ದಾವಣಗೆರೆ, (ಏಪ್ರಿಲ್ 05): ದಾವಣಗೆರೆ ದಕ್ಷಿಣದಲ್ಲಿ ಉಪ ಚುನಾವಣೆ (ದಾವಣಗೆರೆ ದಕ್ಷಿಣದಿಂದ ಚುನಾವಣೆ) ಪ್ರಚಾರದ ಕಾವು ಜೋರಾಗುತ್ತಿದೆ. ಈ ನಡುವೆ ಸಮರ್ಥ್ ಪರವಾಗಿ ಜನಾಭಿಪ್ರಾಯ ರೂಪಿಸುವ ಅನೇಕ ಮುಸ್ಲಿಂ ಸಮುದಾಯದ ಕಾಂಗ್ರೆಸ್ ನಾಯಕರ ಮೇಲೆ ಒತ್ತಡವೂ ಹೆಚ್ಚಾಗುತ್ತಿದೆ. ಟಿಕೆಟ್ ಸಂಬಂಧ ಸಚಿವ ಜಮೀರ್ ಅಹಮ್ಮದ್ ಖಾನ್ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ ನಡುವೆ ಮುಸುಕಿನ ಗುದ್ದಾಟ ನಡೆಯಿತು. ಕ್ಷೇತ್ರಕ್ಕೆ ಬರುವುದೇ ಬೇಡ ಎಂದು ಮಲ್ಲಿಕಾರ್ಜುನ, ಜಮೀರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಇದು ಮುಸ್ಲಿಂ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ, ಎಸ್ಎಸ್ಎಸ್ ಮಲ್ಲಿಕಾರ್ಜುನ ಜಮೀರ್ ಅಹಮ್ಮದ್ ಖಾನ್ ಅವರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಇನ್ನೊಂದೆಡೆ ತಮ್ಮ ಸಮುದಾಯಕ್ಕೆ ಟಿಕೆಟ್ ಕೈತಪ್ಪಿ, ಹಾಗೇ ಮಲ್ಲಿಕಾರ್ಜುನ ಅವರ ಮಾತಿನಿಂದ ಅಸಮಾಧಾನಗೊಂಡಿದ್ದ ಜಮೀರ್, ದಾವಣಗೆರೆ ಉಪಚುನಾವಣೆ ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದರು. ಜಮೀರ್ ಅನುಪಸ್ಥಿತಿಯಲ್ಲಿ ಶಾಸಕರಾದ ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್, ಎನ್ ಎ ಹ್ಯಾರಿಸ್, ಯಾಸೀನ್ ಖಾನ್ ಪಠಾಣ್ ಬೀಡುಬಿಟ್ಟಿದ್ದರು. ಆದರೂ ಸಹ ಕಾಂಗ್ರೆಸ್ ನಾಯಕರು ಹೋದಲ್ಲೆಲ್ಲ ಮುಸ್ಲಿಂ ಸಮುದಾಯದ ಜನರು, ಜಮೀರ್ ಅವರನ್ನು ಕರೆಯಿಸಿ ಎಂದು ಘೋಷಣೆ ಕೂಗಿದ ಪ್ರಸಂಗಗಳು ಸಹ ನಡೆದಿವೆ.
ಇದು ನಾಯಕರ ದೊಡ್ಡ ತಲೆನೋವಿಗೆ ಕಾರಣವಾಗಿತ್ತು. ಜಮೀರ್ ಅವರಿಂದ ಮುಸ್ಲಿಂ ಮತಗಳು ವಿಭಜನೆಯಾಗುವ ಆತಂಕಕ್ಕೂ ಕಾರಣವಾಗಿತ್ತು. ಹೀಗಾಗಿ ಹೈಕಮಾಂಡ್, ಜಮೀರ್ ಅವರನ್ನ ದಾವಣಗೆರೆ ತೆರಳಲು ಸೂಚಿಸಿದೆ. ಅದರಂತೆ ಇಂದು (ಏಪ್ರಿಲ್ 05) ಜಮೀರ್ ದಾವಣಗೆರೆ ದಕ್ಷಿಣ ಕ್ಷೇತ್ರದ ಅಖಾಡಕ್ಕಿಳಿದಿದ್ದಾರೆ. ಇನ್ನು ಇದೇ ವೇಳೆ ಮಲ್ಲಿಕಾರ್ಜುನ ಅವರು ಬೈದಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಮೀರ್, ಮಲ್ಲಿಕಾರ್ಜುನ ಅವರು ನನ್ನ ಅಣ್ಣ, ಸಿಟ್ಟಿನಲ್ಲಿ ಏನೋ ಬೈದಿದ್ದಾರೆ. ಈ ಮೂಲಕ ಮಲ್ಲಿಕಾರ್ಜುನ ಅವರನ್ನ ಕ್ಷಮಿಸಿ ಅವರ ಪುತ್ರನ ಪರ ಪ್ರಚಾರಕ್ಕಿಳಿದಿದ್ದಾರೆ.