮಹಡಿಯ ಮೆಟ್ಟಿಲಿನ ಹಿಂಭಾಗ ನಿದ್ದೆಗೆ ಜಾರಿದ್ದಾನೆ. ಇದು ಪೋಷಕರ ಗಮನಕ್ಕೆ ಬಾರದೇ ಅವರು ಮಗು ನಾಪತ್ತೆಯಾಗಿದೆ ಎಂದು ಊರೆಲ್ಲಾ ಹುಡುಕಾಡಿದ್ದಾರೆ. ಸುಮಾರು 5 ಗಂಟೆಗಳ ಹುಡುಕಾಟದ ನಂತರ ಮಗು ಅಜಾನ್ ಮೆಟ್ಟಿಲಿನ ಹಿಂದೆ ನಿದ್ದೆಗೆ ಜಾರಿರುವುದು ಗೊತ್ತಾಗಿದೆ. ದಾಂಡೇಲಿಯ ಲಮಾಣಿ ಚಾಳದಲ್ಲಿ ಈ ಘಟನೆ ನಡೆದಿದೆ.

ಬೆಳಗ್ಗಿನಿಂದ ಮಗು ಕಾಣದೇ ಹೋಗಿದ್ದರಿಂದ ಆತಂಕಗೊಂಡ ಪೋಷಕರು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಬಾಲಕನ ಬಗ್ಗೆ ಮಾಹಿತಿ ಸಿಕ್ಕರೆ ಸ್ಥಳೀಯ ಪೊಲೀಸ್ ಠಾಣೆಗೂ ತಿಳಿಸುವಂತೆ ಹೇಳಲಾಗಿತ್ತು. ಅಲ್ಲದೇ, ಬಾಲಕನ ಪತ್ತೆಗಾಗಿ ಹಳಿಯಾಳ, ಜೊಯಿಡಾ ಪೋಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿತ್ತು. ದಾಂಡೇಲಿ ನಗರದ ಅನೇಕ ಕಡೆ ಚೆಕ್ ಪೋಸ್ಟ್ ಗಳಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಮಸೀದಿಯಲ್ಲಿ ಕೂಡಾ ಘೋಷಣೆ ಮಾಡಿದ್ದರಿಂದ ಓಣಿಯ ತುಂಬೆಲ್ಲಾ ಸುದ್ದಿ ಹರಡಿ ಜನರು ಕೂಡಾ ಜಮಾಯಿಸಿದ್ದರು.

ಆದರೆ, ಸತತ ಐದು ಗಂಟೆಗಳ ಹುಡುಕಾಟದ ನಂತರ ಬಾಲಕ ಅಜಾನ್ ಸಿಕ್ಕಿದ್ದಾನೆ. ನಗರದಾದ್ಯಂತ ಕಾಣೆಯಾದ ಸುದ್ದಿಯಾಗಿದ್ದ ಬಾಲಕ ತನ್ನದೇ ಮನೆಯ ಮೊದಲ ಮಹಡಿಯ ಮೆಟ್ಟಿಲಿನ ಹಿಂಭಾಗ ಮಲಗಿ ನಿದ್ದೆಗೆ ಜಾರಿದ್ದ. ಯಾರೋ ಮನೆಯನ್ನು ಮತ್ತೆ ಶೋಧಿಸಿದಾಗ ಮಗು ಮೆಟ್ಟಿಲಿನ ಹಿಂಭಾಗ ಸಿಕ್ಕಿದ್ದು, ಬಾಲಕವನ್ನು ಕಾಣದೇ ಕಣ್ಣೀರು ಹಾಕ್ತಿದ್ದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಅಂದಹಾಗೆ, ಬಾಲಕನಿಗೆ ಹುಷಾರಿಲ್ಲದ ಕಾರಣ ತಾಯಿ ಔಷಧಿ ಕುಡಿಸುವ ವೇಳೆ ತನಗೆ ಬೇಡವೆಂದು ಹಠ ಮಾಡಿ ಪಕ್ಕದ ಮನೆಯ ಸಂಬಂಧಿಕರ ಮನೆಗೆ ತೆರಳಿದ್ದ. ಇತ್ತ ಬಟ್ಟೆ ಒಗೆಯಲು ತೆರಳಿದ್ದ ತಾಯಿ, ಬಾಲಕ ಗೇಟ್ ತೆಗೆದು ಹೊರಗೆ ಹೋಗೋದು ನೋಡಿದ್ದಳು. ಆದರೆ, ಬಾಲಕ ವಾಪಾಸ್ ಬಂದು ಮನೆಯ ಮೊದಲ ಮಹಡಿಯ ಮೆಟ್ಟಿಲ ಕೆಳಗೆ ಮಲಗಿರೋದನ್ನು ಆಕೆ ನೋಡಿರಲಿಲ್ಲ.

ಇದನ್ನೂ ಓದಿ: ಬಹ್ರೇನ್‌ನಲ್ಲಿ ಕತಾರ್ ನೌಕಾಪಡೆ ಸಿಬ್ಬಂದಿ ನೆಲೆಸಿದ್ದ ಕಟ್ಟಡಗಳ ಮೇಲೆ ಇರಾನ್ ದಾಳಿ

ಇದರಿಂದ ಆತಂಕಕ್ಕೆ ಒಳಗಾದ ತಾಯಿ ಮಗು ಕಿಡ್ನ್ಯಾಪ್ ಆಗಿದೆ ಅಂತಾ ಭಾವಿಸಿದ್ದಾಳೆ., ಈ ಸುದ್ದಿ ಎಲ್ಲೆಡೆ ಹಬ್ಬಿತ್ತು. ಕೊನೆಗೂ ತನ್ನದೇ ಮನೆಯೊಳಗೆ ಮಗು ಸಿಕ್ಕಿದ್ದರಿಂದ ಕುಟುಂಬದವರು ಸಂಬಂಧಿಕರು ಸಮಾಧಾನ ಪಟ್ಟಿದ್ದರೆ ಅತ್ತ ಮಗುವಿಗಾಗಿ ಚೆಕ್‌ಪೋಸ್ಟ್ ನಿರ್ಮಿಸಿದ ಪೊಲೀಸರಿಗೆ ನಗಬೇಕೋ ಅಥವಾ ಅಳಬೇಕೋ ಅನ್ನೋ ಸ್ಥಿತಿ ಎದುರಾಗಿತ್ತು.

ಇದನ್ನೂ ಓದಿ: ಪೇಟ್ರಿಯಾಟ್ ಸಿನಿಮಾದ ವಿವಾದವೇನು? ಮಮ್ಮುಟ್ಟಿ, ಮೋಹನ್‌ಲಾಲ್ ನಟನೆಯ ಈ ಸಿನಿಮಾವನ್ನು ಕೇರಳದಲ್ಲಿ ನಿಷೇಧಿಸಿದ್ದೇಕೆ?

Source link
ಪೋಷಕರಿಂದ ಮಗು ನಾಪತ್ತೆ ದೂರು: ಚೆಕ್‌ಪೋಸ್ಟ್ ನಿರ್ಮಿಸಿ ಪೊಲೀಸರ ಶೋಧ: 5 ಗಂಟೆ ಬಳಿಕ ಮನೆಯಲ್ಲೇ ಸಿಕ್ಕಿದ ಮಗು